ಕಾಳಪ್ಪ,ರಾಜ್ಯದಲ್ಲಿ ಗೋಮಾಂಸ ತಿನ್ನುವವರೆಷ್ಟಪ್ಪ?

 

ಕೆಲ ರಾಜಕಾರಣಿಗಳಿಗೆ ಒಂದು ರೀತಿಯ ತೆವಲಿರುತ್ತದೆ. ಯಾವುದಾದರೂ ಚರ್ಚೆಯಲ್ಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದಿದ್ದನ್ನು ಹೇಳಿ ಬಿಡುವುದು. ಅಂಥದ್ದನ್ನೆಲ್ಲ ಜನರು ಸುಮ್ಮನೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಬಾಯಿಗೆ ಬಂದ ಒಂದು ಅಂಕಿಯನ್ನು ಹೇಳಿ ಅದನ್ನೇ ಅಂಕಿ ಅಂಶ ಎಂದು ಹೇಳಿಬಿಡುವುದು. ಕೊನೆಗೆ ಇದರ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಉತ್ತರ ಕೊಡದೇ ಓಡಿ ಹೋಗುವುದು ಅಥವಾ ಖಾಲಿ ಪೀಲಿ ಉತ್ತರ ಕೊಟ್ಟು ಜಾರಿಕೊಳ್ಳುವುದು.

ಇಂಥವರ ಸಾಲಿಗೆ ಈಗ ಮತ್ತೊಬ್ಬ ಮಹಾನುಭಾವರು ಸೇರಿಕೊಂಡಿದ್ದಾರೆ. ಅವರೇ ಕಾಂಗ್ರೆಸ್‌ನ ವಕ್ತಾರ ಬ್ರಿಜೇಶ್ ಕಾಳಪ್ಪ. ಮೊದಲಿನಿಂದಲೂ ಅಷ್ಟೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವುದೆಂದರೆ ಬ್ರಿಜೇಶ್ ಕಾಳಪ್ಪರಿಗೆ ಅದೇನೋ ಪ್ರೀತಿ. ಸಹಜವಾಗಿ ಎಲ್ಲರಂತೆ ಅವರೂ ಇದ್ದು ಬಿಡಬಹುದು. ಆದರೆ ಬ್ರಿಜೇಶ್ ಹಾಗೆ ಮಾಡುವುದಿಲ್ಲ. ಏನಾದರೂ ಒಂದು ಹಲುಬಿ ರಾಡಿ ಮಾಡಿ, ವಿವಾದವಾಯಿತಾ ಇಲ್ಲವಾ ಎಂದು ನೋಡಿಕೊಂಡೇ ಮಲಗುತ್ತಾರೆ. ಇವರು ಈಗ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಅದೇನೆಂದರೆ, ಈ ಬೃಹಸ್ಪತಿಯ ಪ್ರಕಾರ ಕರ್ನಾಟಕದ ಶೇ.40ರಷ್ಟು ಜನಸಂಖ್ಯೆ ಗೋಮಾಂಸ ತಿನ್ನುತ್ತದಂತೆ. ಕರ್ನಾಟಕದ 40% ಜನತೆ ಗೋಮಾಂಸ ತಿನ್ನುವಾಗ ಇವರು ಯಾವಾಗ ಹೋಗಿ ಮೂಳೆಯನ್ನು ಪಕ್ಕಕ್ಕೆ ಎತ್ತಿಟ್ಟು ಲೆಕ್ಕ ಹಾಕಿಕೊಂಡು ಬಂದರು ಎಂಬುದೇ ಕಾಡುತ್ತಿರುವ ಪ್ರಶ್ನೆ. ವಿವಾದ ಶುರುವಾಗಿದ್ದು ಹೇಗೆ: ‘ಯಾರಾದ್ರೂ ಗೋ ಮಾಂಸ ತಿನ್ನುವವರು ಗೋಮಾಂಸ ತಿನ್ನಬೇಕಿದ್ದರೆ, ಅವರ ಮನೆಯಲ್ಲಿ ತಿಂದು ಸಾಯಲಿ’ ಎಂಬ ಮಾತನ್ನು ಯಡಿಯೂರಪ್ಪನವರು ಹೇಳಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಬಾಲಂಗೋಚಿಯಾಗಿ ‘ಇಂಥ ಮಾತನ್ನಾಡುತ್ತಿರುವುದು ಮುಂದೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ.

ಕರ್ನಾಟಕದ ಶೇ.40ರಷ್ಟು ಜನಸಂಖ್ಯೆ ಗೋಮಾಂಸ ತಿನ್ನುತ್ತಾರೆ ಮತ್ತು ಈಶಾನ್ಯ ಭಾರತದಲ್ಲಿ 100% ಜನರು ಗೋಮಾಂಸ ತಿನ್ನುತ್ತಾರೆ. ಇನ್ನು ಗೋವಾ ಮತ್ತು ಕೇರಳದವರು ಸಹ ಬೀಫ್ ತಿನ್ನುತ್ತಾರೆ. ಇವರೆಲ್ಲ ಸಾಯಬೇಕೆ?’ ಎಂದು ಸುಮ್ಮನಿರಲಾಗದೇ ಇರುವೆ ಬಿಟ್ಟುಕೊಂಡಿದ್ದಾರೆ. ನಿಜವಾಗಿಯೂ ಒಬ್ಬ ವಕ್ತಾರನಾಗಿ ಮಾತನಾಡುವುದು ಬೇರೆ, ವಕ್ತಾರನನ್ನಾಗಿ ನೇಮಿಸಿದ್ದಾರೆ ಎಂಬ ಕಾರಣಕ್ಕೆ ಏನೋ ವಟಗುಟ್ಟುವುದು ಬೇರೆ. ಬ್ರಿಜೇಶ್ ಕಾಳಪ್ಪ ಎರಡನೆಯ ವರ್ಗದ ಆಸಾಮಿ. 40% ಜನತೆ ಗೋಮಾಂಸ ತಿಂದಿದ್ದಾರೆ ಎಂದು ಅವರು ಹೇಗೆ ಹೇಳುತ್ತಾರೆ. ಸುಮ್ಮನೆ ಬಾಯಿಗೆ ಬಂದ ಹಾಗೆ ಹಲುಬುವುದಕ್ಕೆ ಇವರನ್ನು ವಕ್ತಾರರನ್ನಾಗಿ ಮಾಡಿಕೊಂಡಿದ್ದಾರೆ ಎಂದಾದರೆ, ಖಂಡಿತವಾಗಿಯೂ ಇನ್ನು ಒಂದು ವರ್ಷದೊಳಗೆ ಕಾಂಗ್ರೆಸ್‌ನನ್ನು ತೊಳೆಯುವುದಕ್ಕೆ ಗುತ್ತಿಗೆ ತೆಗೆದುಕೊಂಡಿದ್ದಾರೆ ಎಂದೇ ಅರ್ಥ.

ಬ್ರಿಜೇಶ್ ಗೊಮಾಂಸ ತಿನ್ನುತ್ತಾರೋ ಇಲ್ಲವೂ ಗೊತ್ತಿಲ್ಲ. ಆದರೆ ಬ್ರಿಜೇಶ್ ಈ ವಿಚಾರದಲ್ಲಿ ಎಷ್ಟು ದಡ್ಡ ಶಿಖಾಮಣಿ ಎಂದು ಅವರ ಈ ಒಂದು ಹೇಳಿಕೆಯೇ ಸಾಬೀತು ಮಾಡುತ್ತದೆ. ಯಾವುದಾದರೂ ಒಂದು ಅಂಕಿ ಅಂಶ ಕೊಡಬೇಕೆಂದರೆ, ಸರ್ವೇ ಮಾಡಿದವರ್ಯಾರು ಎಂದು ಹೇಳಬೇಕು. ಬ್ರಿಿಜೇಶ್ ಅದನ್ನು ಹೇಳಿಲ್ಲ. ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್(ಎನ್‌ಎಸ್‌ಎಸ್‌ಒ) ಮೂರು ಸರ್ವೇ ವರದಿಗಳನ್ನು ನೋಡಿದರೂ ಬ್ರಿಜೇಶ್ ಕಾಳಪ್ಪನವರ ಬುರುಡೆ ಭವಿಷ್ಯಕ್ಕೆ ದಾಖಲೆ ಸಿಗಲಿಲ್ಲ. ಎನ್‌ಎಸ್ ಎಸ್‌ಒ ಅವರು 1999-2000ರಂದು ಮಾಡಿದ್ದ ಸರ್ವೇ ಪ್ರಕಾರ ಕರ್ನಾಟಕದಲ್ಲಿ ಗೋಮಾಂಸ ಅಥವಾ ಎಮ್ಮೆಯ ಮಾಂಸ ತಿನ್ನುವವರ ಸಂಖ್ಯೆ 38,69,377. ಅಂದರೆ ಒಂದು ಕೋಟಿಯೂ ಇಲ್ಲ. ಇನ್ನು ಬ್ರಿಜೇಶ್ ಕಾಳಪ್ಪ 2004-05ರ ಸರ್ವೇ ಏನಾದ್ರೂ ನೋಡಿದ್ದಾರಾ ಎಂದು ನೋಡಿದರೆ ಅದೂ ಇಲ್ಲ.

ಆ ಸರ್ವೇ ಪ್ರಕಾರ ರಾಜ್ಯದಲ್ಲಿ 38,19,065 ಜನರು ಮಾತ್ರ ಗೋಮಾಂಸ ಅಥವಾ ಎಮ್ಮೆಯ ಮಾಂಸ ತಿನ್ನುತ್ತಾರೆ ಎಂದು ಎನ್‌ಎಸ್‌ಎಸ್‌ಒ ಹೇಳುತ್ತದೆ. ಇನ್ನು 2011-12ರ ಸರ್ವೇಯ ಪ್ರಕಾರ 24,99,514 ಜನರು ಗೋಮಾಂಸ ಅಥವಾ ಎಮ್ಮೆಯ ಮಾಂಸ ತಿನ್ನುತ್ತಾರೆ. ಹಾಗೆ ನೋಡಿದರೆ ಗೋಮಾಂಸ ಅಥವಾ ಎಮ್ಮೆಯ ಮಾಂಸ ತಿನ್ನುವ ಸಂಖ್ಯೆ ಒಂದೊಂದು ಸರ್ವೇಗೂ ಕಡಿಮೆಯಾಗುತ್ತಿದೆ. ಸರ್ವೇ ವರದಿಯೇ ಹೀಗಿರುವಾಗ ಬ್ರಿಜೇಶ್ ಕಾಳಪ್ಪರಿಗೆ ಯಾವ ಮುಠ್ಠಾಳ 40% ಬೀಫ್ ತಿನ್ನುತ್ತಾರೆ ಎಂದು ಹೇಳಿದ? ಅಲ್ಲಿಗೆ 40% ಎಂಬ ಅಂಕಿ ಅಂಶವನ್ನು ಬ್ರಿಜೇಶ್ ಬಾಯಿ ಚಟಕ್ಕೆ ಹೇಳಿದ್ದಾರೆ ಎಂದಾಯಿತು. ಒಬ್ಬ ಲಾಯರ್ ಹಾಗೆ ದಾಖಲೆ ಇಟ್ಟುಕೊಂಡು ಮಾತಾಡ್ರೀ ಬ್ರಿಜೇಶ್ ಎಂದರೆ, ಸುಮ್ಮನೆ ಏನೇನೋ ಗೀಚಿಕೊಂಡು ನಿಮ್ಮ ಮರ್ಯಾದೆಯನ್ನು ನೀವೇ ಯಾಕೆ ತೆಗೆದುಕೊಳ್ಳುತ್ತೀರಿ? ಬಹುಶಃ ಇವರು ರಾಜ್ಯ ಸರಕಾರಕ್ಕೆ ಕಾನೂನು ಸಲಹೆಗಾರರಾಗಿದ್ದಾಗ ಕಾವೇರಿ ಬಿಕ್ಕಟ್ಟಿನಲ್ಲಿ ಇಂಥದ್ದೇ ವಾದ ಮಾಡಿ ತಮಿಳು ನಾಡಿಗೆ ನೀರು ಹಾಯಿಸಿ ಅಲ್ಲಿನ ರೈತರನ್ನು ಉದ್ಧಾರ ಮಾಡಿದ್ದಾರಾ ಎಂಬುದೇ ಡೌಟು.

ಇವರ ಈ ದಡ್ಡತನವನ್ನು ಅನೇಕರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಕ್ಕೆ ‘ನಮ್ಮ ರಾಜ್ಯದಲ್ಲಿ ಯಾವ್ಯಾವ ಜಾತಿ ಎಷ್ಟೆಷ್ಟಿದೆ ಎಂಬುದರ ಅರಿವಿದ್ದರೆ ಇಂಥ ಪೋಸ್ಟ್‌ ಮಾಡಿ ನಿಮ್ಮನ್ನು ನೀವೇ ಕತ್ತೆಯ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ’ ಎಂದಿದ್ದಾರೆ. ಹಳೆಯ ಲೆಕ್ಕದಂತೆ ನಮ್ಮ ರಾಜ್ಯದ ಜನಸಂಖ್ಯೆ ಆರುವರೆ ಕೋಟಿ ಎಂದು ಪರಿಗಣಿಸಿದರೂ, ಸಿದ್ದರಾಮಯ್ಯನವರೇ ಮಾಡಿರುವ ಜಾತಿಗಣತಿಯ ಪ್ರಕಾರ ಪರಿಶಿಷ್ಟ ಜಾತಿ 18%, ಪರಿಶಿಷ್ಟ ಪಂಗಡ 7% ಮತ್ತು 12.5% ಮುಸ್ಲಿಮರಿದ್ದಾರೆ. ಬ್ರಿಜೇಶ್ ಕಾಳಪ್ಪನವರ ಮಾನ ಮರ್ಯಾದೆ ಉಳಿಸುವುದಕ್ಕಾದರೂ ಎಲ್ಲರೂ ಕಡ್ಡಾಯವಾಗಿ ಗೋಮಾಂಸ ತಿನ್ನುತ್ತಾರೆ ಎಂದರೂ ಒಟ್ಟು 40% ಆಗುವುದಿಲ್ಲ. ಅಸಲಿಗೆ ಇಂದಿಗೂ ಬಹುತೇಕ ದಲಿತರು, ಮುಸ್ಲಿಮರು ಗೋಮಾಂಸ ತಿನ್ನುವುದೇ ಇಲ್ಲ. ಗೋಮಾಂಸದ ಬಗ್ಗೆ ಅಸಲಿ ವಿಷಯ ಹೀಗಿದ್ದರೂ ಕಾಳಪ್ಪ ಮತ್ತೆ ಅದನ್ನೇ ಸಮರ್ಥಿಸಿಕೊಳ್ಳುತ್ತಾ ‘ಗೋಮಾಂಸದ ರೇಟು ಎಲ್ಲದಕ್ಕಿಂತಲೂ ಅತ್ಯಂತ ಕಡಿಮೆ ಇದೆ. ಅದನ್ನು ಕೇವಲ ಹಾಡ್ ವರ್ರ್ಕ್ ಮಾಡುವವರು ಪ್ರೋಟೀನ್‌ಗಾಗಿ ತಿನ್ನುತ್ತಾರೆ. ಎಲ್ಲರೂ ದೇವಸ್ಥಾನದಲ್ಲಿ ಶ್ಲೋಕ ಹೇಳಿ ಜೀವನ ಸಾಗಿಸುವುದಿಲ್ಲ’ ಎಂದು ಅವರು ಉಡಾಫೆ ಮಾಡುತ್ತಾರೆ.

ಮೈ ಕೈ ಬಗ್ಗಿಸಿ ದುಡಿಯುವವರು ಮುದ್ದೆ ತಿನ್ನುತ್ತಾರೆ ಎಂದು ಕೇಳಿದ್ದೆ. ಶಕ್ತಿವಂತ ‘ಇದು ಮುದ್ದೆ ತಿಂದ ದೇಹ ಕಣೋ’ ಎನ್ನುವುದನ್ನು ಕೇಳಿದ್ದೇವೆಯೇ ಹೊರತು ‘ಇದು ಗೋ ಮಾಂಸ ತಿಂದ ದೇಹ ಕಣೋ’ ಎಂದು ಹೇಳಿದ್ದನ್ನು ಕೇಳಿದ್ದೀರಾ? ಇದನ್ನು ತಿನ್ನುವವರು ಬಡವರು ಎಂದುಕೊಂಡರೂ 1 ಕೆ.ಜಿ ಗೋಮಾಂಸಕ್ಕೆ 300 ರು. ಅದೇ ಚಿಕನ್ 160ರು ಕೆ.ಜಿ. ಈಗ ಹಾರ್ಡ್‌ವರ್ಕ್ ಮಾಡುವ ಬಡವ ಚಿಕನ್ ತಿನ್ನುತ್ತಾನೋ ಗೋಮಾಂಸ ತಿನ್ನುತ್ತಾನೋ? ಅದೆಲ್ಲ ಮರೆತುಬಿಡಿ, ಮೊನ್ನೆ ಸರಕಾರಿ ಕಚೇರಿಯಲ್ಲಿ ಗೋಮಾಂಸ ತಿಂದ ಭಗವಾನ್ ಏನು ಕಿತ್ತು ಗುಡ್ಡೆ ಹಾಕಿದ್ದಾರೆ? ಮೂರು ಹೊತ್ತೂ ಹಿಂದೂ ಧರ್ಮವನ್ನು ಬಯ್ಯುವ ಮಹೇಶ್ ಚಂದ್ರಗುರು ಗೋಮಾಂಸ ತಿನ್ನುತ್ತಾರಲ್ಲ, ಅವರೇನು ಹಾರ್ಡ್ ವರ್ಕ್ ಮಾಡಿದ್ದಾರೆ?

ಬ್ರಿಜೇಶ್ ಕಾಳಪ್ಪ ಒಬ್ಬ ಜೋಕರ್‌ನಂತೆ ಮಾತಾಡಿ ಎಲ್ಲರನ್ನು ನಗಿಸಬಹುದೇ ಹೊರತು ಅಂಕಿ ಅಂಶಗಳು, ದಾಖಲೆಗಳನ್ನಿಟ್ಟುಕೊಂಡು ಸೀರಿಯಸ್ ಆಗಿ ಮಾತಾಡುವ ವ್ಯಕ್ತಿಯಲ್ಲ. ಅದಕ್ಕೆ ಮೋದಿ ಬಗ್ಗೆ ಅವರು ಹಾಕಿಕೊಂಡಿರುವ ಪೋಸ್ಟ್‌‌ಗಳೇ ಸಾಕ್ಷಿ. ಇತ್ತೀಚೆಗೆ ಇವರು ರಿಪಬ್ಲಿಕ್ ಚಾನೆಲ್‌ನಲ್ಲಿ ಹೀಗೇ ಎಬರಾ ತಬರಾ ಮಾತಾಡಿ, ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಳಿ ಉಗಿಸಿಕೊಂಡಿದ್ದರು. ಅಂದು ಕೇಳಿದ ಪ್ರಶ್ನೆಗೆ ಬ್ರಿಜೇಶ್ ಉತ್ತರ ಕೊಡುವುದನ್ನು ಬಿಟ್ಟು ನಿಮ್ಮದು ಬಿಜೆಪಿ ಚಾನೆಲ್ ಎಂದಾಗ, ಫೋನ್ ತೆಗೆದುಕೊಂಡ ಅರ್ನಾಬ್, ಬ್ರಿಜೇಶ್‌ಗೆ ಹಲೋ, ಹಾಯ್ ಎನ್ನಲೂ ಬಿಡಲಿಲ್ಲ. ಅರ್ನಾಬ್ ಬಯ್ದ ಬಯ್ಗುಳಕ್ಕೆ ಬ್ರಿಜೇಶ್ ಕಾಳಪ್ಪ ಪತರಗುಟ್ಟಿ ಫೋನ್ ಡಿಸ್ಕನೆಕ್ಟ್‌ ಮಾಡಿದ್ದರು. ಅರ್ನಾಬ್ ನೇರವಾಗಿ ಬ್ರಿಜೇಶ್‌ರ ಮಾನಸಿಕ ಸ್ಥಿತಿ ಸರಿ ಇಲ್ಲ, ಹೋಗಿ ಹುಚ್ಚಾಸ್ಪತ್ರೆಯಲ್ಲಿ ತೋರಿಸಿಕೊಳ್ಳಿ ಎಂದು ಹೇಳಿದ್ದನ್ನು ಇಡೀ ದೇಶವೇ ನೋಡಿತ್ತು.

ಆಮೇಲೆ ಈ ಫೇಸ್‌ಬುಕ್ ಹುಲಿ ವಿಡಿಯೊ ಅಪ್ಲೋಡ್ ಮಾಡಿ ನಾನು ಕೇಸ್ ಹಾಕುತ್ತೇನೆ ಲೊಟ್ಟೆ ಲುಸ್ಕು ಎಂದು ಬಡಬಡಾಯಿಸಿತ್ತು. ಇದರ ಅರ್ಥ ಇಷ್ಟೇ, ಬ್ರಿಜೇಶ್‌ರ ತಲೆಯಷ್ಟೇ ಅವರ ವಿಚಾರಗಳೂ ಬೋಳೇ! ಆದರೆ ನಮ್ಮ ಗ್ರಹಚಾರ ನೋಡಿ, ಇಂಥವರಿಗೆ ನಾವು ಕಟ್ಟುವ ತೆರಿಗೆಯಿಂದಲೇ ಸಂಬಳ ಸಿಗುತ್ತದೆ ಎಂಬುದು ನಮ್ಮ ಪ್ರಜಾಪ್ರಭುತ್ವದ ದುರಂತವೇ ಸರಿ. ಕಾವೇರಿ ಬಿಕ್ಕಟ್ಟಿನಲ್ಲಿ ರಾಜ್ಯದ ಪರ ವಾದಿಸಲು ಇವರು ತೆಗೆದುಕೊಂಡ ಫೀಜು ಬರೋಬ್ಬರಿ 31.42 ಲಕ್ಷ ರುಪಾಯಿ ಎಂದು ಆರ್ ಟಿಐಯಿಂದಲೇ ತಿಳಿದುಬಂದಿದೆ. ಕೋರ್ಟ್‌ನಲ್ಲೂ ಇಂಥದ್ದೇ ಏನಾದರೂ ಪಾಯಿಂಟ್ ಹಾಕಿ ತಮಿಳುನಾಡಿಗೆ ನೀರು ಬಿಡಿಸುವ ಬದಲು, ಬ್ರಿಜೇಶ್ ಅವರಿಗೆ ಬಂದ ಹಣದಲ್ಲಿ ಬಡವರಿಗೆ ನೀರು ಕೊಟ್ಟಿದ್ದರೂ ಎಷ್ಟೋ ಜನರು ನೆಮ್ಮದಿಯಿಂದ ನೀರು ಕುಡಿಯುತ್ತಾ, ನಿತ್ಯ ಸ್ನಾನ ಮಾಡಬಹುದಿತ್ತು.

ನೀವು ಮಾಡಿದ್ದು ಅಷ್ಟರಲ್ಲೇ ಇದೆ ಎಂದೇ ಇವರನ್ನು ಕಾನೂನು ಸಲಹೆಗಾರರ ಪೋಸ್ಟ್‌‌ನಿಂದ ಕಿತ್ತು ಹಾಕಿದ್ದು ಎಂಬ ಸುದ್ದಿ ಕೇಳಿಬರುತ್ತಿರುವಾಗಲೇ, ಬ್ರಿಜೇಶ್ ತಾನೇ ರಾಜೀನಾಮೆ ನೀಡಿದ್ದೇನೆ ಎಂದು ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಅದಕ್ಕೆ ಸರಿಯಾಗಿ ವಕ್ತಾರ ಎಂಬ ಜವಾಬ್ದಾರಿ ಸಿಕ್ಕಿದ್ದು, ಸ್ವಲ್ಪ ಸಮಾಧಾನ ತಂದಿತಷ್ಟೇ. ಪಿ ಚಿದಂಬರಂ, ಅಶ್ವನಿ ಕುಮಾರ್, ಮನೀಶ್ ತಿವಾರಿ, ಕಪಿಲ್ ಸಿಬಲ್ ಇತ್ಯಾದಿ ಲಾಯರ್‌ಗಳು ಕಾಂಗ್ರೆಸ್‌ನ್ನು ಇಷ್ಟು ವರ್ಷ ತೊಳೆದರು. ಈಗ ಕರ್ನಾಟಕ ಸರಕಾರವನ್ನು ತೊಳೆಯುವುದಕ್ಕೆ ಬ್ರಿಜೇಶ್ ಕಾಳಪ್ಪ ಒಬ್ಬರು ಉಳಿದುಕೊಂಡಿದ್ದಾರೆ ಅಷ್ಟೇ.

ಏನೋ ಹೋಗಲಿ ಪಾಪ ಒಂದು ವರ್ಷ ತಾನೇ ನಮ್ಮ ಸರಕಾರ ಇರುವುದು, ಎಂದು ಇವರನ್ನು ವಕ್ತಾರರನ್ನಾಗಿ ಇಟ್ಟುಕೊಂಡರೂ ಇಂಥದ್ದೇ ಕಾಮಿಡಿ ಮಾಡುತ್ತಾ ಸರಕಾರವನ್ನು ಮತ್ತಷ್ಟು ಮುಜುಗರಕ್ಕೀಡು ಮಾಡುತ್ತಾರೆಯೇ ವಿನಾ ಇವರ ವಕ್ತಾರಿಕೆಯಿಂದ ಕಾಂಗ್ರೆಸ್ ಗಾಗುವ ದೊಡ್ಡ ಅನುಕೂಲ ಅಂದ್ರೆ ಅಷ್ಟೇ. ಮೊದಲೆಲ್ಲ ಆಸ್ಥಾನದಲ್ಲಿ ಗಂಭೀರವಾಗಿ ಮಾತಾಡುವ ಒಬ್ಬರನ್ನು, ಹಾಸ್ಯ ಮಾಡುವುದಕ್ಕೆ ವಿದೂಷಕನನ್ನು ನೇಮಿಸಿಕೊಳ್ಳುತ್ತಿದ್ದರು. ಈಗ ಕಾಂಗ್ರೆಸ್ ಪಕ್ಷವೆಂಬ ಆಸ್ಥಾನದಲ್ಲಿ ವಕ್ತಾರನೂ ವಿದೂಷಕನ ಪಾತ್ರ ನಿರ್ವಹಿಸುತ್ತಿದ್ದಾನಷ್ಟೇ.

Leave a Reply

Copyright©2021 Chiranjeevi Bhat All Rights Reserved.
Powered by Dhyeya