ರಾಜಕೀಯದಲ್ಲಿನ್ನೂ ಮೂರನೇ ಕ್ಲಾಸು, ತಗೋತಾರೆ ಮೋದಿಗೇ ಕ್ಲಾಸು!

 

ಪಕ್ಷದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ರಮ್ಯಾ ಅವರಿಗೆ ಅಭಿನಂದನೆಗಳು. ಪಕ್ಷದ ಸಾಮಾಜಿಕ ಜಾಲತಾಣದ ಅಕೌಂಟ್‌ಗಳನ್ನು ನಿಭಾಯಿಸುವ ಸಂಪೂರ್ಣ ಜವಾಬ್ದಾರಿ ಈಗ ರಮ್ಯಾ ಕೈಯಲ್ಲಿದೆ. ಹಾಗಾಗಿ, ಅವರ ಕಾರ್ಯವೈಖರಿ ಹೇಗಿದೆ ನೋಡೋಣ ಮತ್ತು ಅಭಿನಂದನೆ ತಿಳಿಸೋಣ ಎಂದು ಟ್ವಿಟರ್‌ನಲ್ಲಿ ಹುಡುಕಿದೆ. ಆಗ ಟ್ವಿಟರ್, ‘ನೀವು ರಮ್ಯಾರ ಟ್ವೀಟ್‌ಗಳನ್ನು ನೋಡದಂತೆ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ’ ಎಂಬ ಸಂದೇಶ ತೋರಿಸಿತು. ರಮ್ಯಾ ಅವರ ಟ್ವಿಟರ್ ಖಾತೆ ನೋಡಿ ಎಂದು ಇನ್ನಿಬ್ಬರ ಬಳಿ ಹೇಳಿದೆ. ಅವರಿಗೂ ಅದೇ ಮೆಸೆಜ್..

ಒಟ್ಟು ಹತ್ತು ಜನರ ಬಳಿ ಕೇಳಿದರೂ ಅವರಿಗೂ ಇದೇ ಮೆಸೆಜ್. ಇಂಥ ರಮ್ಯಾಗೆ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಜವಾಬ್ದಾರಿ ಕೊಟ್ಟಿದ್ದಾರೆಂಬುದೇ ಹಾಸ್ಯಾಸ್ಪದ. ಜನರ ಟೀಕೆ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದಕ್ಕಾಗದೆ, ಕೇವಲ ಹೊಗಳುವವರನ್ನು ಮಾತ್ರ ಟ್ವಿಟರ್‌ನಲ್ಲಿ ಇಟ್ಟುಕೊಳ್ಳುವ ರಮ್ಯಾಗೆ ಯಾವ ಪುರುಷಾರ್ಥಕ್ಕಾಗಿ ಈ ಸ್ಥಾನ? ಇರಲಿ ಅದು ಪಕ್ಷದ ಆಂತರಿಕ ವಿಚಾರ. ರಮ್ಯಾಗೆ ಈ ಜವಾಬ್ದಾರಿ ಕೊಟ್ಟ ಮೇಲೆ ಸುಮ್ಮನೆ ಯಾರದ್ದಾದರೂ ಬಗ್ಗೆ ತಲೆಬುಡವಿಲ್ಲದೇ ಏನಾದರೂ ಒದರಬೇಕು ಎಂದು ಹೇಳಿ ಕಳಿಸಿದ್ದಾರೋ ಏನೋ? ಅದಕ್ಕೆ ಮೊನ್ನೆ ದೆಹಲಿಯಲ್ಲಿ ಒಂದಷ್ಟು ಮಾತುಗಳನ್ನಾಡಿದ್ದಾರೆ.

‘ಮೋದಿ ಸರಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ, ಕರ್ನಾಟಕ 4,702 ಕೋಟಿ ರು. ಬರಪರಿಹಾರ ಕೇಳಿದರೆ ಕೇವಲ 1,786 ಕೋಟಿ ರು. ನೀಡಿದ್ದಾರೆ. ತಮಿಳುನಾಡಿನಲ್ಲಿ ಭೀಕರ ಬರಗಾಲವಿದೆ ಆದರೆ ಪ್ರಧಾನಿ ಅಲ್ಲಿಗೆ ಭೇಟಿ ನೀಡಿಲ್ಲ. ಶ್ರೀಲಂಕಾಗೆ ಹೋಗಿದ್ದಾರೆ’ ಎಂದಿದ್ದಾರೆ. ಅಷ್ಟಕ್ಕೂ ರಮ್ಯಾ ಅವರ ಸಮಸ್ಯೆಯೇನು? ಮೋದಿ ಶ್ರೀಲಂಕಾಕ್ಕೆ ಹೋಗಿದ್ದೇ, ಕರ್ನಾಟಕಕ್ಕೆ ಹಣ ಕೊಡದಿದ್ದದ್ದೇ ಅಥವಾ ತಮಿಳುನಾಡಿಗೆ ಭೇಟಿ ನೀಡದಿದ್ದದ್ದೇ? ರಮ್ಯಾ ನೀವು ಬೇರೆಯವರನ್ನು ಪ್ರಶ್ನಿಸುವ ಮುನ್ನ ನಮ್ಮ ರಾಜ್ಯದಲ್ಲಿ ಏನಾಗಿದೆ ಎಂದು ಅವಲೋಕಿಸಿದ್ದೀರಾ? ಆಗಾಗ ಲಂಡನ್ ಟೂರ್ ಮಾಡಿಕೊಂಡು ಬರುವ ರಮ್ಯಾಗೆ ಕರ್ನಾಟಕದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ್ದಕ್ಕೆ ಹೇಳುತ್ತಿದ್ದೇನೆ, ಕರ್ನಾಟಕದಲ್ಲೇನು ಈಗ ಫಸಲು ಬಂದು, ರೈತರೆಲ್ಲ ಪಾರ್ಟಿ ಮಾಡುತ್ತಿಲ್ಲ.

ಇಲ್ಲಿಯೂ ಬರಗಾಲವಿದೆ. ಆದರೆ ಸಿದ್ದರಾಮಯ್ಯನವರು ದುಬೈಗೆ ಹೋಗಿದ್ದರಲ್ಲ? ಅದನ್ನು ಮರೆತುಬಿಟ್ಟರೇನು? ಅವರೂ ನಮ್ಮ ಕರ್ನಾಟಕದವರೇ ಅಲ್ಲವೇ? ಈಗ ರಮ್ಯಾ ಅವರು ಹೇಳಬಹುದು, ನಮ್ಮ ರಾಜ್ಯದಲ್ಲಿ ರಾಜಕಾರಣಿಗಳು ಬರ ಅಧ್ಯಯನ ನಡೆಸಿದ್ದಾರೆ ಎಂದು. ಹೌದು, ಅಧ್ಯಯನ ಎಂಬ ಬೋರ್ಡ್ ನೇತು ಹಾಕಿಕೊಂಡು ಕಲಬುರಗಿ ಸೇರಿದಂತೆ ಇನ್ನಿತರ ಕಡೆ ಓಡಾಡಿದ್ದೇನೋ ನಿಜ, ಆದರೆ ಹೇಗೆ? ಮಂತ್ರಿಗಳ ಕಾರು ಬರುತ್ತಿದ್ದರೆ, ಟಾರ್ ಹಾಕಿಸದ ರೋಡ್‌ನಲ್ಲಿ ಮಣ್ಣು ಏಳಬಾರದು ಎಂದು ಟ್ಯಾಂಕರ್ ತರಿಸಿ, ರಸ್ತೆಯ ತುಂಬಾ ನೀರು ಚೆಲ್ಲಿದ್ದರು. ನೀರು ಮೇವಿಲ್ಲದೇ ಹಸುಗಳು ಕೊನೆಯುಸಿರೆಳೆಯುತ್ತಿವೆ.

ರೈತ ಇವನ್ನೆಲ್ಲ ನೋಡುವುದಕ್ಕಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಆದರೆ ಇವನ್ನೆಲ್ಲ ಮರೆತು, ಸಿದ್ದರಾಮಯ್ಯನವರು ಶಿಸ್ತಾಗಿ ಕೋಟು ಧರಿಸಿ ದುಬೈನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಾರಲ್ಲ, ಇವನ್ನೆಲ್ಲ ರಮ್ಯಾ ಮರೆತಿದ್ದಾರಾ? ಒಮ್ಮೆ ಹೇಳಿ ಬಿಟ್ಟರೆ ಸಿಕ್ಕಿರುವ ಹೊಸ ಸ್ಥಾನವನ್ನೂ ಕಿತ್ತುಕೊಂಡಾರು ಎಂಬ ಭಯವೊ ಅಥವಾ ನರೇಂದ್ರ ಮೋದಿಯ ಬಗ್ಗೆ ಏನೋ ಬಾಯಿಗೆ ಬಂದ ಹಾಗೆ ಹೇಳುವುದಕ್ಕಷ್ಟೇ ನಿಮ್ಮನ್ನು ದೆಹಲಿಗೆ ಕರೆಸಿಕೊಂಡಿದ್ದಾರೋ? ಸಿದ್ದರಾಮಯ್ಯನವರ ಸರಕಾರ ಬರುವುದಕ್ಕಿಂತ ಮುಂಚೆ ನಮ್ಮ ರಾಜ್ಯದ ತಲೆಯ ಮೇಲೆ ಇದ್ದ ಸಾಲ ಮೂವತ್ತು ಸಾವಿರ ಕೋಟಿ ರುಪಾಯಿ. ಆದರೆ ಕೇವಲ ನಾಲ್ಕೇ ವರ್ಷಗಳಲ್ಲಿ ಸಾಲದ ಮೊತ್ತವನ್ನು ತೊಂಬತ್ತು ಸಾವಿರ ಕೋಟಿಯ ಗಡಿಗೆ ತಂದು ನಿಲ್ಲಿಸುವುದರ ಮೂಲಕ ದಾಖಲೆ ಮೆರೆದಿದ್ದಾರೆ. ಅರವತ್ತು ಸಾವಿರ ಕೋಟಿಯಲ್ಲಿ ರೈತರಿಗೆಷ್ಟು ಕೊಟ್ಟಿದ್ದೀರಿ ಎಂದು ಕೇಳುವ ತಾಕತ್ತು ರಮ್ಯಾಗೇಕಿಲ್ಲ?

ವಿವಿಧ ಯೋಜನೆಗಳ ಅನ್ವಯ ಬಡವರಿಗೆ 1.4 ಲಕ್ಷ ಮನೆಗಳನ್ನು ನಿರ್ಮಿಸಲು ಕೇಂದ್ರ ಸರಕಾರ ಹಣ ಮಂಜೂರು ಮಾಡಿತ್ತು. ಆದರೆ ಇದುವರೆಗೂ ಕಟ್ಟಿರುವ ಮನೆಗಳು ಕೇವಲ 10,000 ಮಾತ್ರ! ಇದರ ಲೆಕ್ಕ ಏನಾಯಿತು? ರಮ್ಯಾ ಕೇಳಲ್ಲ. ಅವರಿಗೆ ಹೇಳಿದ್ದಷ್ಟನ್ನು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲವಲ್ಲ. ರಮ್ಯಾ ಅವರೇ, ಸಿದ್ದರಾಮಯ್ಯನವರ ಕತೆ ಸದ್ಯಕ್ಕೆ ಬದಿಗಿಡೋಣ. ಅವರ ದರ್ಬಾರನ್ನು ಹತ್ತಿಕ್ಕಲು ಕಾಂಗ್ರೆಸ್ ನಾಯಕರೇ ಸಜ್ಜಾಗಿದ್ದಾರೆ. ನಿಮ್ಮ ಯುವ ನಾಯಕ ರಾಹುಲ್ ಗಾಂಧಿ ಏನು ಮಾಡುತ್ತಿದ್ದಾರೆ? ತಮಿಳುನಾಡಿನಲ್ಲಿ ಬರ ಬಂದಿರುವುದು ರಾಹುಲ್ ಗಾಂಧಿಗೇನು ಗೊತ್ತಿರದ ವಿಚಾರವೇ? ಇಷ್ಟಾದರೂ ಅವರು ರೆಸ್ಟೊರೆಂಟ್ ಒಂದರಲ್ಲಿ ಯಾವುದೋ ಹುಡುಗಿ ಜತೆ ಕುಳಿತಿದ್ದ ಫೋಟೊ ಹರಿದಾಡುತ್ತಿದೆ.

ತಮಿಳುನಾಡಿನಲ್ಲಿ ಬರ ಬಂದರೆ ರಾಹುಲ್ ಗಾಂಧಿ ರೆಸ್ಟೊರೆಂಟ್ ಗೆ ಹೋಗುವುದು ಎಷ್ಟು ಸರಿ? ಇವರಿಗೆಲ್ಲ ಬಡವರ ಮೇಲೆ ಕಾಳಜಿಯಿದೆಯಾ ಎಂದು ಕೇಳಬಹುದಲ್ಲ? ಇದು ಹಾಸ್ಯಾಸ್ಪದವಲ್ಲವೇ? ಈಗ ರಮ್ಯಾ ಮಾತೂ ಹಾಗೇ ಇದೆ! ಅಧಿಕಾರ ಸಿಕ್ಕ ಮೊದಲ ದಿನವೇ ತಾನು ದೊಡ್ಡ ಮಾತುಗಾತಿ ಎಂದು ತೋರಿಸಿಕೊಳ್ಳುವ ಚಪಲವೇ ಆ ಹೇಳಿಕೆಗೆ ಕಾರಣ. ರಮ್ಯಾ ಇನ್ನೊಂದು ಮಾತೂ ಹೇಳುತ್ತಾರೆ – ‘ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಗುರಗಾಂವ್‌ನಂಥ ಪ್ರದೇಶದಲ್ಲಿ ಅತ್ಯಾಚಾರ ನಡೆದಾಗ ಅಲ್ಲಿನ ಮುಖ್ಯಮಂತ್ರಿ ಸಂತ್ರಸ್ತೆಯ ಮನೆಗೂ ಭೇಟಿ ನೀಡಿಲ್ಲ’ ಎಂದರು.

ರಾಜಕಾರಣಿಗಳು ಒಂದು ಮಾತು ಆಡಬೇಕಿದ್ದರೆ ನೂರು ಬಾರಿ ಯೋಚಿಸುವುದುಂಟು. ಏಕೆಂದರೆ, ನಾಳೆ ನಾನಾಡುವ ಮಾತು ಅಥವಾ ಆರೋಪ ವಾಪಸ್ ಬರಬಾರದು ಎಂದು. ಆದರೆ ರಮ್ಯಾ ಅತ್ತ ನಟಿ ಇತ್ತ ರಾಜಕಾರಣಿ ನೋಡಿ. ಹಾಗಾಗಿ ಇಂಥ ಸೂಕ್ಷ್ಮಗಳೆಲ್ಲ ತಿಳಿಯುವುದಿಲ್ಲ. ರಮ್ಯಾ ಅವರೇ, ನಿಮಗೆ ನೆನಪಿರಬಹುದು, ಯೋಧ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರ ಅವರ ಹುಟ್ಟೂರಿಗೆ ಬಂದಾಗ, ಸಿದ್ದರಾಮಯ್ಯನವರು ಪಕ್ಕದ ಊರಲ್ಲೇ ಇದ್ದರು. ಹೋಗಿ ನೋಡಿ ಬನ್ನಿ ಎಂದರೆ, ನಮಗೆ ಬೇಕಾದಷ್ಟು ಕೆಲಸವಿರುತ್ತದೆ ಎಂದು ಕೈ ತಿರುಗಿಸಿ ಹೋಗಿದ್ದರು. ಹುತಾತ್ಮನಿಗೇ ಮರ್ಯಾದೆ ಕೊಡದೆ ಹೀನಾಯವಾಗಿ ನಡೆಸಿಕೊಂಡ ಪುಣ್ಯಾತ್ಮ ನಿಮ್ಮ ಪಕ್ಷದಲ್ಲೇ, ನಿಮ್ಮ ರಾಜ್ಯದಲ್ಲೇ ಇರುವಾಗ ಗುರಗಾಂವ್‌ಗೆ ಬಗ್ಗೆ ಯಾಕೆ ತಲೆ ಬಿಸಿ ಮಾಡಿಕೊಳ್ಳುತ್ತೀರಿ?

ಇಂಥ ಒಂದು ಬಾಲಿಶ ಪ್ರಶ್ನೆಗಳ ಮೂಲಕ, ರಮ್ಯಾ ರಾಜಕೀಯಕ್ಕೂ ಲಾಯಕ್ಕಿಲ್ಲ ಎಂದು ಸಾಬೀತು ಮಾಡಿಬಿಟ್ಟರು. ಯಾರ್ಯಾರ ಬಗ್ಗೆಯೋ ಏಕೆ? ರಮ್ಯಾ ಬಗ್ಗೆಯೇ ಮಾತಾಡೋಣ. ನಮ್ಮ ರಾಜ್ಯದ ರೈತರ ಬಗ್ಗೆ ಅಷ್ಟು ಒಲವಿದ್ದರೆ, ಮಹದಾಯಿ ಹೋರಾಟ ನಡೆದಾಗ ರಮ್ಯಾ ಎಲ್ಲಿಗೆ ಹೋಗಿದ್ದರು? ಯಾಕೆ ಒಂದು ಮಾತೂ ಆಡಲಿಲ್ಲ. ಕೆಲ ತಿಂಗಳುಗಳ ಹಿಂದೆ ಕಾವೇರಿ ಹೋರಾಟದಲ್ಲಿ ರಮ್ಯಾ ಸ್ವಕ್ಷೇತ್ರ ಮಂಡ್ಯದಲ್ಲೇ ಹೋರಾಟಗಾರರು ಹೋರಾಟಕ್ಕೆ ಕರೆದಾಗ ‘ನನಗೆ ರಕ್ಷಣೆ ಬೇಕು.. ’ ಎಂದು ಕ್ಯಾತೆ ತೆಗೆದು ಕಾಲುಕಿತ್ತಿದ್ದರು.

ಇನ್ನು ಸ್ವಲ್ಪ ದಿನ ಮಾಯವಾಗಿಬಿಟ್ಟಿದ್ದರು. ಆಮೇಲೆ ನೆಂಟರು ಬಂದ ಹಾಗೆ ಮಂಡ್ಯ ಮಾರ್ಕೆಟ್‌ಗೆ ಹೋದಾಗ ಜನರೇ ಅವಮಾನ ಮಾಡಿ ಕಳಿಸಿದ್ದರು. ಅದಾದ ನಂತರ ರಾಜಕೀಯವೇ ಬಿಟ್ಟರೇನೋ ಎಂದುಕೊಳ್ಳುತಿರುವಾಗಲೇ,
ದೆಹಲಿಯಲ್ಲಿ ಹೊಸ ಸ್ಥಾನ ಸಿಕ್ಕಿತು. ಆದರೆ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ರಮ್ಯಾ ಆಗಲೇ ಅಸಹಿಷ್ಣುತೆಯ ಪರಮಾವಧಿ ತಲುಪಿ ಸ್ನೇಹಿತರಿಗಿಂತ ಬ್ಲಾಕ್ ಮಾಡಿರುವ ಪಟ್ಟಿಯಲ್ಲೇ ಹೆಚ್ಚು ಜನರನ್ನಿಟ್ಟುಕೊಂಡಿರುವುದರಿಂದ ರಮ್ಯಾಗೆ ಈ ಸ್ಥಾನವೂ ಸರಿ ಹೊಂದುತ್ತೋ ಇಲ್ಲವೋ ಎಂಬುದೇ ಅನುಮಾನ. ಮೋದಿ ವಿದೇಶ ಪ್ರಯಾಣ ಯಾಕೆ ಮಾಡುತ್ತಾರೆ ಎಂಬುದರ ಸಣ್ಣ ಪರಿವೂ ಇಲ್ಲದಿರುವ ರಮ್ಯಾ ಯಾವ ಸೀಮೆಯ ರಾಜಕಾರಣಿ?

2014ರಲ್ಲಿ 24.2 ಬಿಲಿಯನ್ ಡಾಲರ್ ಇದ್ದ ವಿದೇಶಿ ಬಂಡವಾಳ ಹೂಡಿಕೆ, 31 ಮಾರ್ಚ್ 2017ರ ವೇಳೆಗೆ 56.3 ಬಿಲಿಯನ್ ಡಾಲರ್ ಆಗಿದೆ.. ಅಂದರೆ ಕೇವಲ ಮೂರು ವರ್ಷಗಳಲ್ಲಿ ಎರಡರಷ್ಟಾಗಿದೆ. ರಮ್ಯಾ ಹೇಳಿದ ಜಾಗಕ್ಕೆಲ್ಲ ಮೋದಿ ಭೇಟಿ ಕೊಡುತ್ತಾ ಸೆಲ್ಫಿ ಕೊಡುತ್ತಾ ಕುಳಿತಿದ್ದರೆ ಇವೆಲ್ಲ ಸಾಧ್ಯವಿತ್ತೇ? ರಮ್ಯಾ ಅವರೇ, ನೀವು ಲಂಡನ್ನಿಗೆ ಹೋಗಿ ಬರುವುದಕ್ಕೂ, ಮೋದಿಯವರು ಹೋಗಿ ಬರುವುದಕ್ಕೂ ಬಹಳ ವ್ಯತ್ಯಾಸವಿದೆ ಎನ್ನುವುದನ್ನು ಮರೆಯಬೇಡಿ. ಮೋದಿಯೇನು ಅಲ್ಲಿ ‘ತಮ್ಮ ಮಕ್ಕಳ’ನ್ನಾಡಿಸಿಕೊಂಡು ಬರಲು ಹೋಗಿಲ್ಲ ನೋಡಿ. ಆಗಾಗ ಭಾರತಕ್ಕೆ ಭೇಟಿ ನೀಡುವ, ಮಂಡ್ಯದಲ್ಲೇ ಇರುತ್ತೇನೆ ಎಂದು ಮಂಡ್ಯದ ಜನತೆಗೆ ನಂಬಿಸಿ ರಾತ್ರೋ ರಾತ್ರಿ ಗಾಯಬ್ ಆಗಿರುವ ನೀವು ರಾಜಕೀಯದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಿ ಎನ್ನುವುದಕ್ಕೆ ಹೇಳುತ್ತೇನೆ ಕೇಳಿ: 31ಮಾರ್ಚ್ 2014ಕ್ಕೆ ಮನೆ ಸಾಲ ಬಡ್ಡಿ 10.25% ಇದ್ದಿದ್ದು 31 ಮಾರ್ಚ್ 2017ಕ್ಕೆ 8.60% ಆಗಿದೆ.

ಸಮಗ್ರ ದೇಶೀಯ ಉತ್ಪನ್ನ(ಜಿಡಿಪಿ) 6.6%ನಿಂದ 7.10%ಕ್ಕೆ ಏರಿದೆ. ವಿತ್ತೀಯ ಕೊರತೆ(ಫಿಸ್ಕಲ್ ಡೆಫಿಸಿಟ್) 4.6%ನಿಂದ 3.2%ಕ್ಕೆ ಇಳಿಯುವ ಸೂಚನೆಯಿದೆ. ಗ್ರಾಹಕ ಹಣದುಬ್ಬರ 9.4%ನಿಂದ 3.81% ಆಗಿದೆ. ವಿದೇಶಿ ಮೀಸಲು 303.7 ಬಿಲಿಯನ್ ಡಾಲರ್ ನಿಂದ 372.7 ಬಿಲಿಯನ್ ಡಾಲರ್ ಆಗಿದೆ. ಇವೆಲ್ಲ ಆಗಿದ್ದು 60 ವರ್ಷಗಳಲ್ಲಲ್ಲ… ಮೂರೇ ವರ್ಷಗಳಲ್ಲಿ! ಕಾಂಗ್ರೆಸ್‌ನ ಯಾವ ಪ್ರಧಾನಿಯೂ ಮಾಡಿ ತೋರಿಸದ ಸಾಧನೆಯನ್ನು ಮೋದಿ ಮಾಡಿ ತೋರಿಸಿದ್ದಾರೆ. ಅದನ್ನು ಗಣನೆಗೆ ತೆಗೆದುಕೊಳ್ಳುವ ಬದಲು, ಮೋದಿ ತಮಿಳುನಾಡಿಗೆ ಬರಲಿಲ್ಲ, ಕರ್ನಾಟಕಕ್ಕೆ ಹಣ ಕೊಡಲಿಲ್ಲ ಎನ್ನುತ್ತಾ ಯಾಕೆ ನಿಮ್ಮ ಆಯಸ್ಸನ್ನು ಸವೆಸುತ್ತಿದ್ದೀರಿ?

ಮೋದಿ ಶ್ರೀಲಂಕಾಗೆ ಏಕೆ ಹೋದರು ಎನ್ನುವುದಕ್ಕಿಂತ, ನೀವು ಏಕೆ ಮಂಡ್ಯದಿಂದ ಟೆಂಟ್ ಕಿತ್ತಿರಿ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಿದ್ದರೆ ಇಷ್ಟೊತ್ತಿಗೆ ಕರ್ನಾಟಕದಲ್ಲಿ ಒಂದೊಳ್ಳೆ ಸ್ಥಾನದಲ್ಲಿರುತ್ತಿದ್ದಿರಿ. ಹಾಗೆ ಯೋಚನೆ ಮಾಡದೇ ಇದ್ದಿದ್ದಕ್ಕೆ ಈಗ ದೆಹಲಿಯಲ್ಲಿದ್ದೀರಿ! ಮೋದಿ ಆರೆಸ್ಸೆಸ್‌ನಲ್ಲಿದ್ದಷ್ಟು ವರ್ಷ ನೀವು ಸಿನಿಮಾದಲ್ಲಿ ಹಾಗೂ ರಾಜಕೀಯದಲ್ಲಿ ಕಾಲ ಹಾಕಿದ ವರ್ಷಕ್ಕೂ ಸಮ ಆಗುವುದಿಲ್ಲ. ಗೆದ್ದಾಗ ಜನನಾಯಕಿ ಎಂದೆನಿಸಿಕೊಂಡು ಸೋತಾಗ ಅಡ್ರೆಸ್ ಇಲ್ಲದೇ ಪರಾರಿಯಾಗುವ ನೀವು ಮೋದಿ ಹಾಗೆ ಮಾಡಬಾರದಿತ್ತು, ಹೀಗೆ ಮಾಡಬೇಕಿತ್ತು ಎಂದು ಅಜ್ಜಿಯ ಹಾಗೆ ವಟಗುಡುವುದೇ ನಮ್ಮ ರಾಜಕಾರಣದ ದೊಡ್ಡ ದುರಂತ.

ಸಿನಿಮಾದಿಂದ ರಾಜಕೀಯಕ್ಕೆ, ರಾಜಕೀಯದಿಂದ ಸಿನಿಮಾಕ್ಕೆ, ಎರಡೂ ಬೇಡವೆಂದಾದಾಗ ಮತ ಹಾಕಿದವರಿಗೂ ತಿಳಿಯದಂತೆ ವಿದೇಶಕ್ಕೆ ಹಾರುವ ನೀವು ‘ಎಲ್ಲೆಲ್ಲೋ ಓಡುವ ಮನಸೇ’ ಎನ್ನದೇ ನಿಮ್ಮ ಮನಸ್ಸನ್ನು ಒಂದೆಡೆ ಕಟ್ಟಿ ನಿಲ್ಲಿಸಿಕೊಂಡು, ಒಂದು ಚುನಾವಣೆಯನ್ನಾದರೂ ಗೆದ್ದು ಆಮೇಲೆ ಮೋದಿ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎನ್ನುವುದನ್ನು ಹೇಳಿಕೊಡಿ. ಅಲ್ಲಿಯವರೆಗೆ ರಾಜಕೀಯ ಕೃಷಿ ಮಾಡಿ. ಮಂಡ್ಯದ ಜನತೆಗೆ ಮುಖ ತೋರಿಸಿ.

-ಚಿರಂಜೀವಿ ಭಟ್

Leave a Reply

Copyright©2020 Chiranjeevi Bhat All Rights Reserved.
Powered by Dhyeya