ಯೋಧನ ಮಗಳ ಮಾತಿಗೆ ಬೀಳುತ್ತಿದೆಯೇ ಐಎಸ್ಐ ಮುದ್ರೆ?

gurmehar-kaur_650x400_41488252869

ವಿಷಯ ಗೊತ್ತಿರಲಿ ಅಂತ ಒಂದು ಸಣ್ಣ ಮಾಹಿತಿ: ಹುತಾತ್ಮ ಯೋಧ ಕ್ಯಾ. ಮನ್‌ದೀಪ್ ಸಿಂಗ್‌ರ ಮಗಳು ಗುರ್ಮೆಹರ್ ಕೌರ್ ಎಂಬಾಕೆ ಇತ್ತೀಚೆಗೆ ಒಂದು ಕಾರ್ಡ್ ಹಿಡಿದು ವಿಡಿಯೊ ಮಾಡಿದ್ದಳು. ಆ ಕಾರ್ಡ್‌ನಲ್ಲಿ ‘ನನ್ನ ತಂದೆಯನ್ನು ಕೊಂದದ್ದು ಪಾಕಿಸ್ತಾನವಲ್ಲ, ಯುದ್ಧ ಎಂದು ಬರೆಯಲಾಗಿತ್ತು. ಪಾಕಿಸ್ತಾನ ಮತ್ತು ಭಾರತ ನಡುವಣ ಶಾಂತಿಗಾಗಿ ನಾನು ಹೋರಾಡುತ್ತೇನೆ ಎಂಬುದು ಆಕೆಯ ಸಂದೇಶ. ಇದನ್ನು ಮಾಧ್ಯಮಗಳು ಅತೀ ಎನಿಸುವಷ್ಟರ ಮಟ್ಟಿಗೆ ಪ್ರಚಾರ ಮಾಡಿದವು. ಪಕ್ಕದ ಮನೆಯವರಿಗೂ ಗೊತ್ತಿಲ್ಲದಿದ್ದ ಹುಡುಗಿ ಈಗ ಜಗತ್ಪ್ರಸಿದ್ಧಿ ಪಡೆದಿದ್ದಾಳೆ. ಆದರೆ ಈ ಹುಡುಗಿಯ ಹಿಂದೆ ಒಂದು ದೊಡ್ಡ ರಾಜಕೀಯ ಪಕ್ಷ, ದೇಶದ್ರೋಹಿಗಳು, ದೇಶದ್ರೋಹಿ ಸಂಘಟನೆಗಳು ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿವೆ ಎಂಬುದು ಹುಡುಕುತ್ತಾ ಹೋದಾಗ ಪತ್ತೆ ಆದ ವಿಷಯ. ಗುರ್ಮೆಹರ್ ಕೌರ್‌ಳ ಮೊದಲ ಹೇಳಿಕೆಯಲ್ಲೇ ಸುಳ್ಳಿದೆ.

ನನ್ನ ತಂದೆ ಕಾರ್ಗಿಲ್ ಯುದ್ಧದಲ್ಲಿದ್ದರು. ಅವರನ್ನು ಕೊಂದಿದ್ದು ಯುದ್ಧವಲ್ಲ ಪಾಕಿಸ್ತಾನ ಎಂಬುದೇ ದೊಡ್ಡ ಸುಳ್ಳು. ಈಕೆಯ ತಂದೆ ಹುತಾತ್ಮ ಎನ್ನುವುದು ಸತ್ಯ. ಆದರೆ ಕಾರ್ಗಿಲ್ ಅಥವಾ ಯಾವುದೇ ಯುದ್ಧದಲ್ಲಿ ಸತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ರಾಷ್ಟ್ರೀಯ ರೈಫಲ್ಸ್‌ನ ಕ್ಯಾಂಪ್ ಮೇಲೆ 1999ರ ಆಗಸ್ಟ್ 6 ರಂದು ಪಾಕ್ ಉಗ್ರರು ಗುಂಡಿನ ದಾಳಿ ನಡೆಸಿದಾಗ ಗುಂಡೇಟು ತಿಂದು ಪ್ರಾಣ ಬಿಟ್ಟವರು ಗುರ್ಮೆಹರ್ ತಂದೆ ಕ್ಯಾ. ಮನ್‌ದೀಪ್ ಸಿಂಗ್. ಅಂದರೆ, ಜನರು ಹುತಾತ್ಮನ ಮಗಳು ಏನು ಹೇಳಿದರೂ ಕೇಳುತ್ತಾರೆ ಎಂಬ ದುರಾಲೋಚನೆಯಿಂದ ತನ್ನ ತಂದೆಯನ್ನು ಕೊಂದಿದ್ದು ಪಾಕ್ ಅಲ್ಲ, ಯುದ್ಧ ಎಂದು ಹೇಳಿದ್ದಳು. ತಂದೆ ಸಾವನ್ನು ಯುದ್ಧದ ಮೇಲೆ ಹಾಕಿ ಪಾಕಿಸ್ತಾನವನ್ನು ಬಚಾವ್ ಮಾಡುವ ಉದ್ದೇಶ ಆಕೆಯದು. ಇಲ್ಲಿಂದಲೇ ಈಕೆಯ ಅಸಲಿ ಮುಖದ ಪರಿಚಯವಾಗುವುದು.

ಎರಡನೇ ಹೇಳಿಕೆ: ನಾನು ಎರಡು ವರ್ಷವಿದ್ದಾಗ ನನ್ನ ತಂದೆ ಹುತಾತ್ಮರಾದರು. ಆ ನೆನಪು ನನಗೆ ಇವತ್ತಿಗೂ ಇದೆ. ಹೌದು ಇದು ಸತ್ಯ. ಆದರೆ ನಾವು ಇಲ್ಲಿ ಆಲೋಚಿಸಬೇಕಾದ್ದೇನೆಂದರೆ, ಸಾಮಾನ್ಯವಾಗಿ ಎಂಥ ಚುರುಕು ಮಕ್ಕಳಿಗಾದರೂ ನಾಲ್ಕು ವರ್ಷಗಳಿಂದ ತಾವೇನೇನು ಮಾಡಿದ್ದೀವಿ ಎಂಬುದು ನೆನಪಿರುತ್ತದೆ. ಆದರೆ ಈಕೆಗೆ ಎರಡು ವರ್ಷವಿರುವಾಗಲೇ ಎಲ್ಲವೂ ನೆನಪಿತ್ತೆಂದರೆ ಇವಳು ಪ್ರಪಂಚದ ಇನ್ನೊಂದು ಅದ್ಭುತವೇ ಸರಿ. ಗುರ್ಮೆಹರ್ ಕೌರ್ ನಮ್ಮ ದೇಶದ ಬಗ್ಗೆ, ಯೋಧರ ಬಗ್ಗೆ ಮಾತಾಡುವ ವಿಡಿಯೊ ರೆಕಾರ್ಡ್ ಮಾಡಿದ್ದು ‘ವಾಯ್ಸ್ ಆಫ್ ರಾಮ್’ ಎಂಬ ಸಿನಿಮಾ ಕಂಪನಿ. ಇದು ರಾಮ್ ಸುಬ್ರಮಣಿಯನ್ ಒಡೆತನದಲ್ಲಿದೆ. ಆಮ್ ಆದ್ಮಿ ಪಾರ್ಟಿಯ ಯಾವುದೇ ವಿಡಿಯೊ ಇದ್ದರೂ ಅದನ್ನು ಚಿತ್ರಿಸಿ ಪ್ರಚಾರ ಮಾಡುವುದು ರಾಮ್ ಸುಬ್ರಮಣಿಯನ್ ಮಾತ್ರ. ಇವರಿಗೆ ಅರವಿಂದ್ ಕೇಜ್ರಿವಾಲ್ ಜತೆ ಅತಿ ಎನಿಸುವಷ್ಟು ಆತ್ಮೀಯತೆ ಇದೆ.

ಅಲ್ಲಿಗೆ, ಈ ಗುರ್ಮೆಹರ್ ಕೌರ್‌ಳ ಡ್ರಾಮಾದಲ್ಲಿ ಆಮ್ ಆದ್ಮಿ ಪಾರ್ಟಿಯ ಕೈವಾಡ ಇದೆ ಎಂದಾಯಿತು. ಕೇಜ್ರಿವಾಲ್ ಕೈವಾಡವಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಕೊಡುತ್ತೇನೆ ಕೇಳಿ. ಆಕೆಯ ವಿಡಿಯೊವನ್ನು ಎಲ್ಲ ಮಾಧ್ಯಮಗಳು ಪ್ರಸಾರ ಮಾಡುವುದಕ್ಕೆ ಶುರು ಮಾಡಿದಾಗ ಪರ ವಿರೋಧಗಳು ಬಹಳ ಬಂದವು. ಆಕೆ ಆಮ್ ಆದ್ಮಿ ಪಕ್ಷದವಳು ಎನ್ನುವುದಕ್ಕೆ ಬೇಕಾದ ಎಲ್ಲ ಪುರಾವೆಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿದರು. ಅದಕ್ಕೆ ಹೆದರಿದ ಗುರ್ಮೆಹರ್, ತನ್ನನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆಗಳು ಬರುತ್ತಿವೆ ಎಂದು ಮಾಧ್ಯಮದಲ್ಲಿ ಅತ್ತಳು.

ಅತ್ಯಾಚಾರ ಬೆದರಿಕೆಗಳು ಬಂದರೆ ಪೊಲೀಸರ ಬಳಿ ದೂರು ಕೊಡುವ ಬದಲು ಮಾಧ್ಯಮದಲ್ಲಿ ಅಳುವುದೇಕೆ? ಎಂಬ ಪ್ರಶ್ನೆಗಳು ಬಂದಾಗ, ಸೀದಾ ಹೋಗಿ ದೆಹಲಿ ಕಮಿಷನ್ ಫಾರ್ ವುಮೆನ್‌ಗೆ ದೂರು ಕೊಡುತ್ತಾಳೆ. ಇದರ ಅಧ್ಯಕ್ಷೆ ಮತ್ತದೇ ಆಮ್ ಆದ್ಮಿ ಪಕ್ಷದ ಸ್ವಾತಿ ಮಾಲಿವಾಲ್. ದೂರಿನಲ್ಲಿ ಎಬಿವಿಪಿ ಹುಡುಗರು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ ಎಂದಿದ್ದಾಳೆ. ಇತ್ತ ಎಬಿವಿಪಿಯೂ ಆಕೆಯ ಪರ ನಿಂತು, ಅತ್ಯಾಚಾರದ ಬೆದರಿಕೆ ಹಾಕಿದವರನ್ನು ಹುಡುಕಿಕೊಡಿ ಎಂದು ಪೊಲೀಸ್ ದೂರು ಕೊಟ್ಟಾಗ ತಿಳಿದಿದ್ದೇನೆಂದರೆ, ಬೆದರಿಕೆ ಹಾಕಿದವನು ಎಬಿವಿಪಿಯವನಲ್ಲ, ಬದಲಿಗೆ ಗುರ್ಮೆಹರ್ ಕೌರ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಮತ್ತು ಆಕೆಯ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವ ಎಎಸ್‌ಐಎ ಸಂಘಟನೆಯ ದೇವಜಿತ್ ಭಟ್ಟಾಚಾರ್ಯ ಎಂದು.

ಈ ನಾಟಕ ಹೇಗಿದೆ ನೋಡಿ, ಇವರೇ ಹುಡುಗಿಗೆ ಅತ್ಯಾಚಾರ ಬೆದರಿಕೆ ಹಾಕುವುದಂತೆ, ಇವರೇ ಎದೆ ಬಡಿದುಕೊಂಡು ಅಳುವುದಂತೆ, ಇವರನ್ನು ಸಮಾಧಾನ ಮಾಡುವುದಕ್ಕೆ ಅರವಿಂದ್ ಕೇಜ್ರಿವಾಲ್ ದೌಡಾಯಿಸಿ ಹೋಗುವುದಂತೆ! ಇಲ್ಲಿಗೆ ಆಮ್ ಆದ್ಮಿ ಪಕ್ಷದ ಕೈವಾಡ ಮತ್ತಷ್ಟು ದಟ್ಟವಾಗುತ್ತಾ ಬಂತು. ಇದು ಕಾಕತಾಳೀಯವೋ ಏನೋ, ಪ್ರತೀ ಬಾರಿ ಕೇಜ್ರಿವಾಲ್ ಜಿಂದಾಲ್ ರೆಸಾರ್ಟ್‌ಗೆ ಹೋಗಿ ಬಂದಾಗಲೆಲ್ಲ ದೇಶದಲ್ಲಿ ಯಾವುದಾದರೂ ಒಂದು ನಾಟಕ ನಡೆದೇ ನಡೆಯುತ್ತದೆ. ಇದುವರೆಗೆ ಕೇಜ್ರಿವಾಲ್ ಮೂರು ಬಾರಿ ಜಿಂದಾಲ್ ರೆಸಾರ್ಟ್‌ಗೆ ವೈದ್ಯಕೀಯ ಕಾರಣ ಕೊಟ್ಟು ಹೋಗಿದ್ದಾರೆ. 2015ರ ಮೇನಲ್ಲಿ ಹೋಗಿ ಬಂದ ಮೇಲೆ ಜುಲೈ 15ಕ್ಕೆ ಹಾರ್ದಿಕ್ ಪಟೇಲ್ ಡ್ರಾಮಾ ನಡೆಯಿತು. 2016ರ ಜನವರಿಯಲ್ಲಿ ಹೋಗಿ ಬಂದ ಮೇಲೆ ಕನ್ಹಯ್ಯ ಕುಮಾರ್ ಜೆಎನ್‌ಯುದಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ. 2017ರ ಫೆಬ್ರವರಿಯಲ್ಲಿ ಹೋಗಿ ಬಂದಾಗ ಗುರ್ಮೆಹರ್ ಕೌರ್ ಎಂಬ ‘ವೀರವನಿತೆ’ ಬೆಳಕು ಕಂಡಳು.

ಇಲ್ಲಿ ಗುರ್ಮೆಹರ್ ವಿಷಯದಲ್ಲಿ ಪಾಕ್‌ನ ಕೈವಾಡವಿರಬಹುದಾ ಎಂಬ ಅನುಮಾನವೂ ಕಾಡುತ್ತದೆ. ಇದಕ್ಕೆ ಕಾರಣ, ಪಾಕ್ ಮಾಧ್ಯಮಗಳು ತೋರುತ್ತಿರುವ ಅತಿಯಾದ ಕಾಳಜಿ. ಹಾರ್ದಿಕ್ ಪಟೇಲ್, ಕನ್ಹಯ್ಯ ಕುಮಾರ್ ವಿವಾದಗಳಾದಾಗ ಪಾಕ್ ಇವರ ಪರ ನಿಂತು, ಭಾರತ ಇವರನ್ನು ಶೋಷಿತರನ್ನಾಗಿ ಮಾಡುತ್ತಿದೆ ಎಂದು ವರದಿ ಮಾಡಿತ್ತು. ಈಗ ಗುರ್ಮೆಹರ್ ವಿಷಯದಲ್ಲೂ ಪಾಕ್ ಮಾಧ್ಯಮಗಳು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿವೆ.

ಗುರ್ಮೆಹರ್‌ಗೆ ಇನ್ನೂ ಇಪ್ಪತ್ತು ವರ್ಷ. ಆಕೆ ದೆಹಲಿ ವಿವಿಯ ವಿದ್ಯಾರ್ಥಿನಿ ಎನ್ನುವುದು ಬಿಟ್ಟರೆ ಬೇರೇನೂ ಅಲ್ಲ. ಆದರೆ ಅವಳಿಗೆ ಫೇಸ್‌ಬುಕ್‌ನಲ್ಲಿ ರಾಶಿ ರಾಶಿ ಪಾಕ್ ಸ್ನೇಹಿತರಿದ್ದಾರೆ. ಫ್ರೆಂಡ್ ಮಾಡಿಕೊಂಡರೆ ಏನು ತಪ್ಪು ಎಂದು ನೀವು ಕೇಳಬಹುದು. ಆದರೆ, ಅವಳ ಫ್ರೆಂಡ್ ಲಿಸ್ಟ್ ‌ನಲ್ಲಿರುವ ಅಷ್ಟೂ ಪಾಕ್ ಸ್ನೇಹಿತರು ದೇಶದ್ರೋಹಿ ಘೋಷಣೆ ಕೂಗಿದ ಕನ್ಹಯ್ಯ ಕುಮಾರ್, ಉಮರ್ ಖಲೀದ್ ಮತ್ತು ಗುಜರಾತ್‌ನಲ್ಲಿ ನಾಟಕ ಮಾಡಿದ ಹಾರ್ದಿಕ್ ಪಟೇಲ್ ಸ್ನೇಹಿತರೂ ಹೌದು. ಕೌರ್ ಮಾಡಿದ್ದು ನಾಟಕ ಎಂದು ಹೇಳುವುದಕ್ಕೆ ಇದೊಂದು ಸಾಕ್ಷಿ ಸಾಕಲ್ಲವೇ? ಆಮ್ ಆದ್ಮಿ ಪಕ್ಷ ಮತ್ತು ಪಾಕ್ ಸೇರಿ ಒಳ್ಳೆ ಆಟವೇ ಆಡಿದೆ ಎನ್ನುವುದಕ್ಕೆ ಇನ್ನೂ ಸಾಕ್ಷಿ ಬೇಕಾ? ಇಲ್ಲಿದೆ ನೋಡಿ.

ಗುರ್ಮೆಹರ್ ಕೌರ್ 2014ರಿಂದಲೇ ಕೆಲ ಕಾರ್ಯಕ್ರಮಗಳಿಗೆ ಭಾಷಣ ಮಾಡಲು ಹೋಗುತ್ತಿದ್ದಾಳೆ. ಅಲ್ಲಿ ಆಕೆ ವೇದಿಕೆ ಹಂಚಿಕೊಳ್ಳುತ್ತಿದ್ದು ಪ್ರತ್ಯೇಕತಾವಾದಿ ನಾಯಕರಾದ, ಭಾರತವನ್ನು ರಕ್ತದ ಕಣಕಣದಲ್ಲೂ ವಿರೋಧಿಸುವ, ಕಮ್ಯುನಿಸ್ಟ್ ಸಿದ್ಧಾಂತ ಪ್ರತಿಪಾದಿಸುವ ಕವಿತಾ ಕೃಷ್ಣನ್, ಶೆಹ್ಲಾ ರಶೀದ್, ಸೀಮಾ ಮುಸ್ತಫಾ ಮತ್ತು ಮತಾಂತರ ಪ್ರಚೋದಕ ಎಂಬ ಆರೋಪ ಹೊತ್ತಿರುವ ಜಾನ್ ದಯಾಳ್ ಜತೆ! ಆದರೆ, ಇವರೆಲ್ಲರೂ ಗುರ್ಮೆಹರ್‌ಳನ್ನು ಈಗ ತಾನೆ ನೋಡಿದ್ದೇವೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಇನ್ನೊಂದು ಸ್ವಾರಸ್ಯಕರ ಘಟನೆ ಹೇಳುತ್ತೇನೆ, ಈ ಪ್ರಕರಣಕ್ಕೆ ಸಂಬಂಧವಿದೆಯೋ ಇಲ್ಲವೋ ನೀವೇ ನಿರ್ಧರಿಸಿ. ಪಾಕ್‌ನ ಗುಪ್ತಚರ ಸಂಸ್ಥೆ ಹಾಗೂ ಭಾರತದ ಮೇಲಿನ ಉಗ್ರರ ದಾಳಿಯ ಮಾಸ್ಟರ್‌ಮೈಂಡ್ ಐಎಸ್‌ಐ ಮುಖ್ಯಸ್ಥನ ಬಲಗೈ ಬಂಟ ಮೋಸಿನ್ ನೋಮಿ ನವೆಂಬರ್ 2016ರಲ್ಲಿ ಸೌದಿ ಅರೇಬಿಯಾಕ್ಕೆ ಬಂದು ಅಲ್ಲಿ ಒಂದು ಸಣ್ಣ ಮೀಟಿಂಗ್ ಮಾಡಿ, ಭಾರತ ಸೇನೆಯ ಮೇಲೆ ಕೆಟ್ಟ ಹೆಸರು ಮೂಡಿಸಲು, ಅತ್ಯಂತ ಹೆಚ್ಚು ಯೋಧರಿರುವ ಪಂಜಾಬ್‌ನಿಂದಲೇ ಒಬ್ಬ ಮಧ್ಯಮ ವರ್ಗದ ಹುಡುಗಿಯನ್ನು ಛೂ ಬಿಡಲು ಪ್ಲಾನ್ ಮಾಡುತ್ತಾನೆ.

ಇದು ಕಾಕತಾಳೀಯವೋ ಏನೋ, ಆಮ್ ಆದ್ಮಿಯ ಮನೀಷ್ ಸಿಸೋಡಿಯಾ ಮತ್ತು ಕಾಂಗ್ರೆಸ್‌ನ ಮನೀಷ್ ತಿವಾರಿ ಇಬ್ಬರೂ 2016 ನವೆಂಬರ್ 16ರಂದು ಸೌದಿಯಲ್ಲೇ ಇದ್ದರು. ಕಾನೂನಿನಲ್ಲಿ Circumstantial  evidence(ಸಾಂದರ್ಭಿಕ ಸಾಕ್ಷ್ಯ) ಎಂಬುದೊಂದಿದೆ. ಅದರಂತೆ ಹೋಲಿಕೆ ಮಾಡಿ ನೋಡುವುದಾರೆ, ಹುಡುಗಿ ಪಂಜಾಬ್‌ನವಳಾಗಿರುವುದಕ್ಕೂ, ಐಎಸ್ ಮುಖ್ಯಸ್ಥನ ಬಲಗೈ ಬಂಟ ಮೋಸಿನ್ ನೋಮಿ ಪ್ಲಾನ್ ಮಾಡಿರುವುದಕ್ಕೂ, ಗುರ್ಮೆಹರ್ ಕೌರ್‌ಗೆ ಆಮ್ ಆದ್ಮಿ ಪಕ್ಷದ ಜತೆ ನಿಕಟ ಸಂಬಂಧವಿರುವುದಕ್ಕೂ ಸಾಮ್ಯತೆ ಕಾಣಿಸುತ್ತಿಲ್ಲವೇ? ನಮ್ಮ ದೇಶ ಚೂರು ಚೂರಾಗುತ್ತಿರುವುದೇ ಹೀಗೆ. ಹೊರಗಿನಿಂದ ಏನೂ ಗೊತ್ತಾಗುವುದಿಲ್ಲ. ಆದರೆ, ಒಳಗೆ ಸಣ್ಣ ಕರುಳು, ದೊಡ್ಡ ಕರುಳು, ಒಂದೊಂದೇ ನಾಶವಾಗುತ್ತಾ ಬರುತ್ತದೆ. ಒಂದು ದಿನ ಹೃದಯವೇ ನಿಂತಾಗ ಯಾರೇನೂ ಮಾಡಲಿಕ್ಕಾಗುವುದಿಲ್ಲ. ಅವೆಲ್ಲ ಬಿಡಿ, ಇಷ್ಟೆಲ್ಲ ನಾಟಕ ಏಕೆ ಬೇಕಾಗಿತ್ತು? ಕಾರಣ ಸ್ಪಷ್ಟವಾಗಿದೆ. ಮುಂದೆ ಮೂರು ಚುನಾವಣೆಗಳಿವೆ. ಉತ್ತರಪ್ರದೇಶ ಚುನಾವಣೆ, ದೆಹಲಿಯ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆ ಮತ್ತು ದೆಹಲಿ ವಿವಿಯಲ್ಲಿ ಆರೆಂಟು ತಿಂಗಳಲ್ಲಿ ಚುನಾವಣೆಯಿದೆ. ಐಎಸ್‌ಐಗೆ ಭಾರತ ಹಾಳುಮಾಡಬೇಕು, ಪಾಕ್‌ಗೆ ಕಾಶ್ಮೀರ ಬೇಕು, ನಮ್ಮ ರಾಜಕಾರಣಿಗಳಿಗೆ ಅಧಿಕಾರ ಬೇಕು, ಇಪ್ಪತ್ತರ ಹುಡುಗಿಗೆ ಒಂದೇ ರಾತ್ರಿಯಲ್ಲಿ ಪ್ರಚಾರ ಬೇಕು.

ಈಗ ಗುರ್ಮೆಹರ್ ಕೌರ್ ಮುಖವಾಡ ಗೊತ್ತಾದಮೇಲೆ ನನಗಿನ್ನೂ ಇಪ್ಪತ್ತು ವರ್ಷ, ಇವನ್ನೆಲ್ಲ ಸಹಿಸಿಕೊಳ್ಳಲಾಗುವುದಿಲ್ಲ, ನನ್ನನ್ನು ನೆಮ್ಮದಿಯಿಂದಿರಲು ಬಿಟ್ಟುಬಿಡಿ ಎಂದಿದ್ದಾಳೆ. ಆದರೆ ಆ ಹುಡುಗಿಗೆ ಒಂದು ವಿಚಾರ ಹೇಳಬೇಕು, ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನಿಕರ ಗುಂಡಿಗೆ ಗುಂಡಿಗೆಯನ್ನೊಡ್ಡಿ ಹುತಾತ್ಮರಾದ ಕ್ಯಾಪ್ಟನ್ ವಿಜಯಂತ್ ಥಾಪರ್‌ಗೆ ಇನ್ನೂ ಇಪ್ಪತ್ತೆರಡೇ ವರ್ಷವಾಗಿತ್ತು. ಅವರು ಹೇಗೆ ಸಹಿಸಿಕೊಂಡಿರಬಹುದು. ಜಾಟ್ ರೆಜಿಮೆಂಟಿನ ಎಷ್ಟೋ ಯೋಧರು 20 ವರ್ಷಕ್ಕೇ ಹುತಾತ್ಮರಾಗಿದ್ದಾರೆ.

ಅವರೆಲ್ಲ ಹೇಗೆ ನೋವನ್ನು ಸಹಿಸಿಕೊಂಡಿರಬಹುದು? ಆಗಷ್ಟೇ ಮೀಸೆ ಚಿಗುರುತ್ತಿದ್ದ ಬಿಸಿರಕ್ತದ ಹುಡುಗ ಕ್ಯಾಪ್ಟನ್ ವಿಜಯಂತ್ ಥಾಪರ್ ಡೈರಿಯಲ್ಲಿ ಬರೆದಿಟ್ಟಿದ್ದು ಇದು – ‘ನನಗೆ ಗೊತ್ತಿಲ್ಲ ಮುಂದಿನ ಜನ್ಮದಲ್ಲಿ ನಾನೇಗುತ್ತೇನೋ ಎಂದು, ಆದರೆ ಮತ್ತೊಮ್ಮೆ ಮಾನವ ಜನ್ಮವನ್ನೇ ಪಡೆದಿದ್ದೇ ಆದರೆ, ಖಂಡಿತ ಭಾರತದಲ್ಲಿ ಯೋಧನಾಗಿ ಬಂದು ತಾಯಿ ಭಾರತಿಯ ರಕ್ಷಣೆ ಮಾಡುತ್ತೇನೆ’ ಎಂದಿದ್ದರು. ಇವನ್ನೆಲ್ಲ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಗೋಗರೆದಿರಲಿಲ್ಲ. ಹಾಗೆ ನೊಡಿದರೆ, ಗುರ್ಮೆಹರ್ ಕೌರ್ ಜತೆಗಿರುವ ಪ್ರತ್ಯೇಕತಾವಾದಿಗಳು, ಕನ್ಹಯ್ಯ ಕುಮಾರ್ ಎಲ್ಲರೂ, ಭಾರತೀಯ ಯೋಧರು ಅತ್ಯಾಚಾರಿಗಳು ಎಂದು ಪ್ರತಿಪಾದಿಸುವವರು. ಹಾಗಾದರೆ ಗುರ್ಮೆಹರ್ ತಂದೆಯೂ ಅತ್ಯಾಚಾರಿಯೇ ಆಗುತ್ತಾರಾ? ಅವಳೇ ಹೇಳಬೇಕು. ಒಂದಂತೂ ಸತ್ಯ, ಪಾಕಿಸ್ತಾನ ಕ್ಯಾ.ಮನ್‌ದೀಪ್ ಸಿಂಗ್‌ರ ದೇಹವನ್ನಷ್ಟೇ ಕೊಂದಿತ್ತು. ಆದರೆ ಅವರ ಮಗಳು, ಅಪ್ಪನ ಆತ್ಮವನ್ನೇ ಕೊಂದಳು.

Leave a Reply

Copyright©2021 Chiranjeevi Bhat All Rights Reserved.
Powered by Dhyeya