ಸತ್ಯಮೇವ ಜಯತೆಯಲ್ಲಿದ್ದವರು ಡೈರಿ ನೋಡಿ ಬೆಚ್ಚಿಬಿದ್ದರು!

satyameva jayate

ನಮ್ಮಲ್ಲಿ ಒಂದು ಮಾತಿದೆ. ಸಿಕ್ಕಿ ಹಾಕೊಳ್ಳುವ ತನಕ ಅವನು ಕಳ್ಳನಲ್ಲ, ಇಲ್ಲದಿದ್ದರೆ ಎಲ್ಲರೂ ಸಾಚಾಗಳೇ ಎಂದು. ಈಗ ರಾಜಕೀಯದಲ್ಲೂ ಈ ಮಾತು ಸತ್ಯವಾಗುತ್ತದೆ. ಕೇವಲ ಎರಡು ವಾರಗಳ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಒಂದು ದೊಡ್ಡ ಬಾಂಬ್ ಸಿಡಿಸಿದ್ದರು. ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಮನೆಯಮೇಲೆ ಐಟಿ ದಾಳಿಯಾ ದಾಗ, ಡೈರಿಯೊಂದು ಸಿಕ್ಕಿದೆ ಎಂದು ಹೇಳಿದ್ದರು. ಅದರಲ್ಲಿ ರಾಜ್ಯ ಕಾಂಗ್ರೆಸ್, ತಮ್ಮ ಪಕ್ಷದ ಹೈಕಮಾಂಡ್ ನಾಯಕರು ಸೇರಿದಂತೆ ಯಾರ್ಯಾರಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ ಎಂಬ ಬಗ್ಗೆ ಬಾಂಬ್ ಸಿಡಿಸಿದ್ದರು. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡದಿದ್ದರೂ, ಸಿದ್ದರಾಮಯ್ಯ ಸರಕಾರ ಲೋಕಸಭೆ ಚುನಾವಣೆ ಸಮಯದಲ್ಲಿ ಹೈಕಮಾಂಡ್ ನಾಯಕರಿಗೆ ಬಹಳ ಹಣ ಕೊಟ್ಟಿದ್ದಾರೆ ಎಂದು ಹೇಳಿ ಸುಮ್ಮನಾಗಿದ್ದರು. ಇದು ಸಹಜ ವಾಗಿಯೇ ರಾಜಕೀಯದಲ್ಲಿ ಸದ್ದು ಮಾಡಿತ್ತು. ಕಾಂಗ್ರೆಸ್ ನಾಯಕರು ಆ ಹೇಳುತ್ತಿದ್ದ ಮಾತಿದು – ‘ಯಡಿಯೂರಪ್ಪನವರು ಏನು ಬೇಕಾದ್ರೂ ಹೇಳಿದ್ರೆ ಕೇಳಕ್ಕೆ ನಾವ್ ರೆಡಿಯಿಲ್ಲ… ದಾಖಲೆ ತಂದು ತೋರಿಸ್ಲಿ, ದಾಖಲೆ’ ಎಂದು ಹೇಳಿ ಸುಮ್ಮ ನಾಗಿದ್ದರು. ಅಷ್ಟರಲ್ಲಿ ಅನಂತ್‌ಕುಮಾರ್ ಮತ್ತು ಯಡಿಯೂರಪ್ಪನವರು ಮೈಕ್‌ನಲ್ಲೇ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟು, ಕಾಂಗ್ರೆಸ್ ಬಳಿಯೇ ಬಾಂಬ್ ಇಡಿಸಿಕೊಂಡಿದ್ದರು.

ಮೊನ್ನೆ ಬೆಳಗ್ಗೆಯವರೆಗೂ ಕಾಂಗ್ರೆಸ್ ರಾಜ ಕಾರಣಿಗಳು ದಾಖಲೆ ಕೇಳುತ್ತಲೇ ಜಾರಿಕೊಳ್ಳುತ್ತಿದ್ದರು. ಮೊನ್ನೆ ಸಂಜೆ ಟೈಮ್ಸ್ ನೌ ವಾಹಿನಿ ಗೋವಿಂದರಾಜು ಡೈರಿಯಲ್ಲಿರುವ ಮಾಹಿತಿ ಯನ್ನು ಬಹಿರಂಗ ಮಾಡಿತ್ತು. ಇದಾದ ಮೇಲೆ ಕಾಂಗ್ರೆಸ್ ನಾಯಕರು ಬಹಳ ಆತಂಕಕ್ಕೊಳಗಾಗಿ ದ್ದನ್ನು ನಾವು ಕಾಣಬಹುದು. ಅವರ ಆತಂಕ, ಗಾಬರಿ ಮತ್ತು ಅವರಾಡುವ ಮಾತುಗಳೇ ಕಾಂಗ್ರೆಸಿಗರು ತಪ್ಪು ಮಾಡಿದ್ದಾರೆ. ಅಕ್ರಮದಲ್ಲಿ ತೊಡಗಿದ್ದಾರೆ ಎಂಬ ಅನುಮಾನ ಮೂಡುವಂತಿದೆ. ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಗಳು ಬಹಳ ಸಹಜ. ಆದರೆ, ಅದಕ್ಕೆ ಸ್ಪಂದಿಸುವ, ಉತ್ತರ ಕೊಡುವ ರೀತಿ ಇದೆಯಲ್ಲ, ಅದು ಜನರ ಮನಸ್ಸಿ ನಲ್ಲಿ ಪರಿಣಾಮಕಾರಿಯಾಗಿ ಉಳಿಯುತ್ತದೆ.

ಮೊದಲು ಆರೋಪ ಮಾಡಿದಾಗ ಮಾಧ್ಯಮ ಮಿತ್ರರನ್ನು ಕರೆದು ಉತ್ತರ ನೀಡಿದ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ–ರಾವ್, ಯಡಿಯೂರಪ್ಪನವರಿಗೆ ಮತಿಭ್ರ ಮಣೆಯಾಗಿದೆ ಎಂದರು. ಇದು, ವಾದ ಮಾಡುವ ಪರಿಯಾ? ತಮ್ಮ ಮೇಲಿನ ಸಗಣಿಯನ್ನು ಮೊದಲು ಚೊಕ್ಕ ಮಾಡಿಕೊಳ್ಳುವುದರ ಬದಲು, ದಿನೇಶ್ ಗುಂಡೂರಾವ್ ಇನ್ನೊಬ್ಬರಿಗೆ ಮತಿಭ್ರಮಣೆ–ಯಾಗಿದೆ ಎಂದು ಕರೆಯುತ್ತಾರೆ ಎಂದರೆ, ಅದರ ಅರ್ಥ ಒಂದೋ ದಿನೇಶ್ ತಲೆಯಲ್ಲಿ ಏನೆಂದರೇನೂ ವಿಷಯವಿಲ್ಲ ಅಥವಾ ತಮ್ಮ ಪಕ್ಷದ್ದೇ ತಪ್ಪೆಂದು ಗೊತ್ತಾಗಿ ಏನೂ ಮಾತಾಡುವುದಕ್ಕೂ ಆಗದೇ, ಮಾತಾಡದೆಯೂ ಇರಕ್ಕಾಗದ ಸ್ಥಿತಿಯಲ್ಲಿ ಅಂಥ ಮಾತಾಡಿದ್ದಾರೆ ಎನ್ನುವುದು ಸ್ಪಷ್ಟ.

ಇನ್ನು ಕಾಂಗ್ರೆಸ್‌ನ ದೊಡ್ಡ ತಲೆಗಳು ಇದರ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದವು ಎನ್ನುವುದಕ್ಕೆ ಮತ್ತೊಂದು ಉದಾಹರಣೆ, ಪಕ್ಷದ ನಾಯಕರು ಫ್ರೀಡಂ ಪಾರ್ಕ್‌ನಲ್ಲಿ ‘ಸತ್ಯಮೇವ ಜಯತೆ’ ಎಂಬ ಕಾರ್ಯಕ್ರಮವನ್ನೂ ಮಾಡಿದ್ದಾರೆ. ಎಲ್ಲಿಯ ಕಾಂಗ್ರೆಸ್ ಎಲ್ಲಿಯ ಸತ್ಯಮೇವ ಜಯತೆ? 60 ವರ್ಷಗಳಿಂದ ಹಗರಣಗಳ ಮೇಲೆ ಹಗರಣಗಳನ್ನು ಭಾರತಕ್ಕೆ ಕೊಡುಗೆಯಾಗಿ ಕೊಟ್ಟ ಕಾಂಗ್ರೆಸ್ ‘ಸತ್ಯಮೇವ ಜಯತೆ’ ಎನ್ನುವುದು ಘೋರ ಅಣಕ. ಅದರಲ್ಲಿ ಸನ್ಮಾನ್ಯ ಸಚಿವ ಜಾರ್ಜ್ ಅವರೂ ಪಾಲ್ಗೊಂಡು, ಸತ್ಯಮೇವ ಜನತೇ ಎಂದಿದ್ದ ವಿಷಯ ತಿಳಿದು, ಮಡಿಕೇರಿಯ ಸುತ್ತಮುತ್ತಲಿನ ಕಾಡಿನ ಮರಗಳು ಎಲೆಯುದುರಿಸಿ ನಕ್ಕುಬಿಟ್ಟಿದ್ದವು.

ಸುದ್ದಿ ವಾಹಿನಿಯಲ್ಲಿ ಗೋವಿಂದರಾಜು ಬರೆದಿಟ್ಟಿದ್ದ ಹಣೆಬರಹ ಬಯಲಾಗುವ ತನಕ, ‘ಯಾವ ಡೈರಿ ಸ್ವಾಮಿ? ಅದೆಲ್ಲ ಸುಳ್ಳು, ಮೂರ್ಖ, ಹುಚ್ಚ’ ಎಂದು ಬಯ್ದಾಡುತ್ತಿದ್ದ ನಾಯಕರು ಏಕಾಏಕಿ, ‘ನಿಮ್ಮ ಮೋದಿ ಡೈರಿಯಲ್ಲಿ ಜಿಂದಾಲ್‌ಗೆ ಎಷ್ಟು ಹಣ ಕೊಡಬೇಕು ಅಂತ ಬರೆದಿದ್ದು, ಆಡ್ವಾಣಿ ವಿಷಯ ಎಲ್ಲ ಗೊತ್ತು ನಮಗೂ. ನಮಗೇನ್ ಬುದ್ಧಿ ಹೇಳೋದ್ ಬೇಡ’ ಎಂದಿದ್ದರು. ನೀವು ಕ್ರೈಂ ಭಾಷೆಯಲ್ಲೇ ನೋಡುವು ದಾದರೆ, ಒಬ್ಬ ಆರೋಪಿ ಆಗಾಗ ತನ್ನ ಹೇಳಿಕೆ ಗಳನ್ನು ಬದಲಾಯಿಸುತ್ತಿದ್ದರೆ, ಅವನ ಮೇಲೆ ಪೊಲೀಸರು ಕಣ್ಣಿಡುವುದು ಸಹಜ. ಹಾಗೇ ಮೊದಲು ಒಂದು ಹೇಳಿಕೆ ಕೊಟ್ಟು, ಡೈರಿಯಲ್ಲಿರುವ ಹೂರ್ಣ ಹೊರಬಿದ್ದ ಮೇಲೆ, ‘ನೀವು ಮಾಡಿಲ್ವಾ?’ ಎನ್ನುವುದು, ನಾನು ತಿಂದಿದ್ದು ಮಾತ್ರ ಹೇಳುತ್ತೀರಾ, ಆ ರಾಜಕಾರಣಿ ತಿಂದಿಲ್ವಾ? ಎಂದು ಕೇಳಿದಂತಿದೆ.

ಕರ್ನಾಟಕದ ಜನ ಕಾಂಗ್ರೆಸ್ ಬಹಳ ನಿಷ್ಠ, ಭ್ರಷ್ಟಾಚಾರ ವಿರೋಧಿ ಎನ್ನುವುದಕ್ಕಲ್ಲವೇ ನಿಮ್ಮನ್ನು ಆರಿಸಿದ್ದು? ನೀವೂ ಬಿಜೆಪಿ ಕಡೆ ಬೆಟ್ಟು ಮಾಡಿ ತೋರಿಸಿದರೆ, ನಿಮಗೂ ಅವರಿಗೂ ಏನು ವ್ಯತ್ಯಾಸ?  ಈ ಬಿಜೆಪಿಯವರ ಮೇಲೂ ಇಂಥ ಆರೋಪಗಳು ಬಂದಿದ್ದವು. ಇಂಥ ಹಾಳು ಮೂಳು ಡೈರಿಗಳನ್ನು ಕೋರ್ಟ್‌ಗೆ ತೆಗೆದುಕೊಂಡು ಹೋದರೆ, ಬೋಂಡಾ ಕಟ್ಟಿ ಕೊಡುವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವುದು ಬೇರೆ ಮಾತು. ಇದರಿಂದ ರಾಜಕರಾಣಿಗಳು ಕಾನೂನಾತ್ಮಕವಾಗಿ ಬಚಾವ್ ಆಗಬಹುದು. ಈ ಡೈರಿಯನ್ನು ಬಹಿರಂಗ ಪಡಿಸಿದ್ದು ಐಟಿ ಅಧಿಕಾರಿಗಳು. ಅವರಿಗೆ ತನಿಖೆ ಮಾಡಿ ಮುಂದುವರಿಸುವ ಅಧಿಕಾರವಿಲ್ಲ. ಹೆಚ್ಚೆಂದರೆ ಸಿಬಿಐ ತನಿಖೆಗೆ ಮನವಿ ಮಾಡಿ ಕೊಳ್ಳಬಹುದು. ಸಿಬಿಐ ಬಂದು ಅಂಥವರನ್ನು ಪ್ರಶ್ನೆ ಮಾಡಿದಾಗ ಅವರು ಉತ್ತರಿಸಲು ನಿರಾಕರಿಸಿದರೆ, ಫೋರೆನ್ಸಿಕ್ ಲ್ಯಾಬ್‌ಗೆ ಆ ಡೈರಿಯನ್ನು ಕಳಿಸಿ, ಬೆರಳಚ್ಚು, ಕೈಬರಹವನ್ನೆಲ್ಲ ಹೋಲಿಕೆ ಮಾಡಿ ಕೊಡುತ್ತಾರೆ.

ಒಮ್ಮೆ ಅಂಥ ಕೈಬರಹ ಗೋವಿಂದ ರಾಜು ಅವರದ್ದೇ ಆಗಿದ್ದರೆ ‘ಹೇಳಿ ಸ್ವಾಮಿ, ಯಾಕಾಗಿ ಬರೆದಿರಿ?’ ಎಂದು ಕೇಳಿದರೆ, ‘ಸುಮ್ನೆ, ಏನೋ ಸಂಜೆ ಹೊತ್ತಲ್ಲಿ ತಂಪಾದ ಗಾಳಿಯಲ್ಲಿ ಏನೋ ಯೋಚನೆ ಮಾಡುತ್ತಿದ್ದಾಗ ಗೀಚಬೇಕೆ–ನಿಸಿತು.. ಗೀಚಿದೆ’ ಎಂದರೆ ಯಾವ ಯಡಿಯೂರಪ್ಪ–ನವರು ಏನೂ ಮಾಡಿಕೊಳ್ಳಲಾಗುವುದಿಲ್ಲ. ಕೋರ್ಟ್ ಪ್ರಕರಣವನ್ನು ಕೈಬಿಡುತ್ತದೆ.
ಆದರೆ ಆ ಡೈರಿಯಲ್ಲಿ ಬರೆದಿದ್ದ  DKS, SG,  RG, AP, raghu, DGS ಎಂಬ ಹೆಸರು ಗಳನ್ನು ಆರಿಸಿದ್ದು ಜನಗಳೇ ಅಲ್ಲವಾ ಸ್ವಾಮಿ? ಅವರಿಗೆ ಹೇಗೆ ಸಮಜಾಯಿಷಿ ಹೇಳುತ್ತೀರಾ? ಕಾನೂನು ಪ್ರಕಾರ ಗೋವಿಂದ ರಾಜು ಮುಸ್ಸಂಜೆ ಹೊತ್ತಲ್ಲಿ ಮನಸ್ಸಿಗೆ ಬಂದಿದ್ದನ್ನು ಗೀಚಿದರು ಎನ್ನಬಹುದು, ಆದರೆ ಜನರ ಮುಂದೆ ‘ವೋರಾಗೆ ಒಂದು ಹತ್ತು ಕೋಟಿ ಬರೆಯಬೇಕೆನಿಸಿತು’ ಎಂದು ಹೇಳಲಿ ನೋಡೋಣ?

ಇದೇ ವಿಷಯದಲ್ಲಿ ನಾನು ಒಂದು ಕನ್ನಡ ಸುದ್ದಿ ವಾಹಿನಿಯನ್ನು ನೋಡುತ್ತಿದ್ದೆ. ಅಲ್ಲಿ ನಿರೂಪಕಿಯೊಬ್ಬರು ಜಾರ್ಜ್‌ಗೆ ‘ಆ ಡೈರಿಯಲ್ಲಿ ಏನು ಬರೆದಿತ್ತು? ಯಾಕಾಗಿ ಗೋವಿಂದ ರಾಜು ಬರೆದರು?’ ಎಂದು ಪ್ರಶ್ನಿಸಿದಾಗ ‘ಅದು ಯಾಕಾಗಿ ಬರೆದಿದ್ದಾರೆ ಎಂದು ನಾನು ನಿಮಗೆ ಉತ್ತರ ಕೊಡ ಬೇಕಿಲ್ರೀ…’ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ. ಆದರೆ ಅಲ್ಲಿ ಪ್ರಶ್ನೆ ಕೇಳಿದ್ದು ನಿರೂಪಕಿಯಲ್ಲ, ಬದಲಿಗೆ ಕರ್ನಾಟಕದ ಜನತೆ ಎಂಬುದನ್ನು ಜಾರ್ಜ್ ಮರೆತೇ ಹೋಗಿದ್ದರು. ಇದೇ ರೀತಿ, ಆ ಸುದ್ದಿ ವಾಹಿನಿಯಲ್ಲಿ ದಿನೇಶ್ ಗುಂಡೂರಾವ್, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಮಾತನಾಡಿಸಿದರು. ಆದರೆ, ಅವರೆಲ್ಲರೂ ಹಾರಿಕೆಯ ಉತ್ತರ ಕೊಡುತ್ತಾ ಬಿಜೆಪಿಯವರನ್ನು ದೂರಿದರೇ ವಿನಾ ಒಬ್ಬರೂ ‘ಕಾಂಗ್ರೆಸ್ ಇಂಥ ತಪ್ಪು ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದಕ್ಕೆ ಸಾಕ್ಷಿ ಇದೆ’ ಎಂಬ ಪ್ರಬುದ್ಧ ಮಾತುಗಳನ್ನಾಡಲೇ ಇಲ್ಲ. ಸಾಕ್ಷಿ, ದಾಖಲೆ ಬೇಡ ಬಿಡಿ, ಲಾಜಿಕಲ್ ಆಗಿಯೂ ಯಾರೂ ಇದನ್ನು ವಿವರಿಸುವ ಗೋಜಿಗೆ ಹೋಗಿಲ್ಲ. ಇಂಥವರು ಸತ್ಯಮೇವ ಜಯತೆ ಬಗ್ಗೆ ಮಾತಾಡುತ್ತಾರೆ ಎನ್ನುವುದು ಹಾಸ್ಯವಲ್ಲದೇ ಇನ್ನೇನು?

ನೂರು ಕೋಟಿ ಎಂದು ಇಂಥ ಡೈರಿಯ ಮೇಲಲ್ಲ, ರಾಜಕಾರಣಿಗಳು ಹಣೆಯ ಮೇಲೆ ಬರೆದುಕೊಂಡು ಓಡಾಡಿದರೂ ಜನ ಒಬ್ಬರೂ ನಾಯಕರನ್ನು ಪ್ರಶ್ನಿಸುವುದಿಲ್ಲ. ಅವರು ಉತ್ತರಿಸುವುದು ಚುನಾವಣೆಯಲ್ಲೇ. ಇನ್ನೇನು ಒಂದೇ ವರ್ಷದಲ್ಲಿ ಚುನಾವಣೆ ಬಂದೇ ಬಿಟ್ಟಿತು. ಈ ಡೈರಿ ಬಾಂಬ್ ಆಗ ಮತ್ತೊಮ್ಮೆ ಸಿಡಿಯುವುದಿಲ್ಲ ಎಂದು ಕೊಂಡರೂ ಜನರ ಮನಸ್ಸಲ್ಲಿ ಅದು ಹಾಗೇ ಇರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. Public Memory is Short ಎಂದು ಅರವತ್ತು ವರ್ಷಗಳಿಂದ ಉಡಾಫೆ ಮಾಡಿದ್ದ ರಾಜಕಾರಣಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ಉತ್ತರ ಸಿಕ್ಕಿದೆ. ಅಂಥದ್ದೇ ಧೋರಣೆ ಇಟ್ಟುಕೊಂಡಿದ್ದರೆ ಮುಂದಿನ ಚುನಾವಣೆಯೊಳಗೆ ಬದಲಿಸಿಕೊಳ್ಳುವುದೊಳಿತು. ಇಲ್ಲದಿದ್ದರೆ, ಮುಂದೆ ಎಚ್ಚೆತ್ತುಕೊಳ್ಳಲು ಇನ್ನೂ ಐದು ವರ್ಷ ಕಾಯಬೇಕಾದೀತು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya