ಒಬ್ಬ ಕೋಪಿಷ್ಟ ಅಪ್ಪ ಮತ್ತು ಮಗ ಇದ್ದರು. ಯಾವಾಗ ನೋಡಿದರೂ ಅವಾಚ್ಯ ಶಬ್ದದಿಂದಲೇ ಮಾತು ಶುರು ಮಾಡುವಷ್ಟು ಕೋಪ. ಮನೆಯವರೆಲ್ಲರೂ ಇದರಿಂದ ರೋಸಿ ಹೋಗಿದ್ದರು. ಇಂಥ ಅಪ್ಪ ಒಮ್ಮೆ ಕಾಶಿಗೆ ಹೊರಟಿದ್ದ. ಕಾಶಿಗೆ ಹೋದಾಗ ದೇವರ ಹೆಸರು ಹೇಳಿ, ಹವ್ಯಾಸ, ತಿಂಡಿ-ತಿನಿಸು ತಿನ್ನುವುದು ಇತ್ಯಾದಿಗಳನ್ನು ಬಿಟ್ಟು ಬರುವುದು ವಾಡಿಕೆ. ಅದರಂತೆ ಕಾಶಿಗೆ ಹೋದವನು ಏನು ಬಿಟ್ಟು ಬಂದೆ ಎಂದು ಮಗ ಅಪ್ಪನನ್ನು ಕೇಳಿದ. ಅದಕ್ಕೆ ಅಪ್ಪ ಶಾಂತವಾಗಿ ‘ಸಿಟ್ಟನ್ನು ಬಿಟ್ಟು ಬಂದೆ’ ಎಂದ. ಇಷ್ಟು ಕೂಲ್ ಆಗಿ ಅಪ್ಪ ಯಾವತ್ತೂ ಮಾತಾಡಿದ್ದು ಮಗ ಕೇಳಿಯೇ ಇರಲಿಲ್ಲ. ಇನ್ನು ಸಿಟ್ಟು ಬಿಟ್ಟೆ ಎಂದರೆ ಅದನ್ನು ನಂಬಲು ಸಾಧ್ಯವೇ? ಅದೇ ಉತ್ಸಾಹದಲ್ಲಿ ಅಪ್ಪನಿಗೆ ಮತ್ತೊಮ್ಮೆ ಕೇಳಿದ ‘ಅಪ್ಪ ನಿಜವಾಗಿಯೂ ಸಿಟ್ಟು ಬಿಟ್ಯಾ?’. ‘ಹೌದು ಮಗನೇ.. ಸಿಟ್ಟು ಬಿಟ್ಟೆ’ ಮಗ ಇನ್ನೂ ಉತ್ಸಾಹದಿಂದ ಎರಡನೇ ಸಲವೂ ಅದನ್ನೇ ಕೇಳಿ. ಅಪ್ಪ ಶಾಂತವಾಗಿಯೇ ಉತ್ತರಿಸಿದ. ಮೂರನೇ ಬಾರಿ ಕೇಳಿದ ‘ಅಪ್ಪ ನಿಜ? ನಿಜವಾಗಿಯೂ ಸಿಟ್ಟು ಬಿಟ್ಯಾ?’ ಅಪ್ಪ ಒಂದೇ ಸಲ ಎದ್ದು ನಿಂತು ‘ಎಷ್ಟು ಸಲ ಹೇಳಬೇಕೋ ಬೋ*ಮಗನೇ ಸಿಟ್ಟು ಬಿಟ್ಟೆ ಅಂತ… ಮತ್ ಇನ್ನೊಂದ್ ಸಲ ಕೇಳಿದ್ರೆ ನಾನ್ ಮನುಷ್ಯ ಆಗಿರಲ್ಲ ನೋಡು’ ಎಂದ. ಮಗ ಅಳುತ್ತಾ ವಾಪಸ್ ಹೋದ!
ಇದು ಕಥೆಯೇ ಇರಬಹುದು. ಆದರೆ ಈ ಕಥೆ ಈಗ ಹೆಚ್ಚು ಅನ್ವಯವಾಗುವುದು ಅಗ್ನಿ ಶ್ರೀಧರ್ಗೆ.
ಭೂಗತ ಲೋಕವನ್ನು ಅಲ್ಲಾಡಿಸಿದ ಕೊತ್ವಾಲ್ ರಾಮಚಂದ್ರ ಮತ್ತು ಜಯರಾಜ್ ಕಾಲವದು. ಆ ಲೋಕಕ್ಕೆ ಆಕಸ್ಮಿಕವಾಗಿ ಪ್ರವೇಶ ಪಡೆದಿದ್ದು ಶ್ರೀಧರ್. ಕಾರಣ ಬಹಳ ವಿಶೇಷವೇನೂ ಇಲ್ಲ. ರೌಡಿ ಭಾಷೆಯಲ್ಲೇ ಹೇಳುವುದಾದರೆ, ಏರಿಯಾದಲ್ಲಿ ಒಂದು ಹವಾ ಇಡಬೇಕು ಎಂದು ಫೀಲ್ಡಿಗೆ ಬಂದಿದ್ದು ಶ್ರೀಧರ್. ಜತೆಗೆ ಕೊತ್ವಾಲ್ ಜೊತೆ ಸಣ್ಣ ವೈಷಮ್ಯ ಬೇರೆ ಇತ್ತು. ಆದರೆ ಒಬ್ಬರೇ ಹೋರಾಡುವುದಕ್ಕೆ ದಮ್ಮು ಇರಲಿಲ್ಲ, ಸ್ಕೆಚ್ಚೂ ಇರಲಿಲ್ಲ. ಇಂಥ ಸಮಯದಲ್ಲಿ ಅವರಿಗೆ ಕಂಡಿದ್ದು ಕೊತ್ವಾಲ್ ಕಟ್ಟಾ ವಿರೋಧಿ ಜಯರಾಜ್. ಶತ್ರುವಿನ ಶತ್ರು ಮಿತ್ರ ಎಂಬಂತೆ ಕೊತ್ವಾಲ್ನನ್ನು ಕೊಲ್ಲುವುದಾಗಿ ಜಯರಾಜ್ ಜತೆ ಡೀಲ್ ಮಾಡಿಕೊಂಡು, ಕೊತ್ವಾಲ್ ಗ್ಯಾಂಗ್ ಸೇರಿಕೊಂಡರು. ಕೊತ್ವಾಲ್ ಜತೆಜತೆಗೆ ಇದ್ದು ಅವರನ್ನು ನಂಬಿಸಿ ಕತ್ತು ಕೊಯ್ಯುವುದಕ್ಕೆ ಸ್ಕೆಚ್ ಹಾಕಿದ್ದ. ಶ್ರೀಧರ್ ಪ್ಲಾನ್ ಪ್ರಕಾರವೇ ಕೊತ್ವಾಲ್ ಹತ್ಯೆಯಾಗಿದ್ದ. ಇದು ಶ್ರೀಧರ್ ಬಗ್ಗೆ ಸಂಕ್ಷಿಪ್ತ ವರದಿ. ಇದನ್ನು ಅವರೇ ‘ದಾದಾಗಿರಿಯ ದಿನಗಳು’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ‘ಆ ದಿನಗಳು’ ಸಿನೆಮಾದಲ್ಲೂ ಇದೇ ಇರುವುದು.
ಕೊತ್ವಾಲ್ ಸತ್ತ ಮೇಲೆ ಎಲ್ಲೆಡೆ ಶ್ರೀಧರ್ ಬೆಂಗಳೂರು ಅಂಡರ್ವಲ್ಡ್ ಗೆ ತಾನೇ ಕಿಂಗ್ ಎಂದು ಬಿಂಬಿಸಿಕೊಳ್ಳಲು ಶುರು ಮಾಡಿದ. ಗೊಬೆಲ್ಸ್ ಥಿಯರಿಯಂತೆ ಸುಳ್ಳನ್ನೇ ನೂರು ಬಾರಿ ಹೇಳಿ ಹೇಳಿ, ಡಾನ್ ಎಂಬ ಪಟ್ಟ ಪಡೆದುಕೊಂಡ. ನಂತರ ತನ್ನ ಮೇಲಿನ ಆರೋಪವನ್ನೆಲ್ಲ ಮುಚ್ಚಿ ಹಾಕಿಕೊಳ್ಳಲು ‘ಅಗ್ನಿ’ ಎಂಬ ಪತ್ರಿಕೆ ಶುರು ಮಾಡಿದ. ಅಂಡರ್ವಲ್ಡ್ ಡಾನ್ ಶ್ರೀಧರ್ ಅಗ್ನಿ ಶ್ರೀಧರ್ ಆಗಿದ್ದು ಆಗ. ಇಷ್ಟು ದಿನ ಲಾಂಗು, ಮಚ್ಚು, ಗನ್ನುಗಳನ್ನೇ ಹಿಡಿಯುತ್ತಿದ್ದ ರೌಡಿ, ಅಗ್ನಿ ಶ್ರೀಧರ್, ಪತ್ರಕರ್ತ ಶ್ರೀಧರ್, ಪ್ರಗತಿಪರ ಶ್ರೀಧರ್, ಚಿಂತಕ ಶ್ರೀಧರ್ ಆದರು. ಪೊಲೀಸರು ಅಂದೇ ಗೊಳ್ಳೆಂದು ನಕ್ಕಿದ್ದರು. ಮೇಲೆ ಹೇಳಿದ ಕೋಪಿಷ್ಟ ಅಪ್ಪನ ಕಥೆಯಂತೆ, ಅಗ್ನಿ ಶ್ರೀಧರ್ ಹೆಸರು ಆಗಾಗ ಫೀಲ್ಡಲ್ಲಿ ಕೇಳಿ ಬರುತ್ತಿತ್ತು.
ಆದರೆ ಪತ್ರಿಕೆ, ಹೋರಾಟ, ಪ್ರಗತಿಪರ ನಿಲುವು, ‘ನ್ಯಾಯಕ್ಕಾಗಿ ನಾವು’ ಎಲ್ಲವೂ ಒಂದು ಮುಖವಾಡವೇ ಹೊರತು ಶ್ರೀಧರ್ ಭೂಗತ ಲೋಕದಿಂದ ಹೊರಬಂದಿರಲೇ ಇಲ್ಲ. ಹಾಗೆ ಬರುವುದು ಸಾಧ್ಯವೂ ಇಲ್ಲ. ಹೊರಗೆ ಪರಿಸ್ಥಿತಿಯೇ ಬೇರೆ ಥರ ಇತ್ತು. ಜನರೆಲ್ಲರೂ ಈತ ಭೂಗತ ಲೋಕದಿಂದ ಹೊರಬಂದು ಒಳ್ಳೆಯವನಾಗಿದ್ದಾನೆ ಎಂದೇನೂ ಭಾವಿಸಿರಲಿಲ್ಲ. ಆದರೂ ಕೊಂಚ ಗೊಂದಲವಂತೂ ಸೃಷ್ಟಿಯಾಗಿತ್ತು. ನಾನೂ ಇಂಥ ಅನುಮಾನದಲ್ಲೇ ಇದ್ದೆ. ಆದರೆ ಎಲ್ಲಿಯ ತನಕ? ನನಗೂ ಒಂದು ಬೆದರಿಕೆ ಬರುವ ತನಕ.
ಇತ್ತೀಚೆಗೆ ಅಗ್ನಿ ಶ್ರೀಧರ್ ಪ್ರಧಾನಿ ಮೋದಿಯವರ ನೋಟು ಅಮಾನ್ಯದ ಬಗ್ಗೆ ಒಂದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ನಾನು ಅದನ್ನೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದೆ. ಅದಕ್ಕೆ ರೊಚ್ಚಿಗೆದ್ದ ಇದೇ ಅಗ್ನಿ ಶ್ರೀಧರನ ರೋಲ್ ಕಾಲ್ ಸಂಘಟನೆಯೊಂದರ ವಾರ್ಡ್ ಮುಖ್ಯಸ್ಥ ಹಾಗೂ ಯೂತ್ ಕಾಂಗ್ರೆಸ್ನ ವೈಸ್ ಪ್ರೆಸಿಡೆಂಟ್ ಒಬ್ಬ ನನ್ನ ಬಳಿ ಬಂದು – ‘ಲೋ ಕಂದ ಒಳ್ಳೆ ಮಾತಿನಿಂದ ಹೇಳುತ್ತಿದ್ದೇನೆ, ನೀನು ಅಗ್ನಿ ಶ್ರೀಧರ್ ಸರ್ ಬಗ್ಗೆ ಹಾಕಿರುವ ಪೋಸ್ಟ್ ತೆಗೆದರೆ ಸರಿ… ಇಲ್ಲ ಅಂದ್ರೆ ನಾನು ಬೇರೆ ಥರ ಹೇಳ್ಬೇಕಾಗುತ್ತೆ… ಎಲ್ಲೋ ನಿನ್ ಮನೆ? ಈಗಲೇ ಬರ್ತೀನಿ… ಅಡ್ರೆಸ್ ಕೊಡು’ ಎಂದು ಮಧ್ಯರಾತ್ರಿ ಒಂದೂವರೆ ಗಂಟೆಗೆ ನನಗೆ ಬೆದರಿಕೆ ಹಾಕಿದ್ದ. ನಾನು ಅದಕ್ಕೆ ಪ್ರತ್ಯುತ್ತರವಾಗಿ ‘ನಿನ್ನ ಕಾಮಿಡಿಯನ್ನು ರಾತ್ರಿ ಕೇಳಕ್ಕೆ ನಂಗೆ ಮೂಡ್ ಇಲ್ಲ. ನಾಳೆ ಬೆಳಗ್ಗೆ ಬಾ ಮಾತಾಡೋಣ’ ಎಂದು ದೂರ ತಳ್ಳಿದ್ದೆ. ಪತ್ರಕರ್ತ ಅಗ್ನಿ ಶ್ರೀಧರ್ ಹುಡುಗರನ್ನು ಇನ್ನೂ ಮೇಂಟೇನ್ ಮಾಡುತ್ತಾ ಇದ್ದಾನೆ ಎಂದು ಗೊತ್ತಾಗಿದ್ದೇ ಆಗ. ನನಗೆ ಬೆದರಿಕೆಯೊಡ್ಡಿದವನ ಬಗ್ಗೆ ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಆ ಹುಡುಗನ ಮೇಲೆ ಸುಮಾರು ಹಾಫ್ ಮರ್ಡರ್ ಕೇಸ್ಗಳಿವೆ ಮತ್ತು ಜನವರಿ ಒಂದರಂದು ಯುಬಿ ಸಿಟಿಯಲ್ಲಿ ಎರಡು ಗುಂಪಿನ ನಡುವೆ ಗ್ಯಾಂಗ್ ವಾರ್ ಆಗಿ ಒಬ್ಬನಿಗೆ ಬಿಯರ್ ಬಾಟಲ್ನಲ್ಲಿ ಚುಚ್ಚಿದ ಪ್ರಕರಣದಲ್ಲಿ ಇವನೂ ಇದ್ದ. ಇಂಥವನು ಅಗ್ನಿಯ ಬಲಗೈ ಬಂಟ ಎಂದೂ ತಿಳಿದುಕೊಂಡೆ. ಇಂಥವರು ಸನ್ಮಾನ್ಯ ಶ್ರೀ ಶ್ರೀ ಅಗ್ನಿ ಶ್ರೀಧರ್ ಜೋಳಿಗೆಯಲ್ಲಿರುವಾಗ, ರೌಡಿ ಶೀಟರ್ ಶ್ರೀಧರ್ ‘ಆ ದಿನಗಳನ್ನು’ ಮರೆತಿದ್ದಾನೆ ಎಂದು ಹೇಳುವುದಾದರೂ ಹೇಗೆ?
ಮೊನ್ನೆ ಪೊಲೀಸರು ಒಂಟೆ ರೋಹಿತ್ ಮತ್ತು ಬಚ್ಚನ್ನನ್ನು ಅರಸಿ ಶ್ರೀಧರ್ ಮನೆ ಮೇಲೆ ದಾಳಿ ಮಾಡಿದಾಗಲೂ ಅವರು ಇದೇ ಸಂಘಟನೆಯ ಹೆಸರು ಹೇಳಿ, ಅವರೆಲ್ಲ ಒಳ್ಳೆಯವರಾಗಿ ನನ್ನ ಸಂಘಟನೆಯಲ್ಲಿ ಕಾರ್ಯಕರ್ತರಾಗಿದ್ದಾರೆ ಎಂದು ತಡಬಡಾಯಿಸಿದರು. ಸರಿ ಇದನ್ನು ಅಗ್ನಿ ಶ್ರೀಧರ್ ಹೆಸರಲ್ಲಿ ಬೇರೆ ಯಾರೋ ಬೆದರಿಕೆ ಹಾಕಿದರು ಎಂದೇ ತಿಳಿಯೋಣ. ಮೊನ್ನೆ ಪೊಲೀಸರ ಮುಂದೆ ಸ್ವತಃ ಶ್ರೀಧರನ ವರ್ತನೆ ಹೇಗಿತ್ತು? ಎತ್ತಿದ ಮಾತಿಗೆ ನನ್ನ ಹಿಂದೆ ಪ್ರಗತಿಪರರು ಇದ್ದಾರೆ. ಮಾನವ ಹಕ್ಕು ಆಯೋಗಕ್ಕೆ ಒಂದು ಮಾತು ಹೇಳಿದರೆ ಸಾಕು ಕಥೆ ಏನಾಗುತ್ತೆ ಗೊತ್ತಲ್ಲ ಎಂದು ಹೇಳುವುದು ಒಬ್ಬ ಪತ್ರಕರ್ತನ ಮನಸ್ಥಿತಿ ತೋರಿಸುತ್ತದೆಯೋ ಅಥವಾ ಯಾವುದೋ ಬುದ್ಧಿಜೀವಿ ರೌಡಿಯ ಮನಸ್ಥಿತಿಯನ್ನು ಸೂಚಿಸುತ್ತದೆಯೋ? ಮತ್ತೊಂದು ವಿಚಾರವನ್ನು ಗಮನಿಸಿ, ಪೊಲೀಸರ ಬಳಿ ಸಾರ್ವಜನಿಕರು ಬಿಡಿ, ಅವರನ್ನು ನಿತ್ಯ ಭೇಟಿ ಆಗುವ, ಕರೆ ಮಾಡುವ ಪತ್ರಕರ್ತರೇ ಬಹಳ ನಾಜೂಕಾಗಿ ಮಾತಾಡುತ್ತಾರೆ. ಹಾಗಿರುವಾಗ ಒಬ್ಬ ರೌಡಿ ಶೀಟರ್, ಪೊಲೀಸ್ ಹೆಚ್ಚುವರಿ ಆಯುಕ್ತ ನಿಂಬಾಳ್ಕರ್ ಅಂಥವರಿಗೇ ‘ಏನ್ ಗುರಾಯಿಸುತ್ತಾ ಇದ್ದೀಯ?’ ಎಂದು ಅವಾಜ್ ಹಾಕುತ್ತಾನೆಂದರೆ ಅವನ ಹಿಂದೆ ಎಂಥೆಂಥಾ ಕೈ ಇರಬಹುದು ಊಹಿಸಿ!
ರೌಡಿ ಶೀಟರ್ ಶ್ರೀಧರ ಮತ್ತು ಪೊಲೀಸ್ ಸಂಭಾಷಣೆಯಲ್ಲಿ ಪ್ರಮುಖವಾದ ಸಂಗತಿಯೊಂದರ ಬಗ್ಗೆ ಹೇಳಲೇಬೇಕು. ಪ್ರಗತಿಪರರು, ಸಾಹಿತಿಗಳು, ಚಿಂತಕರು ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಕೆಲವರು ಅವಕಾಶ, ಪ್ರಶಸ್ತಿ ಮತ್ತು ಗಂಜಿಗಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಇತ್ತೀಚೆಗೆ ಸುಮಾರು ವಾದಗಳು ಕೇಳಿಬಂದವು. ಅದಕ್ಕೆಲ್ಲ ಈ ಬೃಹಸ್ಪತಿಗಳು ನಾವು ನಿಜವಾಗಿಯೂ ಕಾಳಜಿಯುಳ್ಳವರು ಎಂದು ತಿಪ್ಪೆ ಸಾರಿದ್ದರು. ಪೊಲೀಸರ ಮುಂದೆ ಶ್ರೀಧರ್ ಆಡಿದ ಮಾತು ನೋಡಿದರೆ, ಪ್ರಗತಿಪರರು, ಚಿಂತಕರೆಲ್ಲರೂ ಗಂಜಿ ಮತ್ತು ಫಾರಿನ್ ಸ್ಕಾಚ್ಗಾಗಿ ಯಾರ ಯಾರದ್ದೋ ಕಾಲ ಕೆಳಗಿದ್ದಾರೆ ಎಂದು ಮನವರಿಕೆಯಾಗುತ್ತದೆ. ಇಲ್ಲವಾಗಿದ್ದರೆ, ಒಬ್ಬ ರೌಡಿ ಶೀಟರ್ನನ್ನು ಅವನ ಪಾಪದ ಕೊಡ ತುಂಬಿದಾಗ ಪೊಲೀಸರು ಕರೆದುಕೊಂಡು ಹೋಗುವುದಕ್ಕೆ ಬಂದರೆ, ಮಾನವ ಹಕ್ಕು ಆಯೋಗವನ್ನು ಕರೆಸುತ್ತೇನೆ ಎನ್ನುವ ಧೈರ್ಯ ತೋರುತ್ತಿರಲಿಲ್ಲ. ಇದರಿಂದ ಮಾನವ ಹಕ್ಕು ಆಯೋಗದ ನಿಯತ್ತಿನ ಬಗ್ಗೆಯೂ ಪ್ರಶ್ನೆಗಳೇಳುವುದಂತೂ ಸುಳ್ಳಲ್ಲ.
ಈ ಚಿಂತಕರು ಶ್ರೀಧರ್ಗೆ ಎಷ್ಟು ನಿಯತ್ತಾಗಿದ್ದಾರೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತೇನೆ ನೋಡಿ. ಸಹಜವಾಗಿ ಒಬ್ಬ ನಟೋರಿಯಸ್, ಗಣ್ಯ, ಗೌರವಾನ್ವಿತ ವ್ಯಕ್ತಿಯ ಬಂಧನವಾದರೆ, ಮನೆಯ ಮೇಲೆ ಪೊಲೀಸ್ ದಾಳಿ, ಐಟಿ ದಾಳಿಗಳಾದರೆ ನಾವು ಪತ್ರಕರ್ತರು ಅಂಥವರ ಜತೆ ಹೆಚ್ಚಾಗಿ ಗುರುತಿಸಿಕೊಂಡವರ, ಸ್ನೇಹಿತರ, ಅದೇ ರಂಗದಲ್ಲಿರುವವರ ಬಳಿ ದಾಳಿಯ ಬಗ್ಗೆ ಅಭಿಪ್ರಾಯ ಪಡೆಯುವುದುಂಟು. ಹಾಗೆ ಅಗ್ನಿ ಶ್ರೀಧರ್ ಮನೆ ಮೇಲೆ ಮಾಡಿದ ಪೊಲೀಸ್ ದಾಳಿಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಎಲ್ಲರೂ ನಂಗೇನೂ ಗೊತ್ತಿಲ್ಲ, ನೀವ್ ಹೇಳಿದಮೇಲೇ ನಂಗೂ ಗೊತ್ತಾಗಿದ್ದು ಎಂದರು. ಇನ್ನು ಕೆಲವರು ನಾವು ಯಾವ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ, ನಮ್ಮ ಫೇಸ್ಬುಕನಲ್ಲಿ ಬರೆದುಕೊಂಡಿದ್ದೇವೆ ಅದನ್ನೇ ತೆಗೆದುಕೊಳ್ಳಿ ಎಂದರು. ಅಷ್ಟರಲ್ಲಿ ಅಗ್ನಿ ಶ್ರೀಧರ್ ನಾಟಕ ಮಾಡಿಯೋ ಅಥವಾ ನಿಜವಾಗಿಯೋ ಸಣ್ಣ ಹೃದಯಾಘಾತ ಎಂದು ಆಸ್ಪತ್ರೆ ಸೇರಿದರು. ಅಚ್ಚರಿಯೇನೆಂದರೆ, ನಮಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಲ್ಲ ಸಾಹಿತಿಗಳು, ಚಿಂತರು, ವಿಚಾರವಾದಿಗಳು, ಕವಯತ್ರಿಗಳು, ಬಿಳಿ ಮಂಡೆ ಸಾಹಿತಿಗಳು, ತಳಸ್ಪರ್ಶಿಗಳು ದಿಬ್ಬಣ ಸಮೇತ ಆಸ್ಪತ್ರೆಗೆ ಧಾವಿಸಿ ಅಗ್ನಿ ಶ್ರೀಧರ್ರ ಆರೋಗ್ಯ ವಿಚಾರಿಸಿದ್ದಾರೆ.
ಪ್ರತಿಕ್ರಿಯೆ ಕೇಳುವಾಗ ಏನಾಗಿದೆಯೆಂದು ಗೊತ್ತಿಲ್ಲದವರು ಆಸ್ಪತ್ರೆಗೆ ದೌಡಾಯಿಸಿದ್ದು ಮಾತ್ರ ಸಾಹಿತ್ಯ ಲೋಕದ ದೊಡ್ಡ ದುರಂತ ಮತ್ತು ಇಂಥ ನಡೆ ರೌಡಿ ಶೀಟರ್ ಒಬ್ಬನನ್ನು ಸಾಹಿತಿ, ಪ್ರಗತಿಪರ ಎಂದು ಬಿಂಬಿಸುವ ನಾಟಕವಷ್ಟೇ. ಪತ್ರಕರ್ತ ಉರುಫ್ ಹೋರಾಟಗಾರ ಉರುಫ್ ಪ್ರಗತಿಪರ ಶ್ರೀಧರ್ ಮನೆಯಲ್ಲಿ ದಾಳಿ ವೇಳೆ ಸಿಕ್ಕ ಮಾರಕಾಸ್ತ್ರಗಳು, ಗನ್ಗಳು, ಸಜೀವ ಗುಂಡುಗಳು, ಗಾಂಜಾ ಇತ್ಯಾದಿಗಳು ಅಗ್ನಿಯ ‘ಆ ದಿನಗಳ’ ಅಧ್ಯಾಯ ಇನ್ನೂ ತೆರೆದೇ ಇರುವುದನ್ನು ಸಾರುತ್ತಿದ್ದರೆ, ಸಾಹಿತಿಗಳು, ಚಿಂತಕರು, ಪ್ರಗತಿಪರರು ಅಂಡು ಸುಟ್ಟುಕೊಂಡು ಆಸ್ಪತ್ರೆಗೆ ದೌಡಾಯಿಸಿರುವುದನ್ನು ನೋಡಿದರೆ ಇವರನ್ನೆಲ್ಲ ಪಕ್ಕದಲ್ಲಿಟ್ಟುಕೊಂಡರೆ ತಾನು ಸೇಫ್ ಆಗಿಬಿಡುತ್ತೇನೆಂಬ, ಪತ್ರಕರ್ತ ಎಂದ ಮಾತ್ರಕ್ಕೆ ತನ್ನನ್ನು ಯಾರೂ ಪ್ರಶ್ನೆ ಮಾಡುವುದಕ್ಕಾಗುವುದಿಲ್ಲವೆಂಬ ಮತ್ತು ದಂಧೆಗೆ ಯಾವುದೇ ಅಡ್ಡಿ ಆತಂಕ ಬರುವುದೇ ಇಲ್ಲವೆಂಬ ಭ್ರಮೆಯಲ್ಲಿ ಅಗ್ನಿ ಶ್ರೀಧರ್ ಸಹ ಇದ್ದಾನೆ ಎಂದು ಗೋಚರವಾಗುತ್ತಿದೆ. ಆದರೆ, ಅಗ್ನಿ ಶ್ರೀಧರ್ ಸ್ಥಾನ ಪಡೆದಿರುವುದು ಕರ್ನಾಟಕ ಪೊಲೀಸ್ ಮಾಡಿರುವ ರೌಡಿ ಲಿಸ್ಟ್ನಲ್ಲಿ. ನಸೀಬು ತಿರುಗಿ ಅಮೆರಿಕದ ಅಧ್ಯಕ್ಷನಾದರೂ ಕರ್ನಾಟಕ ಪೊಲೀಸ್ ಪಾಲಿಗೆ ರೌಡಿ ಶೀಟರ್ರೇ! ಇನ್ನು ಅಗ್ನಿ ಶ್ರೀಧರ್ ಪತ್ರಕರ್ತನೋ? ಸಮಾಜ ಸೇವಕನೋ? ವಿಚಾರವಾದಿಯೋ? ಚಿಂತಕನೋ? ರೌಡಿ ಶೀಟರ್ರೋ? ಮತ್ತೊಂದೋ ಎಂದು ನೀವೇ ನಿರ್ಧರಿಸಿ.ಎಷ್ಟು ದಿನ ಮುಖವಾಡ ಧರಿಸಿ ಬದುಕಲು ಸಾಧ್ಯ ಹೇಳಿ?