ಜನವರಿ 1 ಮತ್ತು 2ನೇ ತಾರೀಕಿನ ಪತ್ರಿಕೆ ಮತ್ತು ಮಾಧ್ಯಮಗಳನ್ನು ನೋಡಿ ಅಚ್ಚರಿ ಆಯ್ತು ಮತ್ತು ಕೋಪವೂ ಬಂತು. ಎಂ.ಜಿ ರಸ್ತೆಯಲ್ಲಿ ಹೊಸ ವರ್ಷದ ಪಾರ್ಟಿಯ ನಂತರ ಬೆಂಗಳೂರಿನ ಬಗ್ಗೆ ಕೇಳಿಬಂದ ಸಾಲುಗಳು ನಿಜಕ್ಕೂ ಕೆರಳಿಸುವಂತಿತ್ತು. ಶೇಮ್ ಶೇಮ್ ಬೆಂಗಳೂರು, Bengaluru Unsafe for girls, Shame Karnataka, Shame Bengaluru Police, Caution: Rascals around you!
ಆಂಗ್ಲ ಮಾಧ್ಯಮಗಳು ಬೆಂಗಳೂರು ಬಿಹಾರಕ್ಕಿಂತ ಕೆಟ್ಟದ್ದು, ಬೆಂಗಳೂರಿನಲ್ಲಿ ಮರ್ಯಾದಸ್ತ ಹೆಣ್ಣು ಮಕ್ಕಳು ಬದುಕುವುದೇ ಅಸಾಧ್ಯ ಎಂಬ ರೀತಿಯಲ್ಲೇ ಬಿಂಬಿಸಿದ್ದವು. ಇದನ್ನು ನೋಡಿ ರೊಚ್ಚಿಗೆದ್ದ ಕನ್ನಡ ಮಾಧ್ಯಮಗಳು ‘ಬೆಂಗಳೂರನ್ನು ನೀವೇನು ಹಣಿಯುವುದು. ನಮಗೆ ಬರಲ್ವಾ’ ಎಂದು ಒಂದಾದ ಮೇಲೊಂದು ಕಾರ್ಯಕ್ರಮ ಮಾಡುತ್ತಾ ಬಂದವು. ಈಗ ಹೊರರಾಜ್ಯದವರು ‘ಬೆಂಗಳೂರು ಅಸುರಕ್ಷಿತ’ ಎಂದು ಹಣೆಪಟ್ಟಿ ಹಚ್ಚಿಬಿಟ್ಟಿದ್ದಾರೆ.
ಇದೇ ಮಾಧ್ಯಮಗಳು ಡಿಸೆಂಬರ್ 31ಕ್ಕೆ ಕೊಟ್ಟ ಹೆಡ್ಲೈನ್ಗಳು ಹೀಗಿತ್ತು:: Party On in Namma Bengaluru, M.G Road ready for some craziness ಎಂದು ಇಂಗ್ಲಿಷ್ ಪೇಪರ್ಗಳು ಹೇಳಿದರೆ, ಕನ್ನಡದಲ್ಲಿ ಅತ್ಯಂತ ಟಿಆರ್ಪಿ ಹೊಂದಿರುವ ನ್ಯೂಸ್ ಚಾನೆಲೊಂದು ರಾತ್ರಿ ಸುಮಾರು 9.30ಕ್ಕೆ ಒಂದು ಕಾರ್ಯಕ್ರಮ ಪ್ರಸಾರ ಮಾಡಿತ್ತು. ಅದರಲ್ಲಿ ‘ಬೆಂಗಳೂರು ಝಗಮಗಿಸುತ್ತಿದೆ’, ‘ಲಲನೆಯರ ಮಸ್ತ್ ಡ್ಯಾಾನ್ಸ್’ ಎಂದು ತಲೆಬರಹ ಕೊಟ್ಟು, ಹೆಣ್ಣು ಮಕ್ಕಳು ಪಬ್ಗಳಲ್ಲಿ ಡ್ಯಾಾನ್ಸ್ ಮಾಡುತ್ತಿರುವ ವಿಡಿಯೊ ಪ್ರಸಾರ ಮಾಡುತ್ತಿದ್ದರು. ಡ್ಯಾಾನ್ಸ್ ಸಹಜವಾಗಿ ಮಾಡುತ್ತಿದ್ದರೂ, ಕ್ಯಾಾಮೆರಾಮನ್ ಮಾತ್ರ ಅವಳ ಎದೆಯನ್ನೇ ಜೂಮ್ ಮಾಡಿ ತೋರಿಸುತ್ತಿದ್ದ! ಕ್ಯಾಾಮೆರಾಮನ್ಗೇನೋ ಚಪಲ ಇತ್ತು ಹಾಗೆ ರೆಕಾರ್ಡ್ ಮಾಡಿದ ಎನ್ನೋಣ, ಅದನ್ನು ಪ್ರಸಾರ ಮಾಡೋ ಟಿವಿಯವರು ಎಂಥ ಮುಠ್ಠಾಳರು? ಮಾರನೇ ಇದೇ ಚಾನೆಲ್ ಬೆಂಗಳೂರಿನ ಸುರಕ್ಷತೆಯ ಬಗ್ಗೆ ಪುಂಖಾನುಪುಂಖವಾಗಿ ಹೇಳುತ್ತಿದೆ. ಇಂಥ ಮಾತು ಹೇಳುವುದಕ್ಕೆ ಇವರಿಗೆ ನೈತಿಕತೆಯಾದರೂ ಎಲ್ಲಿಂದ ಬಂತು.
ಮಾಧ್ಯಮಗಳು ಹಾಕಿದ್ದನ್ನೇ ನೋಡಿದ ಕೆಲ ಹೊಸ ವರ್ಷದ ಓರಾಟಗಾರರು ‘ಬೆಂಗಳೂರು ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ’ ಎಂದು ಊಳಿಡುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಮೈ ಕಾಣಿಸುವ ಹಾಗೆ ವಸ್ತ್ರ ಧರಿಸುತ್ತಾರೆ. ಅಷ್ಟಕ್ಕೇ ಅವರಿಗೆ ಲೈಂಗಿಕ ಕಿರುಕುಳ ಕೊಡುವ ಹುಡುಗರ ಮನಸ್ಥಿತಿ ಸರಿ ಇಲ್ಲ. ಅವರ ಪೋಷಕರು ಸರಿಯಾಗಿ ಬೆಳೆಸಿಲ್ಲ ಎಂದೂವಾದ ಬಂತು. ಹೌದು ಕಂಟ್ರೋಲ್ ಮಾಡಿಕೊಳ್ಳುವ ಶಕ್ತಿ ಹುಡುಗರಿಗೆ ಇರಬೇಕಿತ್ತು ನಿಜ. ಆದರೆ ಅಂದಿನ ಪರಿಸ್ಥಿತಿ ಹೇಗಿತ್ತು ಎಂದು ಯಾರಿಗಾದರೂ ಗೊತ್ತಿದೆಯಾ?
ನನಗೆ ಡಿ. 31ರ ರಾತ್ರಿ 9.30ಕ್ಕೆ ಓದುಗ ಮಿತ್ರರೊಬ್ಬರು ಫೋನ್ ಮಾಡಿ, ‘ಸಾರ್, ಒಂದ್ ಸಲ ಎಂ.ಜಿ ರೋಡ್ಗೆ ಬನ್ನಿ.
ನೋಡಿ ಇಲ್ಲಿ ಅವಸ್ಥೆನಾ! ಯಾವ್ ಮೀಡಿಯಾಗಳೂ ಇದನ್ನು ತೋರಿಸಲ್ಲ’ ಎಂದರು. ಹೋಗಿ ನೋಡಿದರೆ, ಎಂ.ಜಿ ರೋಡ್ ಬೇರೆ ಪ್ರಪಂಚವೇ ಆಗಿತ್ತು. ಅದು ಬೆಂಗಳೂರಿನ ಒಂದು ಭಾಗ ಎಂದು ಯಾರಿಗೂ ಅನಿಸುವಂತೆ ಕಾಣುತ್ತಿರಲಿಲ್ಲ. ಮಹಾತ್ಮ ಗಾಂಧಿಯವರು ಏನೇನನ್ನು ವಿರೋಧಿಸುತ್ತಿದ್ದರೋ ಅವೆಲ್ಲ ಮಹಾತ್ಮ ಗಾಂಧಿ ರಸ್ತೆಯಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು. ಹೆಣ್ಣು ಮಕ್ಕಳು ಅರ್ಧ ರಾತ್ರಿಯಲ್ಲಿ ಹೊರಗೆ ಬಂದರೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಂತೆ ಎಂಬ ವಾಕ್ಯ ಬಿಟ್ಟು ಬೇರೆ ಯಾವುದೂ ಪರಿಪಾಲನೆಯಾಗಿರಲಿಲ್ಲ. ಹೆಣ್ಣು ಮಕ್ಕಳು ತೊಡೆ ಕಾಣುವ ಬಟ್ಟೆಗಳನ್ನು ಧರಿಸಿದ್ದರು. ಖಂಡಿತವಾಗಿಯೂ ಇದರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಅವರು ಇದ್ದ ಸ್ಥಿತಿಯ ಬಗ್ಗೆ ಅಸಹ್ಯವೆನಿಸುತ್ತದೆ. ನಾನು ಹೋಗುವ ಹೊತ್ತಿಗೆ ಮಧ್ಯರಾತ್ರಿ 12.15 ಆಗಿತ್ತು. ಎಲ್ಲರೂ ಆಗಲೇ ಕುಡಿದು ಟೈಟಾಗಿ ಫುಟ್ಪಾತ್ ಮೇಲೆ ಬಿದ್ದಿದ್ದರು. ಅದೂ ಎಂಥಾ ಅವಸ್ಥೆಯಲ್ಲಿ? ಅಮಲಿನಲ್ಲಿದ್ದ ಅವರಿಗೆ ತಾವು ಬಟ್ಟೆ ಹಾಕಿದ್ದೇವೆಯೋ ಇಲ್ಲವೋ ಎಂಬುದೇ ಗೊತ್ತಿರಲಿಲ್ಲ. ಫುಟ್ಪಾತ್ ಮೇಲೆ ಸಾಲಾಗಿ ಅಲ್ಲಲ್ಲೇ ವಾಂತಿ ಮಾಡುತ್ತಾ ಬಿದ್ದಿದ್ದರು. ವಾಂತಿ ಮಾಡಿ ಮಾಡಿ ಸುಸ್ತಾದವರು ಕುಳಿತ ಭಂಗಿಯಲ್ಲಿ ಅವರ ಒಳ ವಸ್ತ್ರಗಳು ಕಾಣುವಂತಿತ್ತು.
ಕೆಲವರು ರೋಡಲ್ಲೇ ಮಲಗಿದ್ದರು. ಮಿಡಿ ವಸ್ತ್ರಗಳನ್ನು ಹಾಕುವುದಲ್ಲದೇ, ಕಾಲು ಕಿಸಿದು ಮಲಗಿದರೆ, ಅದನ್ನು ನೋಡುವ ಯಾವನಿಗೆ ಪೂಜ್ಯ ಭಾವನೆ ಮೂಡುತ್ತದೆ? ‘ಯತ್ರ ನಾರ್ಯಾಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾಃ’ ಎಂದವರೇನಾದರು ಅಂದು ಎಂ.ಜಿ ರೋಡಿಗೆ ಬಂದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಸ್ವಾಮಿ ಅಲ್ಲಿ ಬಂದವರು ವಾಂತಿ ಬರುವವರೆಗೂ ಮದ್ಯಪಾನ ಮಾಡಿ ನ್ಯೂ ಇಯರ್ ಹೆಸರಲ್ಲಿ ಪಾರ್ಟಿ ಮಾಡಲಿಕ್ಕೆಯೇ ಹೊರತು ಯಾವುದೋ ಸಂತ ಸಮಾವೇಶಕ್ಕಲ್ಲ. ಅಲ್ಲಿ ಬಂದಿರುವವರು ಎಲ್ಲರೂ ಸಂತರು ಮತ್ತು ಹೆಣ್ಣುಮಕ್ಕಳೆಲ್ಲ ಕ್ರಿಶ್ಚಿಯನ್ ನನ್ಗಳೋ, ಸನ್ಯಾಸಿನಿಯರೋ ಆಗಿದ್ದರೆ, ಅವರ ಮೇಲೆ ಕೈ ಹಾಕಿದ್ದಿದ್ದರೆ, ಆಗ ಪುರುಷರಿಗೆ ಕಂಟ್ರೋಲ್ ಇಲ್ಲ ಎಂದು ಹೇಳಬಹುದಿತ್ತು. ಆದರೆ ಅಲ್ಲಿ ಹೆಣ್ಣುಮಕ್ಕಳು ಕುಡಿದು ಎಷ್ಟು ಟೈಟ್ ಆಗಿದ್ದರೋ ಅಷ್ಟೇ ಪುರುಷರೂ ಆಗಿದ್ದರು! ಆಗ ಕಂಟ್ರೋಲ್ ಇಟ್ಟುಕೊಳ್ಳಬೇಕು ಎಂದು ಹೇಗೆ ಅಪೇಕ್ಷಿಸುತ್ತೀರಿ? ಇಲ್ಲಿ ಪುರುಷರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಮತ್ತು ಮಹಿಳೆಯರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ.
ಮಾನಹರಣ ಮಾಡುವ ಇದನ್ನು ಆಚರಣೆ ಎಂದು ಹೇಗೆ ಕರೆಯುತ್ತೀರಿ? ಗಣೇಶ ಹಬ್ಬ ಬಂತೆಂದರೆ ಮೆರವಣಿಗೆಯದ್ದೇ ಶಬ್ದ ಮಾಲಿನ್ಯ, ಅದಕ್ಕೆ ಹಬ್ಬ ಬೇಡ ಎನ್ನುತ್ತಾರೆ. ದೀಪಾವಳಿಯಲ್ಲಿ ಪಟಾಕಿ ಬೇಡ ಎನ್ನುತ್ತಾರೆ. ಹೋಳಿಯಿಂದ ಚರ್ಮ ಕಾಯಿಲೆ ಬರುತ್ತೆ, ಪುಂಡ ಪೋಕರಿಗಳು ಹೆಚ್ಚು ಅದಕ್ಕೆ ಬೇಡ. ಆದರೆ ವರ್ಷದ ಆರಂಭದಲ್ಲಿ ಇಲ್ಲಿ ಹೆಣ್ಣು ಮಕ್ಕಳ ಮರ್ಯಾದೆಯೇ ಹರಾಜಾಗುತ್ತಿದೆ. ಊರಿಗೆ ಊರೇ ಕುಡಿದು ತಮಗಿಷ್ಟ ಬಂದಂತೆ ವರ್ತಿಸುವ ಇಂಥವಕ್ಕೆ ಯಾಕೆ ನಿಷೇಧವಿಲ್ಲ? ಲೈಂಗಿಕ ಕಿರುಕುಳಕ್ಕೊಳಗಾಗುತ್ತಿರುವ ಆಚರಣೆಯನ್ನು ಹಬ್ಬ ಎಂದು ಕರೆಯುವುದಾದರೂ ಹೇಗೆ?
ನಾನೇ ನೋಡಿರುವಂತೆ, ಎಂ.ಜಿ ರೋಡ್ನ ಹಿಂಬಾಗದಲ್ಲಿರುವ ಹೋಟೆಲ್ನ ಒಂದು ರೂಮ್ನಲ್ಲಿ ಅಂದು ನಾಲ್ಕು ಜನರು ಒಬ್ಬ ಹುಡುಗಿಯ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕಿಟಕಿಯಲ್ಲಿ ಕಾಣುತ್ತಿತ್ತು. ಜನ ಏಕೆ ಹೀಗೆ ಜಮಾಯಿಸಿದ್ದಾರೆ ಎಂದು ನೋಡಿದರೆ ಅಲ್ಲಿ ದೊಡ್ಡ ಪ್ರದರ್ಶನವೇ ನಡೆಯುತ್ತಿತ್ತು! ಇಂಥ ವಾತಾವರಣದಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಏನೂ ಆಗಬಾರದು ಎಂದು ಹೇಗೆ ಬಯಸುವುದು? ಅಂದು ಬಹುತೇಕ ಪಬ್ಗಳಲ್ಲಿ ಡ್ರಗ್ಸ್ ವ್ಯವಸ್ಥೆಯಿತ್ತು. ಡ್ರಗ್ಸ್ ಸೇವಿಸಿದ ವ್ಯಕ್ತಿಗೆ ನೋಡಪ್ಪಾ ನೀನು ಅತ್ಯಾಚಾರ ಅಥವಾ ಕಿರುಕುಳ ನೀಡಬಾರದು ಎಂದರೆ, ನೋಡಮ್ಮಾ ನಿನ್ನ ಒಳ ಉಡುಪು ಬಸ್ ನಿಲ್ದಾಣದ ಬೋರ್ಡ್ ಥರ ದೊಡ್ಡದಾಗಿ ಕಾಣುತ್ತಿದೆ ಮುಚ್ಚಿಕೊ ಎಂದು ಹೇಳಿದರೆ ನಮ್ಮ ಮಾತು ಕೇಳುವವರ್ಯಾರು? ಮರ್ಮಾಂಗಗಳು ಕಾಣುವ ಹಾಗೆ ಆ ಫುಟ್ಪಾತ್ನಲ್ಲಿ ಕುಳಿತ ಹೆಣ್ಣುಮಕ್ಕಳಿಗೆ ಬುದ್ಧಿ ಹೇಳಿದರೆ ನಮ್ಮ ಮೇಲೆ ವಾಂತಿ ಮಾಡುತ್ತಾರೆ ಅಥವಾ ಬೈದು ಜಗಳವಾಡಿ, ಹೊಡೆದು ಕಳುಹಿಸುತ್ತಾರೆ. ಯಾರು ಯಾರನ್ನು ರಕ್ಷಿಸಬೇಕು ಇಲ್ಲಿ? ರಾತ್ರಿ ಪೂರ್ತಿ ಎಣ್ಣೆ ಹೊಡೆದು ಗಂಡು ಮಕ್ಕಳ ಮೈ ಮೇಲೆ ಬಿದ್ದು ಮಾರನೇ ದಿನ ಪ್ರಜ್ಞೆ ಬಂದ ಮೇಲೆ ನನ್ನ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂದರೆ ಹೇಗೆ?
ಇವನ್ನೆಲ್ಲ ನಾವು ಸಾರ್ವಜನಿಕವಾಗಿ ಹೇಳಿದರೆ, ನಿನಗೆ ಮನೆಯಲ್ಲಿ ಅಮ್ಮ, ಅಕ್ಕ, ತಂಗಿ ಯಾರೂ ಇಲ್ಲವಾ? ಎಂದು ಕೇಳುತ್ತಾರೆ ಓರಾಟಗಾತಿಯರು. ನಮ್ಮ ಪುಣ್ಯ ಏನಪ್ಪಾ ಎಂದರೆ, ನಮ್ಮ ಮನೆಯ ಯಾವ ಹೆಣ್ಣು ಮಕ್ಕಳೂ ಹಾಗೆ ಕುಣಿದು ಕುಪ್ಪಳಿಸಿಲ್ಲ. ಅಥವಾ ವಾಂತಿ ಮಾಡುತ್ತಾ ಬಿದ್ದಿಲ್ಲ. ಬೇರೆ ರಾಜ್ಯಗಳ ಬಗ್ಗೆ ಗೊತ್ತಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಹೆಣ್ಣು ಮಕ್ಕಳಿಗೆ ಬಹಳ ಸ್ಥಾನಮಾನ ಕೊಡುತ್ತಾರೆ. ಇದಕ್ಕೆ ಉದಾಹರಣೆ ನಮ್ಮಲ್ಲಿ ನಡೆಯುವ ಹಬ್ಬಗಳು. ನನಗೆ ತಿಳಿದಿರುವ ಹಾಗೆ ಸಂಕ್ರಾಂತಿಗೆ ನಮ್ಮ ಮನೆಯ ಹೆಣ್ಣುಮಕ್ಕಳು, ಶೃಂಗಾರ ಮಾಡಿಕೊಂಡು ಬೇರೆಯವರ ಮನೆಗೆ ಎಳ್ಳು ಬೀರುವುದಕ್ಕೆ ಹೋದವರು ಕೂದಲೂ ಕೊಂಕದೇ ವಾಪಸ್ ಬರುತ್ತಾರೆ. ಇತ್ತೀಚೆಗೆ ನಡೆದ ಬಸವನಗುಡಿ ಜಾತ್ರೆಯಲ್ಲಿ ಸೇರಿದ ಜನರ ಮುಂದೆ, ಎಂ.ಜಿ ರೋಡ್ನ ಜನರ ಸಂಖ್ಯೆ ಏನೂ ಇಲ್ಲ. ಜಾತ್ರೆಯಲ್ಲಿ ಒಬ್ಬರ ಮೈ ಇನ್ನೊಬ್ಬರಿಗೆ ತಾಕುವಂತಿದ್ದರೂ, ಒಬ್ಬರೂ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ. ಆಗ ಯಾರಿಗೂ ಏಕೆ ಬೆಂಗಳೂರು ಸೇಫ್ ಎಂದೆನಿಸುವುದಿಲ್ಲ. ಆದರೆ ಅಮಲಿನಲ್ಲಿದ್ದಾಗ ನಡೆದ ಅದೂ ಕೇವಲ ಎಂ.ಜಿ ರೋಡ್ನಲ್ಲಿ ನಡೆದ ಒಂದು ದಿನದ ಘಟನೆಯಿಂದ ಬೆಂಗಳೂರು ಸೇಫ್ ಅಲ್ಲ ಎಂದು ನಿರ್ಧಾರಕ್ಕೆ ಬರುತ್ತಾರೆಂದರೆ ಇದು ಬೆಂಗಳೂರ ಹೆಸರನ್ನು ಹಾಳು ಮಾಡಬೇಕೆಂದು ಮಾಡಿದ ನಿರ್ಧಾರವಲ್ಲದೇ ಇನ್ನೇನು?
ಅಸಲಿಗೆ ಈ ಮಾಧ್ಯಮಗಳು ಸಂತ್ರಸ್ತರ ಹೇಳಿಕೆ ಎಂದು ಪ್ರಕಟಿಸಿರುವ ಯಾವುದಾದರೂ ಹೆಣ್ಣು ಮಕ್ಕಳ ಅಭಿಪ್ರಾಯ ಓದಿ. ಯಾರೊಬ್ಬರೂ ತಾವು ಕುಡಿದು ಬಿದ್ದಿದ್ದೆ ಎಂದು ಹೇಳಿಯೇ ಇಲ್ಲ. ಕಾರಣ ಬಹುತೇಕರು ಅಪ್ಪ ಅಮ್ಮನ ಬಳಿ ಪಾರ್ಟಿಗೆ ಹೊಗಿ ಬರ್ತೀವಿ ಎಣ್ಣೆ ಹೊಡೆಯಲ್ಲ ಎಂದೇ ಹೇಳಿ ಬಂದಿರುವುದರಿಂದ, ನಾನು ವಾಂತಿ ಮಾಡುತ್ತಾ ಕುಳಿತಿದ್ದೆ ಆಗ ನನ್ನ ಮೇಲೆ ಕೈ ಹಾಕಿದ ಎಂದು ಹೆತ್ತವರಿಗೆ ಯಾವ ಮುಖ ಇಟ್ಟುಕೊಂಡು ಹೇಳುತ್ತಾರೆ?
ಇನ್ನೊಂದು ವಿಷಯ, ಎಂ.ಜಿ ರೋಡ್ನಲ್ಲಿ ಅಂದು ಕುಡಿದು ಬಿದ್ದಿದ್ದ ಬಹುತೇಕರು ಉತ್ತರ ಭಾರತೀಯರೇ. ಒಬ್ಬರಿಗೂ ಕನ್ನಡದ ಗಂಧ ಗಾಳಿಯಿರಲಿಲ್ಲ. ನಮ್ಮ ಕನ್ನಡದ ಹೆಣ್ಣು ಮಕ್ಕಳು, ಗಂಡು ಮಕ್ಕಳು ಹೀಗೆ ಅಂಗ ಪ್ರದರ್ಶನ ಮಾಡುತ್ತಾ ಫುಟ್ಪಾತ್ ಮೇಲೆ ಬೀಳುವ ಜನರಲ್ಲ ಮತ್ತು ಸಂಸ್ಕಾರವಂತರು ಎಂಬುದು ಮತ್ತೊಮ್ಮೆ ಒತ್ತಿ ಹೇಳಬೇಕಾಗಿಲ್ಲ. ಇಂದು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆಯೆಂದರೆ ಅದಕ್ಕೆ ಕಾರಣ ಉತ್ತರ ಭಾರತದ ಹೆಣ್ಣುಮಕ್ಕಳು ಹೇರುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಯೇ ಹೊರತು ಇಲ್ಲಿ ಬೇರೆ ಯಾವುದೂ ಕಾಣುತ್ತಿಲ್ಲ. 17 ಸಾವಿರ ಪೊಲೀಸರಿಗೆ ನಾಲ್ಕೈದು ಬೀದಿಯ ಯುವಕ ಯುವತಿಯರನ್ನು ರಕ್ಷಿಸಲು ಕಷ್ಟವಾಯಿತು ಎಂದಾಗಲೇ ನಾವು ತಿಳಿಯಬೇಕು, ಅಲ್ಲಿದ್ದವರು ಅದೆಷ್ಟು ಪುಂಡಾಟಿಕೆ ಮಾಡಿದ್ದಾರೆ ಎಂದು.
ನಮ್ಮ ದೌರ್ಭಾಗ್ಯವೇನು ಗೊತ್ತಾ? ಈ ಅಷ್ಟೂ ವಿಷಯಗಳನ್ನು ಯಾರು ಹೇಳಿದ್ದಾರೆ ಎಂಬುದರ ಮೇಲೂ ನಮ್ಮ ಜನ ಅಳೆಯುತ್ತಾರೆ. ಮಹಿಳೆಯೊಬ್ಬಳು ಇದೇ ಲೇಖನ ಬರೆದರೆ, ಅದನ್ನು ಉದಾಸೀನ ಮಾಡುವವರು ಮಾಡುತ್ತಾರೆ. ಇನ್ನು ಕೆಲವರು ಒಪ್ಪಿಕೊಳ್ಳುತ್ತಾರೆ. ಆದರೆ ಪುರುಷ ಹೇಳಿದ ಎಂದ ಮಾತ್ರಕ್ಕೆ ಆತ ವಿಕೃತ ಮನಸ್ಕ, ಮನುವಾದಿ, ಕೋಮುವಾದಿಯಾಗುವ ಪ್ರಮೇಯವೇ ಹೆಚ್ಚು. ಅಂಥ ಹೆಣ್ಣು ಮಕ್ಕಳು, ಹೋರಾಟಗಾರರು 2018ಕ್ಕೆ ಇನ್ನೂ ಜೋರಾಗೇ ಪಾರ್ಟಿ ಮಾಡಿ. ನಿಮ್ಮ ತಂದೆ ತಾಯಿಗೆ ಇನ್ನಷ್ಟು ಕೀರ್ತಿ ತನ್ನಿ. ರೋಡಲ್ಲಿ ಕುಡಿದು ವಾಂತಿ ಮಾಡುವುದೇನೂ ಕಡಿಮೆ ಸಾಧನೆಯಲ್ಲ.