ಪ್ರಕಟಣೆ: ರಾಜ್ಯದಲ್ಲಿ ವಿರೋಧ ಪಕ್ಷ ಸ್ಥಾನ ಖಾಲಿ ಇದೆ!

bjp_karnataka

ಬಹಳ ನಿಷ್ಠಾವಂತ ಮತ್ತು ಅಷ್ಟೇ ಖಡಕ್ ಅಧಿಕಾರಿಯೆಂದು ಹೆಸರಾಗಿದ್ದ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣವಾದಾಗ ಜನರೇ ಮುಂದೆ ಬಂದು ‘ಇದು ಆತ್ಮಹತ್ಯೆಯಲ್ಲ ಕೊಲೆ’ ಎಂದು ಪ್ರತಿಭಟನೆ ಮಾಡಿದ್ದರು. ಜನ ಅದ್ಯಾವ ಮಟ್ಟಿಗೆ ಪ್ರತಿಭಟಿಸಿದ್ದರು ಎಂದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಮಸ್ಯೆ ಕೇಳಲು ಬಂದರು. ಅವರು ಬಂದಾಗ ಸ್ಥಳದಲ್ಲೇ ಇದ್ದ ಕುರ್ಚಿಯನ್ನೂ ಮಡಚಿಟ್ಟು, ನಿಂತು ಮಾತನಾಡಿಸಿಯೇ ತಮ್ಮಲ್ಲಿರುವ ಆಕ್ರೋಶವೆಷ್ಟು, ಸರಕಾರ ಏನೂ ಕ್ರಮ ಕೈಗೊಳ್ಳದಿರುವುದಕ್ಕೆ ನಮಗಾಗಿರುವ ನೋವೇನು ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟರು.

ಅವರ ಆಕ್ರೋಶ ಎಷ್ಟರ ಮಟ್ಟಿಗೆ ಇತ್ತು ಎಂದರೆ, ಅಲ್ಲಿದ್ದ ಕೆಲವರು ‘ಸಿಎಂ ಬಂದ್ರೆ ಕುರ್ಚಿ ಹಾಕ್ಬೇಡ್ರೋ, ನಮಗಿಲ್ಲಿ ನೋವಾಗಿದೆ, ಅಂವ ಕುರ್ಚಿಲಿ ಕುಂತು ಮಾತಾಡ್ಬೇಕಾ?’ ಎಂದಾಡಿದ ಮಾತನ್ನು ಕೇಳಿದ್ದೇನೆ. ಜನರು ಅಲ್ಲಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿದರು. ಅಲ್ಲೆಲ್ಲೂ ಬಿಜೆಪಿ ಕಾಣಲಿಲ್ಲ. ಡಿ.ಕೆ.ರವಿ ಹತ್ಯೆ ಖಂಡಿಸುತ್ತೇವೆ ಎಂದು ಒಂದಿಬ್ಬರು ಮಾಧ್ಯಮಗಳಿಗೆ ಬೈಟ್ ಕೊಟ್ಟರೇ ವಿನಾ, ಬಿಜೆಪಿಯಿಂದ ಸರಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಜನರಿಗೆ ಸಹಾಯ ಮಾಡುತ್ತೇನೆ ಎಂದು ಬಂದು, ಯಾವ ರೀತಿಯಾಗಿ ಕುಟುಂಬಕ್ಕೆ ಸಹಾಯ ಮಾಡಿದರೋ ಗೊತ್ತಿಲ್ಲ, ಆದರೆ ಡಿಕೆ ರವಿ ಕುಟುಂಬಕ್ಕೆ ಜೆಡಿಎಸ್ ನ ಕುಮಾರಸ್ವಾಮಿ ಸಾಂತ್ವನ ಹೇಳಿದ್ದರು.

ಇದಾದ ನಂತರ ನಡೆದದ್ದು ಸಿಎಂ ದುಬಾರಿ ವಾಚ್ ಪ್ರಕರಣ. ಸಿಎಂ ಬಳಿ ಇರುವ ವಾಚ್ ಬಗ್ಗೆ ಮೊದಲು ಹೇಳಿದ್ದು ಕುಮಾರಸ್ವಾಮಿ. ಜನರೇ ಈ ವಿಷಯವನ್ನು ಎತ್ತಿಕೊಂಡರು. ಇಡೀ ರಾಜ್ಯ ಬರದಿಂದ ತತ್ತರಿಸಿದೆ ಆದರೆ ಸಿಎಂ ಮಾತ್ರ ದುಬಾರಿ ವಾಚ್ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟಿಸಿದರು, ಸಾಮಾಜಿಕ ಜಾಲತಾಣದಲ್ಲೂ ಜನ ಸರಕಾರವನ್ನು ಜಾಲಾಡಿದರು. ಬಿಜೆಪಿ ಕ್ಯಾರೇ ಎಂದಿಲ್ಲ. ಮಾಧ್ಯಮಗಳೆದುರಿಗೆ ಒಂದು ಪುಟ್ಟ ಬೈಟ್ ಕೊಟ್ಟು ಪರಾರಿಯಾಯ್ತು. ಇದಾದ ಮೇಲೆ ಬಂದಿದ್ದು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ
ಪ್ರಕರಣ. ಒಬ್ಬ ಪೊಲೀಸ್ ಅಧಿಕಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಇನ್ನೊಬ್ಬ ಅಧಿಕಾರಿಯ ಹೆಸರನ್ನು ವಿಡಿಯೊದಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಡಿ.ಕೆ.ರವಿ ಪ್ರಕರಣದ ರೀತಿಯಲ್ಲೇ, ಇಡೀ ರಾಜ್ಯದ ಜನರೇ ಸಿಡಿದೆದ್ದು ‘ರಾಜೀನಾಮೆ ಕೊಡ್ರೀ’ ಎಂದಾಗ ಆಕ್ರೋಶಕ್ಕೆ ಹೆದರಿ ಜಾರ್ಜ್ ರಾಜೀನಾಮೆ ಕೊಟ್ಟಿದ್ದರು. ವಿರೋಧ ಪಕ್ಷದಲ್ಲಿ ಕುಳಿತು ಕುರ್ಚಿ ಬಿಸಿ ಮಾಡುತ್ತಿದ್ದ ಬಿಜೆಪಿ ಆಗಲೂ ಎದ್ದೇಳಲಿಲ್ಲ.  ಬಿಜೆಪಿಯ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಸದನದಲ್ಲಿ ನೀಲಿ ಚಿತ್ರ ನೋಡಿದ್ದು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಅವರೆಲ್ಲರೂ ರಾಜೀನಾಮೆ ನೀಡುವ ತನಕ ಕಾಂಗ್ರೆಸ್‌ನವರು ಒತ್ತಡ, ಛೀಮಾರಿ ಹಾಕುತ್ತಲೇ ಇದ್ದರು. ಈಗ ತನ್ವೀರ್ ಸೇಠ್ ಮೇಲೂ ಸಹ ಅಂಥದ್ದೇ ಆರೋಪ ಕೇಳಿಬಂದಾಗ, ಇಡೀ ರಾಜ್ಯವೇ ಸರಕಾರಕ್ಕೆ ಮಂಗಳಾರತಿ ಮಾಡಿತ್ತು. ಬಿಜೆಪಿಯದ್ದು ಮಾತ್ರ ಅದೇ ಮೌನ. ಕೆಲವೊಮ್ಮೆ ಹಾಗೇ… ರಾಜಕೀಯ ಲೆಕ್ಕಾಚಾರಗಳೇ ಅರ್ಥವಾಗುವುದಿಲ್ಲ.

ರಾಜ್ಯದಲ್ಲಿ ಅವ್ಯವಸ್ಥೆ ತಲೆದೋರಿದಾಗ ವಿರೋಧ ಪಕ್ಷದಲ್ಲಿರುವವರು ವ್ಯವಸ್ಥೆಯನ್ನು ಸರಿ ದಾರಿಗೆ ತರುವತ್ತ ಪ್ರಯತ್ನಿಿಸಬೇಕು. ಆದರೆ ಇಲ್ಲಿ ಬಿಜೆಪಿ ಮಾಡುತ್ತಿರುವುದೇನು? ಕಾಂಗ್ರೆಸ್ ಸರಕಾರ ಮಾಡುತ್ತಿರುವ ಜನವಿರೋಧಿ ಕೆಲಸಗಳನ್ನು, ಯೋಜನೆಗಳನ್ನು ವಿರೋಧಿಸಲಾಗದಿದ್ದ ಮೇಲೆ ಇವರಿಗೆ ವಿರೋಧ ಪಕ್ಷ ಎಂಬ ಪಟ್ಟವೇಕೆ? ಕೆಂಪು ಗೂಟದ ಕಾರಿನೊಳಗೆ ಕುಳಿತು ಹಿಂದೆ ಒಂದು ಭದ್ರತಾ ಸಿಬ್ಬಂದಿಯ ಕಾರ್ ಬರುವುದಷ್ಟೇ ಇವರ ಉದ್ದೇಶವಾಗಿದ್ದರೆ, ಅದಕ್ಕೆ ವಿರೋಧ ಪಕ್ಷ ಎಂಬ ಪಟ್ಟವೇಕೆ? ಇಂಥ ವ್ಯವಸ್ಥೆ ಪದ್ಮನಾಭನಗರದಲ್ಲಿ ಇರುವವರಿಗೂ ಇದೆ.

ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಕೇರಳದ ಹಾಗೇ ಕರ್ನಾಟಕದಲ್ಲಿ ಕೊಲ್ಲುವುದು ಬಹಳ ಸೋವಿ ಎಂದು ನಿರ್ಧರಿಸಿಬಿಟ್ಟ ಹಂತಕರು ಸಂಘ ಪರಿವಾರ, ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ರಾಜ್ಯದಲ್ಲಿ ವಾರಕ್ಕೆ ಮೂರು ಕೊಲೆ ಮಾಡುತ್ತಿದ್ದರು. ರುದ್ರೇಶ್ ಹತ್ಯೆಯಾ–ದಾಗ ಶಿವಾಜಿನಗರದಲ್ಲಿ ಹೋರಾಟ ಹಮ್ಮಿಕೊಂಡಿದ್ದೀವಿ ಎಂದು ಜನರನ್ನು ಕರೆಯಿಸಿ, ಜನರನ್ನು ಬಿಸಿಲಲ್ಲಿ ಕೂರಿಸಿ, ಬಿಜೆಪಿ ಮುಖಂಡರು ತಾವು ಟೆಂಟ್ ಕಿತ್ತರೇ ಹೊರತು ರುದ್ರೇಶ್ ವಿಚಾರ ಎಲ್ಲಿಗೆ ಬಂತು ಯಾರಿಗೂ ಗೊತ್ತಿಲ್ಲ.

ಕಾಂಗ್ರೆಸ್‌ಗೆ ಈ ವಿಚಾರವೇ ಅಪ್ರಸ್ತುತ ಏಕೆಂದರೆ, ಅವರು ಎದೆ ಬಡಿದುಕೊಳ್ಳುವುದು ಎಡಪಂಥೀಯರು ಅಥವಾ ಮುಸ್ಲಿಮರು/ಅಲ್ಪಸಂಖ್ಯಾತರು ಹತ್ಯೆಯಾದರೆ ಮಾತ್ರ. ಈ ಬಗ್ಗೆ ತಲೆ ಕೆಡಿಸಿಕೊಂಡರೆ, ಹಿಂದೂಗಳ ಹತ್ಯೆಯಾಗುತ್ತಿರುವುದು ರಾಜ್ಯದಲ್ಲೇ ಆಗಿರುವುದರಿಂದ ಅದು ರಾಜ್ಯ ಸರಕಾರದ ತಲೆಗೇ ಬರುತ್ತದೆ ಎಂದು ಕಾಂಗ್ರೆಸಿಗರಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ, ಒಬ್ಬರೂ ಒಂದು ಮಾತೂ ಆಡಿಲ್ಲ. ಆದರೆ ಎಡಪಂಥೀಯರ ಕಣ್ಮಣಿ ಪ್ರೊ.ಕಲಬುರ್ಗಿ ಹತ್ಯೆಯಾಗಿದ್ದು ರಾಜ್ಯದಲ್ಲೇ ಆದರೂ ಗೂಬೆ ಕೂರಿಸಿದ್ದು, ಮೋದಿ ಮೇಲೆ. ಹೇಗಿದೆ ನೋಡಿ ಕಾಂಗ್ರೆಸ್ ಐಡಿಯಾ! ಇದನ್ನು ಎಷ್ಟು ಬಿಜೆಪಿ ನಾಯಕರು ವಿರೋಧಿಸಿದ್ದಾರೆ? ಅವೆಲ್ಲ ಬಿಡಿ, ಹಿಂದೂಗಳ ಸಾಲು ಸಾಲು ಹತ್ಯೆಯಲ್ಲಿ ಪಿಎಫ್‌ಐ ಕೈವಾಡವಿದೆ ಅವರ ಮೇಲೆ ಪ್ರಕರಣ ದಾಖಲಿಸುವುದಿಲ್ಲವೇ ಎಂದು ಪತ್ರಕರ್ತರು ಸಿದ್ದರಾಮಯ್ಯನವರನ್ನು ಕೇಳಿದರೆ, ಆರೆಸ್ಸೆಸ್ ಅವರನ್ನೇನು ಮಾಡೋಣ ಎಂದು ಸಂಘ ಪರಿವಾರದ ಬಗ್ಗೆ ಆರೋಪ ಮಾಡಿದಾಗಲೂ ಬಿಜೆಪಿ ನಾಯಕರು ಬಾಯಲ್ಲಿ ಕಡಬು ತುಂಬಿಕೊಂಡು ಕುಳಿತಿದ್ದದ್ದು ಗಮನಿಸಿದರೆ ಸಾಕು, ಇವರು ಪರಾಕ್ರಮ, ಧೈರ್ಯವಂತಿಕೆ, ಬುದ್ಧಿವಂತಿಕೆ ಇತ್ಯಾದಿಗಳನ್ನೆಲ್ಲ ಮೂಟೆ ಕಟ್ಟಿ ಸಿದ್ದರಾಮಯ್ಯರಿಗೆ ಕೇಜಿ ಲೆಕ್ಕದಲ್ಲಿ ಮಾರಿಬಿಟ್ಟಿದ್ದಾರೆ ಎಂದು ಸಾಮಾನ್ಯರಿಗೂ ತಿಳಿಯುತ್ತದೆ.

ಸುಮ್ಮನೆ ಕುಳಿತರೆ ಜನ ವೋಟು ಹಾಕುತ್ತಾರೆ ಎನ್ನುವುದು ಬಿಜೆಪಿಯವರ ಮೂಢನಂಬಿಕೆಯಷ್ಟೇ. ಬಿಜೆಪಿಯ ಕೆಲ ರಾಜಕಾರಣಿಗಳನ್ನು ಇತ್ತೀಚೆಗೆ ಆವರಿಸಿರುವ ಮೌಢ್ಯ ಎಂಥದ್ದು ಎಂದರೆ, ನಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಜನರೇ ನಮ್ಮನ್ನು ಹುಡುಕಿ ಬಂದು ರಾಜ್ಯವನ್ನು ಕೈಯಲ್ಲಿಡುತ್ತಾರೆ ಎಂಬುದು. ಮೋದಿ ಹೆಸರು ಹೇಳದೇ ಒಂದು ಕೆಲಸವನ್ನೂ ಮಾಡಿಸಿಕೊಂಡು ಬರಲಾಗುತ್ತಿಲ್ಲ. ಒಂದು ಸಣ್ಣ ಕಾರ್ಪೊರೇಟರ್ ಎಲೆಕ್ಷನ್ನಿಗೆ ನಿಲ್ಲುವಾಗಲೂ, ಅಭ್ಯರ್ಥಿಗಿಂತ ದೊಡ್ಡ ಭಾವಚಿತ್ರ ನರೇಂದ್ರ ಮೋದಿಯವರದ್ದೇ ಇರುತ್ತದೆ. ಅಂದರೆ ಬಿಜೆಪಿಯಲ್ಲೀಗ ಮೋದಿಯ ಹೆಸರಲ್ಲಿ ರಾಜಕಾರಣ ಶುರುವಾಗಿದೆಯೇ ಹೊರತು, ರಾಜ್ಯದ ಜನರಿರುವ ದಿಕ್ಕಿನಲ್ಲಿ ತಲೆ ಹಾಕಿ ಸಹ ಒಬ್ಬ ಮುಖಂಡನೂ ಮಲಗುತ್ತಿಲ್ಲ. ಇದು ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿ.

ಎಲ್ಲವನ್ನೂ ಮೋದಿಯ ತಲೆ ಮೇಲೆ ಹಾಕಿದರೆ ಬಿಜೆಪಿಯವರ ಪರಿಶ್ರಮವೇನು? ನಮಗೆ ಮತ ಹಾಕಿ ಎಂದು ಕೇಳುವಾಗ ಯಾವ ಮುಖ ಇಟ್ಟುಕೊಂಡು ಕೇಳುತ್ತಾರೆ?  ಉತ್ತರ ಪ್ರದೇಶ ಚುನಾವಣೆಗೆ ಹಣ ಕಳುಹಿಸಲು ಕಾಂಗ್ರೆಸ್ ಇಲ್ಲಿ ಸ್ಟೀಲ್ ಫ್ಲೈ ಓವರ್ ಕಟ್ಟುತ್ತಿದ್ದಾರೆ ಎಂಬ ಆರೋಪ ಸಹಜವಾಗಿ ಜನರಿಂದ ಕೇಳಿ ಬರುತ್ತಿತ್ತು. ಲಕ್ಷಾಂತರ ಜನರು ಫ್ಲೈ ಓವರ್ ವಿರುದ್ಧ ಸಹಿ ಹಾಕಿದ್ದಾರೆ ನಿಜ. ಈ ಫ್ಲೈ ಓವರ್ ನಿರ್ಮಾಣವನ್ನು ತಡೆಯುವುದರ ಬಗ್ಗೆಯಾಗಲೀ, ಜನರ ಜತೆ ದನಿಗೂಡಿಸುವುದಕ್ಕಾಗಲೀ ಕರ್ನಾಟಕದ ಬಿಜೆಪಿ ಒಂದೇ ಒಂದೂ
ಪ್ರಯತ್ನ ಮಾಡಿಲ್ಲ. ಇವರ ಹಣೆಬರಕ್ಕೆ, ಪರೋಕ್ಷವಾಗಿ ಮೋದಿಯೇ ಸಹಾಯ ಮಾಡಬೇಕಾಗಿ ಬಂತು. ಅಂದರೆ, ಮೋದಿಯವರು ನೋಟು ಅಮಾನ್ಯದ ವಿಷಯ ಪ್ರಸ್ತಾಪಿಸಿದ ಮೇಲೆ ಸ್ಟೀಲ್ ಫ್ಲೈ ಓವರ್ ಬಗ್ಗೆ ಕಾಂಗ್ರೆಸ್‌ನ ಒಬ್ಬ ರಾಜಕಾರಣಿಯೂ ಮಾತನಾಡುತ್ತಿಲ್ಲ. ಬಿಜೆಪಿಗಂತೂ ಏನಾಗುತ್ತಿದೆ ಎಂದೇ ಗೊತ್ತಾಗುತ್ತಿಲ್ಲ. ಪ್ರಸ್ತುತ ರಾಜ್ಯದ ಬಿಜೆಪಿಯಲ್ಲಿ ಬೆರಳೆಣಿಯಷ್ಟು ಯುವ ರಾಜಕಾರಣಿಗಳನ್ನು ಬಿಟ್ಟು ಬೇರೆ ಯಾವ ಬಿಳಿ ಮಂಡೆ ರಾಜಕಾರಣಿಗಳೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಬಿಜೆಪಿಯನ್ನು ದಿನೇ ದಿನೆ ನಿಧಾನವಾಗಿ ಕೊಲ್ಲುತ್ತಿರುವುದು ಮೂರ್ನಾಲ್ಕು ಬಣಗಳ ನಡುವಿನ ಗುದ್ದಾಾಟವೇ ಹೊರತು ಇನ್ನೇನಿಲ್ಲ.

ಕಾವೇರಿ ಹೋರಾಟದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವ ಪಕ್ಷ ಸಭೆಯನ್ನು ಕರೆದಿದ್ದರು. ಮಾಜಿ ಪ್ರಧಾನಿ ದೇವೇಗೌಡರೇ ಶಾಲು ಹೊದ್ದು ಸದನಕ್ಕೆ ಬಂದು ಕುಳಿತಿದ್ದರು. ಆದರೆ, ಬಿಜೆಪಿ ರಾಜಕಾರಣಿಗಳು ಒಬ್ಬರೂ ಹಾಜರಿರಲಿಲ್ಲ. ಹಾಜರಿರಬೇಕಾದ ಕಡೆ ಹಾಜರಿಲ್ಲದೇ ಎಲ್ಲಿಗೆ ಹೋಗಿದ್ದಿರಿ ಎಂದು ಕೇಳಿದರೆ, ಕಾವೇರಿ ನೀರು ಬೇಕು ಎಂದು ಪ್ರತಿಭಟಿಸುತ್ತಿದ್ದರಂತೆ. ಸರ್ವ ಪಕ್ಷಗಳೂ ಒಟ್ಟಾಗಿ ನಿಂತು ತಾವು ಕಾವೇರಿ ಬಿಡೆವು ಎಂದು ಹೇಳೋಣವೆಂದರೆ, ಬಿಜೆಪಿ ನಾಪತ್ತೆ. ಎಲ್ಲ ಪಕ್ಷದವರೂ ಬಂದಿದ್ದಾರೆ ನಾವೂ ಹೋಗೋಣ ಬನ್ನಿ ಎಂದು ಕಿರಿಯ ರಾಜಕಾರಣಿಗಳು ಹೇಳಿದ್ದರೂ, ಬಿಜೆಪಿಯ ಪ್ರಮುಖರು ಕ್ಯಾರೇ ಎನ್ನಲಿಲ್ಲ.

ಏಕೆಂದರೆ, ಎಲ್ಲರಿಗೂ ಕಾವೇರಿ ಸಮಸ್ಯೆ ಬಗೆಹರಿಯುವುದಕ್ಕಿಂತ ತಮ್ಮ ವರ್ಚಸ್ಸೇ ಮುಖ್ಯ.  ಯಡಿಯೂರಪ್ಪ ಅವರ ಬಣ ಬಂದರೆ, ಈಶ್ವರಪ್ಪ ಅವರ ಬಣ ಬರುವುದಿಲ್ಲ, ಇವರಿಬ್ಬರೂ ಬಂದರೆ ಅಶೋಕ್, ಅನಂತ್ ಕುಮಾರ್ ಬರುವುದಿಲ್ಲ. ಯಾವ ಸಮಸ್ಯೆಯೂ ಇಲ್ಲವಾದರೆ ಕಿರಿಯ ರಾಜಕಾರಣಿಗಳು ಹೇಳಿದ್ದಕ್ಕೆ ಹೋಗಬೇಕಾ ಎಂಬ ಅಹಂ! ಬಿಜೆಪಿಯವರೇ ಹೇಳಿ, ಇನ್ನೆಷ್ಟು ದಿನ ಎಂದು ಮೋದಿಯ ಕಟೌಟ್ ನಿಲ್ಲಿಸಿ ವೋಟು ಕೇಳುತ್ತೀರಿ? ಅದಕ್ಕೊಂದು ಅರ್ಥ ಬೇಡವೇ? ಮೋದಿಯೇನು ಎಂದು ಜನಕ್ಕಾಾಗಲೇ ತಿಳಿದಿದೆ ಮತ್ತು ಅವರ ಕಾರ್ಯವೈಖರಿಯನ್ನೂ ಬಲ್ಲರು. ಆದರೆ, ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವುದು ಯಾವಾಗ? ತಪಸ್ಸಿಗೆ ಕುಳಿತರೆ ಬಂದು ರಾಜ್ಯ ಕೊಡಲು ಬಿಜೆಪಿ ದಶರಥನ ಕಾಲದಲ್ಲಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಲಿ.

ಏನೂ ಮಾಡದೇ, ಜನರ ಭಾವನೆಗಳಿಗೆ ಸ್ಪಂದಿಸದೇ 150 ವೋಟುಗಳು ಬೇಕು ಎಂದು ಒಂದು ವೆಬ್‌ಸೈಟ್ ನಿರ್ಮಿಸಿಬಿಟ್ಟರೆ ಸಾಕೇ ಯಡಿಯೂರಪ್ಪನವರೇ? ಅದಕ್ಕಿಂತ ಮೊದಲು ವಿರೋಧ ಪಕ್ಷದವರಾಗಿ ಏನು ಮಾಡಿದ್ರಿ ಎನ್ನುವುದು ಬೇಕಲ್ಲವೇ? ಕೆಲ ವರ್ಷಗಳ ಹಿಂದೆ ಹರತಾಳು ಹಾಲಪ್ಪ ಅವರ ಮೇಲೆ ಕೇಳಿಬಂದ ಆರೋಪಕ್ಕೂ, ಈಗಿನ ಮೇಟಿ ಪ್ರಕರಣಕ್ಕೂ ಬಹಳ ಸಾಮ್ಯತೆಯಿದೆ. ಆದರೆ, ಎರಡೂ ಪಕ್ಷಗಳು ನಡೆದುಕೊಂಡ ರೀತಿಯಿದೆಯಲ್ಲ, ಅದು ಪಕ್ಷದ ಒಗ್ಗಟ್ಟು, ಶಕ್ತಿಯನ್ನು ಸಾಬೀತು ಮಾಡುತ್ತದೆ. ಜನರೇ ಮೇಟಿ ಸಿಡಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬೀದಿಗಿಳಿದು ಹೋರಾಟ ಮಾಡಿ ರಾಜೀನಾಮೆ ಕೊಡುವ ಹಾಗೆ ಮಾಡಿದರೇ ಹೊರತು, ವಿರೋಧ ಪಕ್ಷವಾಗಿ ಬಿಜೆಪಿ ಸಾಧನೆಯೇನು ಒಂದನ್ನಾದರೂ ಹೆಸರಿಸಿ ನೋಡೋಣ? ಕಾಂಗ್ರೆಸ್ ಬಹಳಷ್ಟು ವಿಚಾರದಲ್ಲಿ ಧರ್ಮ, ಜಾತಿಯ ಹೆಸರು ಹೇಳಿಕೊಂಡು ರಕ್ಷಣೆ ಪಡೆಯುತ್ತಿರುವುದು ಯಾರಿಗೇನು ಗೊತ್ತಿರದ ವಿಚಾರವಲ್ಲ.

ಆಂಜನೇಯ ಅವರ ಮನೆಯಲ್ಲೇ ಕೆಲವರು ಲಂಚ ಸ್ವೀಕರಿಸುತ್ತಿದ್ದ ವಿಡಿಯೊ ಹೊರ ಬಂದ ಮೇಲೆ ಆಂಜನೇಯ ಸಾಹೇಬ್ರು ತಾನು ದಲಿತ ಆಗಿದ್ದರಿಂದ ನನ್ನ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನಿಯತ್ತಾಗಿ ದುಡಿದು ತಿನ್ನುತ್ತಿರುವ ಒಂದಿಡೀ ದಲಿತ ಸಮಾಜವನ್ನೇ ತಮ್ಮ ಹಿಂದೆ ಅಂಟಿಕೊಂಡಿದ್ದ ಮೆಣಸಿನಕಾಯಿ ಘಾಟು ಆರಿಸಿಕೊಳ್ಳಲು ಬಳಸಿಕೊಂಡಾಗ ಎಷ್ಟು ಜನ ಬಿಜೆಪಿ ನಾಯಕರು ಇದನ್ನು ವಿರೋಧಿಸಿದ್ದೀರಿ? ಆಂಜನೇಯ ಅವರೇ, ಭ್ರಷ್ಟಾಚಾರಕ್ಕೆ ಧರ್ಮ, ಜಾತಿಗಳನ್ನು ತಂದು ಹೇಸಿಗೆ ಮಾಡಬೇಡಿ, ಎಂದು ಎಚ್ಚರಿಕೆ ಕೊಡುವ ದಮ್ಮು ಬಿಜೆಪಿಯ ಒಂದೆರಡು ಯುವ ರಾಜಕಾರಣಿಗಳನ್ನು ಬಿಟ್ಟರೆ ಬೇರೆ ಯಾರಿಗಿತ್ತು? ಬಿಜೆಪಿ ಕಳೆದ ಬಾರಿ ಗೆದ್ದದ್ದು, ಕರುಣೆಯಿಂದ ಹೊರತು ಕಮಲದ ಮೇಲಾಣೆಯಾಗಿಯೂ ಸ್ವಪ್ರಯತ್ನದಿಂದ ಅಂತೂ ಅಲ್ಲವೆ ಅಲ್ಲ.

ಕುಮಾರಸ್ವಾಮಿಯವರು ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿ, ನಂತರ ಕೈ ಎತ್ತಿದ್ದರಿಂದ ಜನರು ಬಿಜೆಪಿಯನ್ನು ನಂಬಿದ್ದರು. ಆದರೆ, ಈಗಲೂ ಹಾಗೆಯೇ ಒಂದು ಮ್ಯಾಜಿಕ್ ನಡೆಯಲಿ ಇಲ್ಲ ಮೋದಿ ಕಟೌಟ್ ಹಿಡಿದು, ಡಿಜಿಟಲ್ ಇಂಡಿಯಾ, ದೇಶ ಅಭಿವೃದ್ಧಿಯ ಮಂತ್ರ ಜಪಿಸಿದರೆ ಏನು ಫಲ? ಅಥವಾ ನಮಗೆ ಸ್ವಂತಿಕೆ ಇಲ್ಲ, ಕಾಂಗ್ರೆಸ್ಸನ್ನು ವಿರೋಧಿಸುವ ತಾಕತ್ತೂ ಇಲ್ಲ, ನಮ್ಮ ವೋಟು, ಪಡಿತರ ಚೀಟಿಯೇ ನರೇಂದ್ರ ಮೋದಿ ಎಂದು ಅಧಿಕೃತ ಘೋಷಣೆಯಾಗಿಬಿಡಲಿಯಲ್ಲವೇ? ಬಿಜೆಪಿ ರಾಜಕಾರಣಿಗಳ ಧೋರಣೆ ಹೀಗೇ ಮುಂದುವರಿದರೆ ಸಂಘ ಪರಿವಾರದ ಬೆಂಬಲವೂ ಸಿಗದೇ, ಜನರ ಬೆಂಬಲವೂ ಇಲ್ಲದೇ ಅತಂತ್ರವಾಗುವ ಸ್ಥಿತಿ ಬಹಳ ದೂರವಿಲ್ಲ.

2017 ಮುಗಿದು 2018ಕ್ಕೇ ಇವರ ಬಣ್ಣ ಬಯಲಾಗಲಿದೆ. ಮೋದಿಯ ಫೋಟೊ, ಕಟೌಟ್ ಹಾಕಿಕೊಂಡು ಪ್ರಚಾರದಲ್ಲಿ ತೊಡಗುವವರು, ಅವರ ಒಂದಂಶವನ್ನಾದರೂ ರೂಢಿಸಿಕೊಂಡಿದ್ದರೆ, ಜನರಿಗೆ ಸಮಸ್ಯೆಯಾದಾಗ ಹೀಗೆ ಮನೆಯೊಳಗೆ ಕುಳಿತಿರುತ್ತಿರಲಿಲ್ಲ. ಇನ್ನಾದರೂ ರಾಜ್ಯದಲ್ಲಿ ವಿರೋಧ ಪಕ್ಷ ಇದೆ, ಜೀವಂತವಿದೆ, ಉಸಿರಾಡುತ್ತಿದೆ, ಬದುಕಿದೆ ಎಂಬುದನ್ನು ಸಾಬೀತು ಮಾಡಿ. ಮುಂದಿನ ಮುಖ್ಯಮಂತ್ರಿ  ಯಾರಾಗಬೇಕೆಂದು ಆಮೇಲೆ ಬೈಟಕ್‌ನಲ್ಲಿ ನಿರ್ಧರಿಸಿ!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya