ಬ್ರಾಹ್ಮಣರೇ ಇವರ ಅಕ್ಕಿ ಬೇಳೆ, ದ್ರಾಕ್ಷಿ ಗೋಡಂಬಿ!

brahmin

ನಿನ್ನೆ ಒಂದು ಖಾಸಗಿ ನ್ಯೂಸ್ ಚಾನೆಲ್‌ನ್ನು ನೋಡುತ್ತಿದ್ದಾಗ ಕೆಳಗೆ ದಪ್ಪಕ್ಷರದಲ್ಲಿ ಬರೆದಿದ್ದ ಸಾಲುಗಳು ನನ್ನನ್ನು ಆಕರ್ಷಿಸಿದವು. ಅದರಲ್ಲಿ ಇದ್ದಿದ್ದು, ‘ಅರ್ಚಕರ ನೇಮಕಾತಿಗೆ ಮೀಸಲಾತಿ ತನ್ನಿ’ ಎಂದು. ಅಂದರೆ ಮುಜರಾಯಿ ಇಲಾಖೆಯನ್ವಯ ಯಾವ್ಯಾವ ದೇವಸ್ಥಾನಗಳು ಬರುತ್ತವೋ, ಸರಕಾರದ ಆಡಳಿತದಲ್ಲಿ ಯಾವ್ಯಾವ ದೇವಸ್ಥಾನಗಳಿರುತ್ತವೋ ಅವೆಲ್ಲದರ ಅರ್ಚಕರ ನೇಮಕದಲ್ಲಿ ಮೀಸಲು ಕೊಡಬೇಕೆಂಬುದು ವಾದ. ಇದಕ್ಕೆ ಅರ್ಜಿ ಸಲ್ಲಿಸಿದರೂ, ‘ಇದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದಿದ್ದಾರೆ ಎಂಬ ಸಾಲುಗಳು ಬರುತ್ತಿತ್ತು.

ಇದನ್ನು ನೋಡಿ ನನಗೆ ಆಶ್ಚರ್ಯ ಆಗಿದ್ದೇಕೆಂದರೆ, ಮೀಸಲು ಎಂದರೇನು? ನಾನು ಒಂದು ವಿಷಯವನ್ನು ಓದಿ ಸಂಪೂರ್ಣ ತಿಳಿದುಕೊಂಡು ಸ್ಥಾನ ಗಿಟ್ಟಿಸಿಕೊಂಡಿರುತ್ತೇನೆ. ಇನ್ನೊಬ್ಬ ನನ್ನಂತೆಯೇ ಓದಿರುತ್ತಾನೆ, ಪಾಸ್ ಸಹ ಆಗಿರುತ್ತಾನೆ. ಆದರೆ ನನ್ನಷ್ಟು ಅಂಕ ಬಂದಿರುವುದಿಲ್ಲ. ಆತನನ್ನು ಮುಂದೆ ತಳ್ಳುವುದಕ್ಕಾಗಿ ಮೀಸಲು. ಇದು ಯಾವುದೋ ಸರಕಾರಿ ಕೆಲಸದಲ್ಲಿ ಬಹಳ ಆಪ್ತವಾಗಿರುತ್ತದೆ. ಏಕೆಂದರೆ, ಅಲ್ಲಿ ಕೆಲಸ ಮಾಡಿದರೂ, ಬಿಟ್ಟರೂ ಕ್ಯಾರೆ ಎನ್ನುವವನಿಲ್ಲ. ಆದರೆ ಅರ್ಚಕರ ವೃತ್ತಿಯಲ್ಲಿ ಇದು ಹೇಗೆ ಕೆಲಸ ಮಾಡಬಹುದು ಎಂದು ನೋಡೋಣ. ಮಂತ್ರಗಳ ಉಚ್ಚಾರಣೆ, ಕೈಕರಣ ಸಹಿತ ಪೂರ್ತಿ ಮಂತ್ರ ನೆನಪಿಟ್ಟುಕೊಂಡಿರುವವನು ಅರ್ಚಕ ಸ್ಥಾನಕ್ಕೆ ಸೂಕ್ತನೋ? ಅಥವಾ ಅರ್ಧಮರ್ಧ ಮಂತ್ರ ಕಲಿತು, ಉಚ್ಚಾರಣೆ-ಕೈಕರಣ ಸರಿಯಾಗಿ ಬರದೇ ಇರುವವನು ಅರ್ಚಕ ಸ್ಥಾನಕ್ಕೆ ಹೆಚ್ಚು ಸೂಕ್ತನೋ? ಭಕ್ತಾದಿಗಳು ತಮ್ಮ ಗ್ರಹಚಾರ ಕಳೆದುಕೊಳ್ಳುವುದಕ್ಕಾಗಿ ಹೋಮ, ಹವನ ಮತ್ತೊಂದು ಮಗದೊಂದು ಮಾಡಿಸುತ್ತಾರೆ. ಆದರೆ, ಅಲ್ಲೂ ಉಚ್ಚಾರಣೆ ತಪ್ಪಿ, ಮಂತ್ರವೂ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳದೇ ಹೇಳಿದರೆ ಭಕ್ತಾದಿಗಳ ಗ್ರಹಚಾರ ಕಳೆಯುತ್ತದೋ? ಮತ್ತಷ್ಟು ಹೆಚ್ಚುತ್ತದೋ? ಉಚ್ಚಾರ ಸರಿ ಇರುವುದು, ಕೈಕರಣ ಗೊತ್ತಿರುವುದು ಕೇವಲ ಬ್ರಾಹ್ಮಣರಿಗೆ ಮಾತ್ರ ಎಂದು ನಾನೆಲ್ಲೂ ಹೇಳಿಲ್ಲ. ಬದಲಾಗಿ ಇಲ್ಲಿ ಅರ್ಚಕ ವೃತ್ತಿಗೆ ಬರುವುದಕ್ಕೂ ಶ್ರಮ ವಹಿಸಬೇಕು ಎನ್ನುವುದರ ಬಗ್ಗೆ ಮಾತಾಡುತ್ತಿದ್ದೇನೆ. ದೇವರ ಬಳಿ ನಿಂತವನು ಆರಾಮಾಗಿ ಆ ಸ್ಥಾನಕ್ಕೆ ಬಂದಿರುತ್ತಾನೆ ಎಂಬ ಊಹೆಯೇ ದೊಡ್ಡ ಮೂರ್ಖತನ.

ಸರಿ, ಮಂತ್ರಗಳಲ್ಲಿರುವುದು ಏನು? ದೇವರನ್ನು ಹೊಗಳುವ ಸಾಲುಗಳು. ಅದನ್ನೂ ಸರಿಯಾಗಿ ಮಾಡದೇ, ಅದರಲ್ಲೂ ಮೀಸಲು ಕೇಳುವವನು ಅರ್ಚಕ ಎಂದು ಕರೆಯಿಸಿಕೊಳ್ಳಲು ಯಾವ ರೀತಿಯಲ್ಲಿ ಅರ್ಹ? ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳುತ್ತಾನೆ ‘ದೈವಾಧೀನಂ ಜಗತ್‌ಸರ್ವಂ ಮಂತ್ರಾಧೀನಂತು ದೈವತಂ ತನ್ಮಂತ್ರಾ ಬ್ರಾಹ್ಮಣಾಧೀನಂ ಬ್ರಾಹ್ಮಣೋ ಮಮದೇವತಾ॥’
ದೇವರು ಅಧೀನನಾಗಿರುವುದು ಮತ್ತು ಆತನಿಗೆ ಶಕ್ತಿ ವೃದ್ಧಿಸುವುದೇ ಮಂತ್ರಗಳಿಂದ. ಇಂಥ ಹೇಳುವ ಮಂತ್ರದಲ್ಲೂ ವಿನಾಯಿತಿ ಬೇಕು, ಮೀಸಲು ಬೇಕು ಎಂದರೆ, ಯಾವ ಬಾಯಿಯಿಂದ ಅವನನ್ನು ಅರ್ಚಕ ಎಂದು ಕರೆಯುವುದು? ಮಾಡುವ ಕೆಲಸವನ್ನೇ ಸರಿಯಾಗಿ ಮಾಡದವನಿಗೆ ಮೀಸಲು ಕೊಟ್ಟು ಮಾಡುವುದಾದರೂ ಏನು?

‘ಜನ್ಮನಾ ತಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ’ ಎಂದು ವೇದಗಳಲ್ಲಿ ಹೇಳಿದ್ದಾರೆ. ಇದರ ಅರ್ಥ – ‘ಹುಟ್ಟುವಾಗ ಎಲ್ಲರೂ ಶೂದ್ರರೇ ಆಗಿರುತ್ತಾರೆ, ಸಂಸ್ಕಾರದಿಂದ ಬ್ರಾಹ್ಮಣರಾಗುತ್ತಾರೆ’ ಎಂದು. ಅಂದರೆ, ಹುಟ್ಟಿನಿಂದ ಯಾರೂ ಮಂತ್ರ ಹೇಳಿಕೊಂಡು, ಜನಿವಾರ ಧರಿಸಿಯೇ ಹುಟ್ಟಿರುವುದಿಲ್ಲ. ಅರ್ಥಾತ್, ಬ್ರಾಹ್ಮಣ ಕುಲದಲ್ಲಿ ಹುಟ್ಟಿದರೂ ಆತ ಶೂದ್ರನೇ ಆಗಿರುತ್ತಾನೆ ಮತ್ತು ಕೆಲ ಸಂಸ್ಕಾರವನ್ನು ಅನುಸರಿಸುವುದರಿಂದ ಶೂದ್ರನೂ ದ್ವಿಜ, ಬ್ರಾಹ್ಮಣನಾಗುತ್ತಾನೆ ಎಂದರ್ಥ. ಹುಳುಕು ಹುಡುಕುವವರು ಮತ್ತು ಅರೆಬೆಂದ ತಲೆಗಳು ಇದರಲ್ಲೂ ಹುಳುಕು ಹುಡುಕುತ್ತವೆ. ಏನೆಂದರೆ, ಬ್ರಾಹ್ಮಣರಿಗೆ ಮಾತ್ರ ಸಂಸ್ಕಾರ ಇರುವುದಾ? ಬೇರೆಯವರಿಗಿಲ್ಲವಾ ಎಂದು. ಅಂಥ ತಲೆಗಳಿಗೆ ಉತ್ತರಿಸಲೆಂದೇ ವೇದಗಳಲ್ಲಿ ಮತ್ತೊಂದು ಮಾತಿದೆ. ‘ಬ್ರಹ್ಮಜ್ಞಾನ ಇತಿ ಬ್ರಾಹ್ಮಣಃ’ ಅಂದರೆ, ಬ್ರಾಹ್ಮಣ ಎಂಬುದು ಜನನ ಪತ್ರದಲ್ಲಿ, ಶಾಲಾ ದಾಖಲೆಯಲ್ಲಿ ಬರೆಯುವಾಗ ಜಾತಿ ಎಂದಾಯಿತೇ ಹೊರತು, ಅಲ್ಲಿಯವರೆಗೆ ‘ಯಾರು ಬ್ರಹ್ಮಜ್ಞಾನವನ್ನು ಪಡೆದಿರುತ್ತಾನೋ ಅವನು ಬ್ರಾಹ್ಮಣನಾಗುತ್ತಾನೆ’ ಎಂಬುದೇ ಅರ್ಥವಾಗಿತ್ತು. ಎಲ್ಲೂ ಬ್ರಹ್ಮಜ್ಞಾನ ಒಂದೇ ಒಂದು ಜಾತಿಗೆ, ಧರ್ಮಕ್ಕೆ ಮಾತ್ರ ಸೀಮಿತ ಎಂದು ಹೇಳಿಲ್ಲ. ವೇದಗಳಲ್ಲಿ ಬ್ರಾಹ್ಮಣ ಎಂಬ ಪದದ ಅರ್ಥವೇ ಇದು.

ದೇವರು ಒಲಿಯುವುದು ಯಾವುದೋ ಜಾತಿಗಲ್ಲ ಅಥವಾ ಮೀಸಲಿಗಲ್ಲ, ಬದಲಿಗೆ ತಪಸ್ಸಿಗೆ ಎಂದು ದೇವರೇ ನಮಗೆ ತೋರಿಸಿಕೊಟ್ಟಿದ್ದಾನೆ. ರಾವಣ ರಾಕ್ಷಸ ಎಂದು ಗೊತ್ತಿದ್ದರೂ ಅವನ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ ವರ ಕೊಟ್ಟನೇ ಹೊರತು, ಜಾತಿ ನೋಡಿ ಅಲ್ಲ. ಕೃಷ್ಣಮಠದಲ್ಲಿ ದಿನವೂ ಅನುಷ್ಠಾನ ಮಾಡಿದರೂ ಮಾಧ್ವರಿಗೆ ಕಾಣದ ಕೃಷ್ಣ, ನಿತ್ಯವೂ ಬಂದು ಬಾಗಿಲ ಬಳಿಯಲ್ಲೇ ಬೇಡುವ, ಭಕ್ತಿ ಸಮರ್ಪಿಸುವ ಕನಕನಿಗೆ ಕಾಣುತ್ತಾನೆಂದರೆ, ಮೂರ್ತಿಯೇ ಆತನ ಕಡೆ ತಿರುಗುತ್ತದೆ ಎಂದರೆ ಅದರರ್ಥ, ಅವನ ಸನ್ನಿಧಾನದಲ್ಲಿ ಪೂಜೆ ಮಾಡುವವರಿಗಿಂತಲೂ ಹೊರಗೆ ನಿಂತಿರುವ ಕನಕನ ಭಕ್ತಿಯನ್ನೇ ಅವನು ಮೆಚ್ಚಿದನೆಂದು. ಮೀಸಲು ಕೇಳುವವರಲ್ಲಿ ಎಷ್ಟು ಜನ ಇದೇ ಕನಕ ದಾಸರು ಬರೆದಿರುವ ಕೃತಿಗಳನ್ನು ಸರಿಯಾಗಿ ಉಚ್ಚಾರ ಮಾಡಬಲ್ಲರು? ಬೇಡ, ಅವರ ಕೃತಿಗಳ್ಯಾವುವು, ಅದರಲ್ಲಿ ಅವರೇನು ಬರೆದಿದ್ದಾರೆ ಎಂಬುದಾದರೂ ಈ ಓರಾಟಗಾರರಿಗೆ ಸರಿಯಾಗಿ ಗೊತ್ತೇ? ತಮ್ಮ ಜಾತಿಯ ನಾಯಕ ಮಾಡಿರುವ ಸಾಧನೆಗಳು ಗೊತ್ತಿಲ್ಲ, ಕೃತಿಗಳೂ ಗೊತ್ತಿಲ್ಲ. ಆದರೆ ಮೀಸಲು ಪಡೆದು ಅರ್ಚಕನಾಗಬೇಕು.

ವಿಪರ್ಯಾಸ ಹೇಗಿದೆ ನೋಡಿ, ಕ್ಷತ್ರಿಯ ರಾಮನ ರಾಮಾಯಣ ಬರೆದಿದ್ದು ಕಾಡಲ್ಲಿ ಕಳ್ಳತನ ಮಾಡುತ್ತಿದ್ದ ವಾಲ್ಮೀಕಿ. ಅವರಿಬ್ಬರನ್ನೂ ಪೂಜೆ ಮಾಡುವವನು ಬ್ರಾಹ್ಮಣ. ವಾಲ್ಮೀಕಿ ಬ್ರಹ್ಮಜ್ಞಾನ ಪಡೆಯಲು ತಪಸ್ಸಿಗೆ ಕುಳಿತಾಗ ಅವರ ದೇಹದ ಸುತ್ತ ಹುತ್ತವೇ ಬೆಳೆದುಬಿಟ್ಟಿತ್ತು. ಆ ಅರಿಯುವಿಕೆ ಇದೆಯಲ್ಲ, ಅದು ಬ್ರಹ್ಮಜ್ಞಾನ. ವಾಲ್ಮೀಕಿ ಸಂಸ್ಕಾರದಲ್ಲಿ ಬ್ರಾಹ್ಮಣನಾಗಿದ್ದು ಆಗ. ಆತ ರಾಮಾಯಣ ಬರೆಯುವಾಗ ಬ್ರಹ್ಮಾದಿಗಳು, ನಾರದರು ಭೂಮಿಗೆ ಬಂದು ಆಶೀರ್ವಾದ ಮಾಡಿದ್ದರು. ಅಂದರೆ ಇಲ್ಲಿ ಜಾತಿಗಿಂತಲೂ ಹೆಚ್ಚು ಪ್ರಾಧಾನ್ಯ ತಪಸ್ಸಿಗೆ ಇದೆ ಎಂದರ್ಥ. ತಪಸ್ಸು ಎಂದರೆ ಮೂಗು ಮುಚ್ಚಿಕೊಂಡು ಕೂರುವುದು ಅಂತಲೂ ಅರ್ಥವಲ್ಲ. ಬದಲಿಗೆ ಶ್ರಮ ಎಂದರ್ಥ.

ಹನ್ನೆರಡು ವರ್ಷಗಳ ಕಾಲ ಯಾವುದೋ ಪಾಠಶಾಲೆಯಲ್ಲಿ ಉಪ್ಪು – ಹುಳಿ- ಖಾರ ಇಲ್ಲದ ಗಂಜಿ ತಿಂದುಕೊಂಡು, ಬೆಳಗ್ಗೆ ನಾಲ್ಕು ಗಂಟೆಗೆದ್ದು 5 ಗಂಟೆಯಿಂದ 9 ಗಂಟೆಯವರೆಗೆ ಹಸಿವಿನಿಂದ ಮಂತ್ರ ಹೇಳಿದವನಿಗಿಂತ ಮಾಂಸ ಮದ್ಯಗಳನ್ನು ಸೇವಿಸುವ ವ್ಯಕ್ತಿಯೊಬ್ಬ ಮೀಸಲಿನ ದಯೆಯಿಂದ ದೇವರ ಬಳಿ ಬಂದ ಎಂದರೆ, ತಪಸ್ಸಿಗೆ ಏನು ಬೆಲೆ ಕೊಟ್ಟಂತಾಗುತ್ತದೆ? ಮಾಂಸ ತಿನ್ನಲೇಬಾರದು ಎನ್ನುವುದು ನನ್ನ ವಾದವಲ್ಲ. ಋಷಿಮುನಿಗಳು ಹೇಳಿದಂತೆ, ಆಯುರ್ವೇದ ಹೇಳುವಂತೆ ಮತ್ತು ಇಂದಿನ ವಿಜ್ಞಾನವೂ ಸಾಬೀತು ಮಾಡಿರುವಂತೆ ಮನುಷ್ಯನ ವರ್ತನೆ ಅವನ ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ. ‘ಅರ್ಚಕನಾದವನಿಗೆ ಬೇಕಾಗುವುದು ತಾಳ್ಮೆಯೇ ಹೊರತು ಆಕ್ರೋಶವಲ್ಲ. ಮಾಂಸಾಹಾರ ಸೇವಿಸಿದರೆ, ಕೋಪ ಸಹಜವಾಗಿಯೇ ಬರುತ್ತದೆ. ಅದನ್ನು ತ್ಯಜಿಸಿ ಸಾತ್ವಿಕ ಆಹಾರ ಸೇವಿಸುವುದೂ ಒಂದು ರೀತಿಯ ತಪಸ್ಸು. ಮೀಸಲು ಕೇಳುವ ಎಷ್ಟು ಜನ ಇದನ್ನೆಲ್ಲ ಪಾಲಿಸಲು ಸಾಧ್ಯ? ಯಾವ ಶ್ರಮವನ್ನೂ ಪಡದೇ, ವಿಗ್ರಹದ ಬಳಿ ಹೋಗುವುದಕ್ಕೂ ಮೀಸಲು ಬೇಕು ಎಂದರೆ, ಅದ್ಕಕಿಂತ ಹೇಯ ಮತ್ತೊಂದಿದೆಯೇ?

ಸರಿ, ಇಷ್ಟು ದಿನ ಇಲ್ಲದ ಅರ್ಚಕ ವೃತ್ತಿಯ ಮೀಸಲು ಈಗಲೇ ಏಕೆ ಬಂತು? ಅದರಲ್ಲೂ ಒಂದು ಸ್ವಾರಸ್ಯಕರ ಸಂಗತಿಯಿದೆ. ಹೆಚ್ಚಾಗಿ ಪೌರೋಹಿತ್ಯ, ಅರ್ಚಕ ವೃತ್ತಿ ಮಾಡುತ್ತಿರುವವರು ಬ್ರಾಹ್ಮಣರು. ಬ್ರಾಹ್ಮಣರು ತಮ್ಮ ಪಾಡಿಗೆ ತಾವಿದ್ದರೂ ಬೇರೆ ಜಾತಿಗಳಿಗೆ ಇವರೆಲ್ಲ ಸೇರಿ ಏನೋ ಮಾಡಿಬಿಡುತ್ತಾರೆ ಎಂಬ ಕಲ್ಪನೆ(ಜನರಲ್ಲಿ ಹೆದರಿಕೆ ಹುಟ್ಟಿಸುವ ಮನೋಭಾವ) ಎಡಪಂಥೀಯರದ್ದು. ಪೌರೋಹಿತ್ಯದಲ್ಲೂ ಮೀಸಲು ತಂದು ಅಲ್ಲೂ ಬೇರೆ ಜಾತಿಯವರನ್ನು ನೇಮಿಸಿಬಿಟ್ಟರೆ, ಬ್ರಾಹ್ಮಣ್ಯವನ್ನು ನಾಶ ಮಾಡಬಹುದು ಎಂದು ಎಡಪಂಥೀಯರ ಆಲೋಚನೆ. ಇದೇ ಕಾರಣಕ್ಕೆ ಇತ್ತೀಚೆಗೆ ‘ಬ್ರಾಹ್ಮಣ್ಯ ಮುಕ್ತ ಭಾರತದತ್ತ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮಸಲಹೆಗಾರರು, ಕಚೇರಿಯಲ್ಲಿನ ಕೆಲಸ ಬಿಟ್ಟು ಬಂದು ಟೌನ್‌ಹಾಲ್‌ನಲ್ಲಿ ಪ್ರತಿಭಟನಾಕಾರರೊಂದಿಗೆ ಮಾತಾಡಿ ಅವರಿಗೆ ಧೈರ್ಯ ತುಂಬಿದ್ದಾರೆ.

ಯಾಕೆ ಎಲ್ಲರಿಗೂ ಬ್ರಾಹ್ಮಣರ ಮೇಲೆ ಕೋಪ? ಇವರ ಈ ನಡೆ ಬ್ರಾಹ್ಮಣ್ಯದ ಮೇಲಲ್ಲ, ಬದಲಿಗೆ ಬ್ರಾಹ್ಮಣರನ್ನು ಕಂಡರೇ ಇವರ್ಯಾರಿಗೂ ಆಗುವುದಿಲ್ಲ. ಕೇಳಿದರೆ ‘ಇಲ್ಲ ನಮಗೆ ಬ್ರಾಹ್ಮಣರ ಮೇಲೆ ಕೋಪ ಇಲ್ಲ, ನಮ್ಮದು ಬ್ರಾಹ್ಮಣ್ಯದ ವಿರುದ್ಧ ಹೋರಾಟ’ ಎನ್ನುತ್ತಾರೆ. ಈ ವಾಕ್ಯ ಹೇಗಿದೆಯೆಂದರೆ, ಗೌಡರ ಮೇಲೆ ಕೋಪ ಇಲ್ಲ ಗೌಡತ್ವದ ವಿರುದ್ಧ ಹೋರಾಟ, ಲಿಂಗಾಯತರ ಮೇಲೆ ಕೋಪವಿಲ್ಲ, ಲಿಂಗದ ಕಾನ್ಸೆಪ್ಟೇ ಸರಿ ಇಲ್ಲ ಅದರ ವಿರುದ್ಧ ಹೋರಾಟ ಎನ್ನುವುದಕ್ಕಿಂತ ಯಾವ ರೀತಿಯಲ್ಲಿ ಇವರ ಹೇಳಿಕೆಗಳು ವಿಭಿನ್ನ? ಬ್ರಾಹ್ಮಣರು ಯಾವ ಕೆಲಸ ಮಾಡುತ್ತಾರೋ ಅದಕ್ಕೊಂದು ಕಲ್ಲು ಎಸೆಯಲು ತಯಾರಾಗಿರುತ್ತಾರಲ್ಲ, ಇವರೇನಾ ಜಾತ್ಯತೀತ ಪಾಲಕರು? ಬ್ರಾಹ್ಮಣರು ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ, ಹಾಗಾಗಿ ಅಲ್ಲೂ ಮೀಸಲು ಕೇಳಿದರು, ಖಾಸಗಿ ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚು ಕಾಣಿಸಿಕೊಂಡರು, ಅಲ್ಲೂ ಈಗ ಮೀಸಲು ಕೇಳುತ್ತಿದ್ದಾರೆ. ಅಲ್ಲೆಲ್ಲೂ ಇವರ ಬೇಳೆ ಬೇಯಲಿಲ್ಲ, ಅದಕ್ಕೆ ಈಗ ಅರ್ಚಕ ಸ್ಥಾನಕ್ಕೆ ಮೀಸಲು ಬೇಕು ಎನ್ನುತ್ತಿದ್ದಾರೆ. ದೇವರನ್ನು ಸಂತುಷ್ಟಗೊಳಿಸುವುದಕ್ಕೆ ಹೇಳುವ ಮಂತ್ರದಲ್ಲೂ ಮೀಸಲು ಬೇಕು ಎನ್ನುವುದು ಅಂಥವರ ಬೌದ್ಧಿಕ ಅಧಃಫತನಕ್ಕೆ ಹಿಡಿದ ಕನ್ನಡಿಯಲ್ಲದೆ ಮತ್ತಿನ್ನೇನು? ಮಂತ್ರವನ್ನೇ ಹೇಳಲು ಬಾರದವನು ದೇವರಿಗೆ ಹೇಗೆ ತಾನೆ ಪೂಜೆ ಮಾಡಲು ಸಾಧ್ಯ?

ಬ್ರಾಹ್ಮಣರು, ಗೌಡರು, ಶೆಟ್ಟಿಗಳು, ಲಿಂಗಾಯತರು ಮತ್ತು ಇನ್ನಿತರ ಜನರಲ್ ಮೆರಿಟ್‌ನವರು ತಮ್ಮ ಬುದ್ಧಿಶಕ್ತಿಯಿಂದ ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ, ಅದಕ್ಕೇ ನಮಗೆಲ್ಲ ಹೊಟ್ಟೆ ಉರಿ. ಗೌಡರನ್ನು ಮತ್ತಿತರನ್ನು ಮುಟ್ಟಿದರೆ ನಮಗೆ ಉಳಿಗಾಲವಿಲ್ಲ, ಪುಳಿಚಾರು ತಿನ್ನುವ ಬ್ರಾಹ್ಮಣರನ್ನು ಅದಕ್ಕಾಗಿಯೇ ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಬಾಯಿಬಿಟ್ಟು ಒಂದು ಮಾತು ಹೇಳಿಬಿಡಿಯಲ್ಲ? ಇವರ ‘ಬ್ರಾಹ್ಮಣ್ಯ ಮುಕ್ತ ಭಾರತದತ್ತ ನಮ್ಮ ನಡಿಗೆ’ ಎಂಬ ಹೋರಾಟ ನಡೆದ ಮೇಲೇ ಇಂಥ ಬೇಡಿಕೆಗಳು ತಲೆಯೆತ್ತುತ್ತವೆ ಎಂದರೆ, ಇಷ್ಟು ದಿನ ಯಾರಿಗೂ ಮೀಸಲು ಬೇಕು ಎಂದು ಅನಿಸಲೇ ಇಲ್ಲವೋ?

ಕೆಲ ಎಡಪಂಥೀಯ ಸಂಘಟನೆಗಳು ದೇವರನ್ನೇ ನಂಬುವುದಿಲ್ಲ. ಮಾತೆತ್ತಿದರೆ ರಾಮ ಸೀತೆಯನ್ನು ನೋಯಿಸಿದವನು, ಸ್ತ್ರೀ ದ್ವೇಷಿ. ಕೃಷ್ಣ ಹುಡುಗಿಯರ ಸುತ್ತಲೇ ಇರುತ್ತಿದ್ದ, ಹಾಗಾಗಿ ಅವನು ಸರಿ ಇಲ್ಲ ಎಂದು ಹೇಳುತ್ತಿದ್ದವರ ತಂಡವೇ ಮೀಸಲು ಕೇಳಿದೆ ಎಂದರೆ, ಇವರ ಉದ್ದೇಶ ಹಿಂದುಳಿದವರನ್ನು ಮೇಲೆತ್ತುವುದೋ ಅಥವಾ ಬ್ರಾಹ್ಮಣರನ್ನು ಬಗ್ಗುಬಡಿಯುವುದೋ? ಇನ್ನೊಬ್ಬರು ನೆಮ್ಮದಿಯಿಂದಿರಲೂ ಬಿಡುವುದಿಲ್ಲ, ತಾವೂ ನೆಮ್ಮದಿಯಿಂದಿರುವುದಿಲ್ಲ. ಇಷ್ಟಾಗಿಯೂ ಇವರ ವಿಚಾರ, ಕುತಂತ್ರ ಏನೇ ಇರಲಿ ಬೇಸರವಿಲ್ಲ. ತಲೆ ಖರ್ಚು ಮಾಡುವವನು ಬ್ರಾಹ್ಮಣನಾಗಿದ್ದರೂ ಇನ್ನೊಂದು ಜಾತಿಯಾಗದ್ದರೂ ಎಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳುತ್ತಾನೆ. ಮೀಸಲಿನ ಕ್ಯೂನಲ್ಲಿ ನಿಂತು ಕಾಕಾ ಎನ್ನುವುದಿಲ್ಲ.

ಆದರೆ, ಅರ್ಚಕನ ಸ್ಥಾನಕ್ಕೇರಬೇಕಾದರೆ ಶಾಸ್ತ್ರೋಕ್ತವಾಗಿ ಮಂತ್ರವನ್ನು ಕಲಿತು ಬರಲಿ, ಆಗ ಅವರನ್ನು ಅರ್ಚಕ ಎಂದು ಒಪ್ಪಿಕೊಳ್ಳೋಣ. ಹಾಗೆ ತಪಸ್ಸು ಮಾಡಿದ ರಾಕ್ಷಸ ರಾವಣನನ್ನೇ ಇಂದಿಗೂ ಜನರು ಗೌರವಿಸುವಾಗ, ವಾಲ್ಮೀಕಿಯನ್ನೇ ನಮ್ಮ ಗುರುಗಳು ಎಂದು ಬ್ರಾಹ್ಮಣರು ಆರಾಧಿಸುವಾಗ, ಕ್ಷತ್ರಿಯ ರಾಮ, ಗೊಲ್ಲರ ಕೃಷ್ಣನನ್ನೇ ಮನೆದೇವರನ್ನಾಗಿಸಿಕೊಂಡಿರುವಾಗ, ನಮ್ಮ ಜತೆಯಲ್ಲಿದ್ದವರೇ ಗುಡಿಯಲ್ಲಿ ಆರತಿ ಎತ್ತುತ್ತಿದ್ದಾರೆ ಎಂದರೆ ಯಾಕೆ ಮತ್ತು ಹೇಗೆ ಒಪ್ಪುವುದಿಲ್ಲ? ಅದನ್ನು ಬಿಟ್ಟು ದೇವರ ಮುಂದೆ ಮಂತ್ರ ಹೇಳುವುದಕ್ಕೂ ಮೀಸಲು ಕೇಳಿದರೆ, ನಾಳೆ ಅಂಥ ಪೂಜಾರಿಯ ಕಣ್ಣು, ಮನಸ್ಸು ತವಕಿಸುವುದು ದೇವರ ಪೂಜೆಗಲ್ಲ, ಬದಲಿಗೆ ತಿಂಗಳ ಸಂಬಳ, ಆರತಿ ತಟ್ಟೆಯ ಕಾಸು ಮತ್ತು ಹುಂಡಿಯೊಳಗಿರುವ ಹಣಕ್ಕಷ್ಟೇ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya