ಮಂಡ್ಯ ಮಾರ್ಕೆಟ್‌ನಲ್ಲಿ ಸಿಕ್ಕ ‘ದಿವ್ಯಸ್ಪಂದನ’

524_20091210_67420500_sanju_weds_geetha_17

ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಹೇಗಿವೆಯೋ ಹಾಗೇ, ಅದಕ್ಕಿಂತ ಹೆಚ್ಚು ಬಗೆಯ ಜನರಿದ್ದಾರೆ. ಪೆದ್ದರು, ಪೆದ್ದರ ಥರ ನಟಿಸುವವರು, ಕಾಮಿಡಿ ಮಾಡುವವರು, ಸ್ವತಃ ಕಾಮಿಡಿಗಳು ಇತ್ಯಾದಿ. ಹೀಗೇ ರಾಜಕೀಯದಲ್ಲೂ ಅಂಥ ಮಂದಿಗೇನು ಕಡಿಮೆಯಿಲ್ಲ. ಕೆಲವರು ಜನರ ಸೇವೆ ಮಾಡಬೇಕು ಎಂದು ರಾಜಕೀಯಕ್ಕೆ ಬರುತ್ತಾರೆ. ಇನ್ನು ಕೆಲವರು ರಾಜಕೀಯಕ್ಕೆ ಬಂದು ಜನರ ಸೇವೆ ಮಾಡುತ್ತಾರೆ. ಆದರೆ ಇವೆಲ್ಲಕ್ಕಿಂತ ವಿಭಿನ್ನ ಎಂದ್ರೆ, ಕೆಲವರಿಗೆ ತಾವು ಯಾಕಾಗಿ ರಾಜಕಾರಣಕ್ಕೆ ಬಂದಿದ್ದೇವೆ ಎಂಬುದೂ ಗೊತ್ತಿರುವುದಿಲ್ಲ. ಏನು ಮಾಡ ಬೇಕು ಎನ್ನುವುದೂ ಗೊತ್ತಿರುವುದಿಲ್ಲ.

ಏನು ಮಾಡುತ್ತಿದ್ದೇವೆ ಎನ್ನುವುದಂತೂ ಕೇಳುವುದೇ ಬೇಡ. ಇಲ್ಲಿ ಮಜಾ ಏನೆಂದರೆ, ಇಂಥವರನ್ನೂ ಫಾಲೋ ಮಾಡುವ ಮತ್ತೊಂದು ಬುದ್ಧಿವಂತರ ಪಡೆಯೂ ಇರುತ್ತದೆ. ಇತ್ತೀಚೆಗೆ ಕಾಂಗ್ರೆಸ್ ರಾಜಕಾರಣಿಗಳ ದೊಂಬರಾಟವನ್ನು ನೋಡಿದಾಗ ಇವೆಲ್ಲ ನೆನಪಾದವು. 500 ಮತ್ತು 1000ದ ನೋಟುಗಳನ್ನು ಮೋದಿ ಅಮಾನ್ಯ ಮಾಡಿದ ಮೇಲೆ ಬಹಳಷ್ಟು ರಾಜಕಾರಣಿಗಳಿಗೆ ನಿದ್ದೆ ಬರುತ್ತಿಲ್ಲ. ಇನ್ನು ಕಾಂಗ್ರೆಸ್ ರಾಜಕಾರಣಿಗಳು ನಿದ್ದೆ ಬರದೆಯೋ ಏನೋ, ಜನರಿಗೆ ನಿದ್ದೆ ಬರ್ತಾ ಇದೆಯೋ ಇಲ್ಲವೋ ಎಂದು ವಿಚಾರಿಸಲು ರಾತ್ರೋ ರಾತ್ರಿ ಜನರ ಬಳಿ ಹೋಗಿ ‘ನೋಟುಗಳನ್ನು ಬ್ಯಾನ್ ಮಾಡಿರುವುದರಿಂದ ನಿಮಗೇನಾದರೂ ಸಮಸ್ಯೆ ಇದೆಯೇ?’ ಎಂದು ವಿಚಾರಿ ಸುತ್ತಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ದೆಹಲಿಯಲ್ಲಿರುವ ಮಾರ್ಕೆಟ್‌ಗಳಿಗೆ ಹೋಗಿ ಜನರ ಸಮಸ್ಯೆಯನ್ನು ವಿಚಾರಿಸಿದರು. ಇದನ್ನು ನೋಡಿ ಮಾಜಿ ಸಂಸದೆ ರಮ್ಯಾ ತಾನೂ ಜನರ ‘ಚಿಲ್ಲರೆ’ ಸಮಸ್ಯೆಗಳನ್ನು ಕೇಳಲು ಮಂಡ್ಯದ ಮಾರ್ಕೆಟ್‌ಗೆ ಹೊಕ್ಕಿದ್ದರು. ‘ನಾನು ನಿಮ್ಮ ಸಮಸ್ಯೆ ಕೇಳುವುದಕ್ಕೆ ಬಂದಿದ್ದೇನೆ’ ಎಂದು ಮಾರ್ಕೆಟ್‌ನಲ್ಲಿ ರಮ್ಯಾ ಮೊನ್ನೆ ಹೇಳಿದಾಗ ‘ನೋಟ್ ಬ್ಯಾನ್ ಮಾಡಿದ್ದರಿಂದ ಸಮಸ್ಯೆ ನಮಗಾಗಿಲ್ಲ, ನಿಮಗಾಗಿರೋದು’ ಎಂದು ಜನ ಉಗಿದು ಕಳುಹಿಸಿದ್ದಾರೆ.

ಒಮ್ಮೆ ಯೋಚಿಸಿ ನೋಡಿ, ‘ನನಗೆ ಚಾರ್ಲಿ ಚಾಪ್ಲಿನ್ ಪ್ರೇರಣೆ ಎಂದು ಯಾರಾದರು ಹೇಳಿದರೆ ಒಪ್ಪಬಹುದು. ಆದರೆ ಯಾರಾದ್ರೂ ನನ್ನ ಪ್ರೇರಣೆ ರಾಹುಲ್ ಗಾಂಧಿ ಎಂದರೆ ಜನ ಹೇಗೆ ರಿಯಾಕ್ಟ್ ಮಾಡಬಹುದು? ರಾಹುಲ್ ಗಾಂಧಿ ಭಾಷಣದಲ್ಲಿ ತಮ್ಮ ಪೆದ್ದುತನದಿಂದ, ವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳದೇ ಏನೋ ಮಾತಾಡಲು ಹೋಗಿ ಇನ್ನೇನೋ ಮಾತಾಡಿ, ಕಾಮಿಡಿಯೇ ಹೆಚ್ಚು ಮಾಡುವುದರಿಂದ ಅವರೇ ನನಗೆ ಪ್ರೇರಣೆ ಎಂದರೆ, ನಾಲ್ಕು ಜೋಕು ಹೇಳು ಎಂದು ದುಂಬಾಲು ಬೀಳುವವರೇ ಹೆಚ್ಚು. ರಮ್ಯಾ ತನಗೆ ರಾಹುಲ್ ಗಾಂಧಿಯೇ ಪ್ರೇರಣೆ ಎಂದು ಎಲ್ಲೂ ಹೇಳಿಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಅವರು ಎಲ್ಲ ವಿಧದಲ್ಲೂ ರಾಹುಲ್ ಗಾಂಧಿಯನ್ನೇ ಅನುಸರಿಸುತ್ತಿದ್ದಾರೆ. ರಾಹುಲ್ ಗಾಂಧಿ ದೆಹಲಿಯಲ್ಲಿ ಏನು ಮಾಡುತ್ತಾರೋ ಅದರ ಒಂದು ಅಣಕು ಪ್ರದರ್ಶನವನ್ನು ರಮ್ಯಾ ಕರ್ನಾಟಕದಲ್ಲಿ ಮಾಡುತ್ತಾರೆ. ರಾಹುಲ್ ಗಾಂಧಿಯ ಹಾಗೇ ಗಂಭೀರ ಹಾಸ್ಯ ಮಾಡುವ ರಾಜಕಾರಣಿ ಮತ್ತೊಬ್ಬ ಹುಟ್ಟಿಲ್ಲ, ಹುಟ್ಟಲಾರ. ಆದರೆ ರಮ್ಯಾ ಕರ್ನಾಟಕದ ರಾಹುಲ್ ಗಾಂಧಿಯಾಗುತ್ತಾರಾ ಎಂಬ ಅನುಮಾನಗಳು ಈಗೀಗ ಬಲವಾಗುತ್ತಿದೆ.

ಇದಕ್ಕೆ ಉದಾಹರಣೆಯೂ ಬಹಳಷ್ಟಿದೆ, ಮೋದಿಯ ವರು ‘ಮೇಕ್ ಇನ್ ಇಂಡಿಯಾ’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ರಮ್ಯಾ ‘ಮೋದಿಯವರು ಮೇಕ್ ಇನ್ ಇಂಡಿಯಾ ಮಾಡುವುದಲ್ಲ, ಬದಲಿಗೆ ‘ಮೇಡ್ ಇನ ಇಂಡಿಯಾ’ ಮಾಡಬೇಕು ಎಂದು ಮೋದಿಗೆ ಉಪದೇಶ ನೀಡಿದ್ದರು. ಅಲ್ಲ ರಮ್ಯಾ, ಭಾರತದಲ್ಲಿ ನಿರ್ಮಿಸಿದರೆ(ಮೇಕ್) ಮಾತ್ರ ಭಾರತದಲ್ಲಿ ನಿರ್ಮಾಣಗೊಂಡಿದ್ದು(ಮೇಡ್ ಇನ್ ಇಂಡಿಯಾ) ಎಂದು ಆಗುವುದಲ್ಲವೇ? ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲದೇ ಹೇಗೆ ಮತ್ತು ಯಾಕಾಗಿ ಮಂಡ್ಯಕ್ಕೆ ಸಂಸದರಾದರೋ ಆ ಕೃಷ್ಣ ಪರಮಾತ್ಮನೇ ಬಲ್ಲ!

ಈಗ ಬಿಡಿಗಾಸೂ ಬೆಲೆಯಿಲ್ಲದ 500, 1000ರ ಹಳೆ ನೋಟು ನಮ್ಮ ಮುಂದೆ ತಂದಿಟ್ಟರೆ ಪೇಪರ್ರು ಸರಸ್ವತಿದೇವಿ ಎಂದು ಕಣ್ಣಿಗೊತ್ತಿಕೊಳ್ಳುತ್ತೇವೆ. ಆದರೆ ಆಕೆ, 2,000ರು. ಹೊಸ ನೋಟಿನ ಗುಲಾಬಿ ಬಣ್ಣವನ್ನು ಟೀಕಿಸುತ್ತಾ ಮಹಿಳೆಯವರು ಲಿಪ್‌ಸ್ಟಿಕ್ ಮರೆತರೆ, 2000ರು. ನೋಟು ತೆಗೆದುಕೊಂಡು ಹೋಗಬಹದು ಎಂದು ಹೇಳುತ್ತಾರೆ! ಬಣ್ಣದ ಲೋಕದಿಂದ ಬಂದ ರಮ್ಯಾರಿಗೆ ಹಣವೂ ಲಿಪ್‌ಸ್ಟಿಕ್ ಬಣ್ಣದ ಹಾಗೇ ಕಾಣಿಸುತ್ತದೆ, ಮತ್ತು ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೇ, ಬಾಯಿಗೆ ಬಂದ ಹಾಗೆ ಒದರುತ್ತಾರೆ ಎಂದರೆ ರಮ್ಯಾರದ್ದು ಪೆದ್ದುತನವೋ? ಅಹಂಕಾರವೋ? 2000ರುಪಾಯಿ ಇಲ್ಲದೇ ಅದೇ ಮಂಡ್ಯದ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಸಿವಿನಿಂದ ಸತ್ತಿದ್ದಾರೆ. ಆದರೆ ಅದೇ 2000ರು. ಅನ್ನು ತುಟಿಬಣ್ಣಕ್ಕೆ ಹೋಲಿಸುವ ಮಾಜಿ ಸಂಸದೆಯ ದೌಲತ್ತಿಗೆ, ಗತ್ತಿಗೆ, ಶ್ರೀಮಂತಿಕೆಗೆ ಏನೆನ್ನೋಣ?

ಮಂಡ್ಯದ ಸಂಸದೆ ಪಟ್ಟ ಕಳಚಿಬಿದ್ದ ನಂತರದ ಕೆಲ ತಿಂಗಳುಗಳು ರಮ್ಯಾ ಮೇಡಂ ಯಾರ ಕಣ್ಣಿಗೂ ಬೀಳಲೇ ಇಲ್ಲ. ಚುನಾವಣೆಗೂ ಮುನ್ನ ಮಂಡ್ಯದಲ್ಲೇ ಮನೆ ಮಾಡಿದ್ದ ರಮ್ಯಾ ರಾತ್ರೋ ರಾತ್ರಿ ಅಲ್ಲಿಂದ ಠಿಕಾಣಿ ಎತ್ತಿದ್ದರು. ಗೆದ್ದಾಗ ಸಿನಿಮಾದಲ್ಲಿ ಡೈಲಾಗ್ ಹೊಡೆದ ಹಾಗೆ ಮನೆ ಮಗಳಾಗಿರುತ್ತೇನೆ ಎಂದು ಹೇಳಿದ್ದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಮಂಡ್ಯದ ಜನರು ಮಾರನೇ ದಿನ ಬಂದು ನೋಡಿದರೆ, ಮನೆಯಲ್ಲಿ ಮಗಳೇ ಇರಲಿಲ್ಲ!

ಅಂದರೆ, ರಮ್ಯಾ ತಾನು ಗೆದ್ದಾಗ ಮಂಡ್ಯದಲ್ಲಿ ಮನೆ ಮಾಡುತ್ತಾರೆ, ಸೋತಾಗ ಪೆಟ್ಟಿಗೆ ಕಟ್ಟಿಕೊಂಡು ರಾತ್ರೋ ರಾತ್ರಿ ಹೊರಟು ಬಿಡುತ್ತಾರೆ. ಪುನಃ ಚುನಾವಣೆ ಬಂದಾಗ ಹಾಗೇ ರಾತ್ರೋ ರಾತ್ರಿಯೇ ಮಂಡ್ಯಕ್ಕೆ ಬಂದು, ನಾನು ನಿಮ್ಮ ಮನೆ ಮಗಳು ಎಂಬ ಅದೇ ಹಳೇ ಡೈಲಾಗ್ ಹೊಡೆಯುತ್ತಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇವರನ್ನು ರಮ್ಯಾ, ಒಬ್ಬ ಗೆಸ್ಟ್ ಪಾಲಿಟೀಷಿಯನ್ ಅಂತ ಅಷ್ಟಲ್ಲದೇ ಟೀಕಿಸುತ್ತಿದ್ದರಾ? ಸಿನಿಮಾದಲ್ಲೂ ರಮ್ಯಾಗೆ ಹೇಳಿಕೊಳ್ಳುವಷ್ಟು ಆಫರ್‌ಗಳಿಲ್ಲ.

ನಟಿಸಿದ ಚಿತ್ರವೂ ಮಕಾಡೆ ಮಲಗುತ್ತಿದೆ. ಜನರಿಗೆ ಸಿನಿಮಾದಲ್ಲಿ ರಮ್ಯಾ ಮುಖ ನೋಡಿದಾಗಲೆಲ್ಲ, ಕಾಂಗ್ರೆಸ್ಸೇ ಹೆಚ್ಚು ನೆನಪಾಗುವುದಕ್ಕೋ ಏನೋ, ಕೆಲ ಪ್ರೇಕ್ಷಕರು ಚಿತ್ರಮಂದಿರದಿಂದ ಖುಷಿಗಿಂತ, ಪಾಪಪ್ರಜ್ಞೆಯಿಂದ ಹೊರಬರುವುದೇ ಹೆಚ್ಚು. ಅಲ್ಲಿ ಸೋಲು ಕಾಣುವುದಕ್ಕೂ ಚುನಾವಣೆ ಬರುತ್ತೆ, ಚುನಾವಣೆಯಲ್ಲಿ ಸೋಲುಣ್ಣುವ ಹೊತ್ತಿಗೆ ಇನ್ಯಾವುದೋ ಚಿತ್ರದಲ್ಲಿ ಆಫರ್ ಬರುತ್ತೆ. ಈ ಗೆಸ್ಟ್ ಪಾಲಿಟೀಷಿಯನ್‌ರ ಜೀವನ ಸಾಗುತ್ತರುವುದೇ ಹೀಗೆ. ಈಗ ರಮ್ಯಾ ಏಕಾಏಕಿ ಮಂಡ್ಯದ ಮಾರ್ಕೆಟ್‌ಗೆ ನುಗ್ಗಿದಾಗ ಜನರಿಗೆ ಅಚ್ಚರಿಯಾಗಿದ್ದೂ ಇದೇ ಕಾರಣಕ್ಕೆ. ಏಕಿಲ್ಲ ಪೋಕಿಲ್ಲ, ಇಷ್ಟು ತಿಂಗಳು ಇಲ್ಲದ ರಮ್ಯಾ ಬಂದು, ‘ನೋಟ್ ಬ್ಯಾನ್ ಆಗಿದ್ದರಿಂದ ನಿಮಗೆ ಸಮಸ್ಯೆ ಆಗಿದೆಯೇ?’ ಎಂದು ಕೇಳಿದಾಗ ಜನರು ಸಹಜವಾಗಿಯೇ ದಿಗ್ಭ್ರಾಂತರಾಗಿದ್ದರು. ಈಗ ರಮ್ಯಾ ಮತ್ತೆ ಮಂಡ್ಯದ ಮನೆಮಗಳಾಗಿರುವುದು ಏಕೆ ಎಂದು ವಿಶೇಷವಾಗಿ ಹೇಳಬೇಕಿಲ್ಲ.

ಆ ಮಾರ್ಕೆಟ್‌ನಲ್ಲಿ ರಮ್ಯಾಳ ವಿರುದ್ಧ ಜನರು ಘೋಷಣೆ ಕೂಗಿದಾಗ, ರೊಚ್ಚಿಗೆದ್ದ ರಮ್ಯಾ ಜನರ ಬಳಿಯೇ ವಾಗ್ವಾದಕ್ಕೆ ನಿಂತಿದ್ದರು. ಯಾವಾಗ ಜನರೂ ಒಂದಾದಮೇಲೆ ಒಂದು ಪ್ರಶ್ನೆಗಳನ್ನು ಕೇಳಿದರೋ ರಮ್ಯಾ ಪರಾರಿ! ಆದರೆ, ಜನರು ಬಹಳ ಸಂಕಷ್ಟದಲ್ಲಿ ಇದ್ದಾರೆಂದು ಬಿಂಬಿಸಲು ಮೂರ್ನಾಲ್ಕು ಜನರ ಧ್ವನಿ ಬಿಟ್ಟು ಬೇರೆಯವರ ಧ್ವನಿ ಕೇಳದಂತೆ ಮುಖದ ಹತ್ತಿರವೇ ಕ್ಯಾಮೆರಾ ಇಟ್ಟು ವಿಡಿಯೊ ಮಾಡಿ ಫೇಸ್‌ಬುಕ್ಕಲ್ಲಿ ಹಾಕಿಕೊಂಡಿದ್ದಾರೆ. ಇನ್ನು ಮೋದಿಗೆ ಜೈಕಾರ ಕೂಗಿದವರಿಗೆ ರಾಷ್ಟ್ರಪ್ರೇಮದ ಪಾಠ ಸಹ ಮಾಡಿದ್ದಾರೆ. ಇಷ್ಟು ದಿನ ಎಲ್ಲಿಗೆ ಹೋಗಿದ್ಯಮ್ಮ ಎಂದು ಜನರು ಫೇಸ್‌ಬುಕ್/ಟ್ವಿಟರ್‌ನಲ್ಲಿ ಕೇಳಿದರೆ, ಅವರೆಲ್ಲರನ್ನೂ ಬ್ಲಾಕ್ ಮಾಡಿ, ಬ್ಲಾಕ್ ಭಾಗ್ಯ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿದ್ದಾರೆ. ಕಳೆದ ಚುನಾವಣೆಯ ನಂತರ ರಮ್ಯಾ ಮಾಯವಾದ ಬಳಿಕ, ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನೂ ಬ್ಲಾಕ್ ಮಾಡಿ ತಮ್ಮ ಸಹಿಷ್ಣುತೆಯನ್ನೂ, ಉದಾರತೆಯನ್ನೂ ಮೆರೆದಿದ್ದಾರೆ.

ಕೆಲ ದಿನಗಳ ಹಿಂದೆ, ಕಾವೇರಿ ಹೋರಾಟಕ್ಕೆ ರಮ್ಯಾ ಬರಬೇಕೆಂದು ಇದೇ ಮಂಡ್ಯದ ಜನತೆ ಕೋರಿದಾಗ ಬರುವುದಿಲ್ಲ ಎಂದಿದ್ದರು. ಯಾಕೆ ಎಂಬ ಕಾರಣ ಕೇಳಿದರೆ, ಮತ್ತೆ ರಾಹುಲ್ ಗಾಂಧಿ ನೆನಪಾಗದೇ ಹೋಗುವುದಿಲ್ಲ. ‘ನನಗೆ ಸೆಕ್ಯುರಿಟಿ ಇಲ್ಲ, ಅದಕ್ಕಾಗಿ ಹೋರಾಟಕ್ಕೆ ಬರುವು ದಿಲ್ಲ’ ಎಂದಿದ್ದರು. ಅದರ ಅರ್ಥ ಇಷ್ಟೇ. ತನ್ನ ಕ್ಷೇತ್ರದಲ್ಲೇ ತಾನು ಸ್ವತಂತ್ರವಾಗಿ, ಸ್ವಚ್ಛಂದವಾಗಿ ಓಡಾಡಲು ‘ಮಾಜಿ’ ಸಂಸದೆ ಭದ್ರತೆ ಕೇಳುತ್ತಾರೆ ಎಂದರೆ, ರಮ್ಯಾರ ಆಡಳಿತ ಜನರಿಗೆ ಅದೆಷ್ಟು ರೇಜಿಗೆ ಹುಟ್ಟಿಸಿರಬಹುದು? ಅದನ್ನು ಜನರೇ ಲೆಕ್ಕ ಹಾಕಿಕೊಳ್ಳಲಿ. ಸರಿ, ಆಗ ಇದ್ದ ಭದ್ರತೆಯ ಭಯ ಮೊನ್ನೆ ಮಾರ್ಕೆಟ್‌ಗೆ ನುಗ್ಗುವಾಗ ಏಕೆ ಇರಲಿಲ್ಲ? ಜನರು ರೊಚ್ಚಿಗೆದ್ದು ‘ಮೋದಿಗೆ ಜೈ’ ಎಂದಾಗ ಅವರ ಬಳಿ ವಾಗ್ವಾದಕ್ಕೆ ಇಳಿಯುವಾಗಲೂ ಇಲ್ಲದ ಭದ್ರತೆಯ ಭಯ, ಕರ್ನಾಟಕದ ಪರವಾಗಿಯೇ ಹೋರಾಟ ಮಾಡುವುದಕ್ಕೆ ಮಂಡ್ಯದ ಜನರೇ ‘ಬಾರಕ್ಕೋ’ ಎಂದು ಕರೆದಾಗ ಏಕೆ ಕಾಡಿತ್ತು? ನೀವೇ ಯೋಚನೆ ಮಾಡಿ, ನಿಜವಾಗಿಯೂ ಭದ್ರತೆಯೇ ಸಮಸ್ಯೆಯಾಗಿದ್ದರೆ, ಹೋರಾಟದಲ್ಲಿ ಜನ ಸಂದಣಿ ಹೆಚ್ಚೋ ಮಾರ್ಕೆಟ್‌ನಲ್ಲೋ? ಇದರ ಅಸಲಿ ಯತ್ತು ಇಷ್ಟೇ… ಆಗ ಕರ್ನಾಟಕ ಸರಕಾರದ ವಿರುದ್ಧ ಜನ ಸಿಡಿದೆದ್ದಿದ್ದರು, ಸ್ವಲ್ಪ ಯಾಮಾರಿದರೂ ಸರಕಾರಕ್ಕೂ, ತನಗೂ ಕುತ್ತು. ಈಗ ಹಾಗಲ್ಲ, ಏನೇ ಆದರೂ ಅದು ಮುಂದಿನ ಚುನಾವಣೆಗೆ ಪಬ್ಲಿಸಿಟಿ. ಇದು ಹೇಗೆಂದರೆ, ಕಳೆದ ಚುನಾವಣೆಯಲ್ಲಿ ನಾಮಿನೇಷನ್ ಸಲ್ಲಿಸಬೇಕಾದರೆ, ಫಾರಂನಲ್ಲಿ ಅಪ್ಪನ ಹೆಸರು ಬರೆದಿಲ್ಲ ರಮ್ಯಾ ಎಂದು ಜೆಡಿಎಸ್‌ನವರು ಹೇಳಿದಾಗ ರಮ್ಯಾ ಗೊಳೋ ಎಂದು ಟಿವಿ ಮುಂದೆಯೇ ಅತ್ತು, ಜನರ ಮನೆಮಗಳಾಗಿದ್ದಳು. ಆಗ ಮಂಡ್ಯದಲ್ಲೇ ಮನೆಯಿತ್ತು ಎಂಬುದು ಬೇರೆ ಮಾತು ಬಿಡಿ.

ತಾನು ರಾಹುಲ್ ಗಾಂಧಿಯಂತೆ ಮಾತಾಡಬಲ್ಲೆ ಎಂದು ಮಾರ್ಕೆಟ್‌ಗೆ ಹೋದರೆ ಜನರು ಬಕ್ರಾ ಆಗಲು ಇದು ದೆಹಲಿಯೂ ಅಲ್ಲ, ನಮ್ಮವರಿಗೇನು ತಲೆಯೂ ಕೆಟ್ಟಿಲ್ಲ. ಅದು ಮಾರುಕಟ್ಟೆ… ಅಲ್ಲಿ ಬರುವವರೆಲ್ಲರೂ ವ್ಯಾಪಾರ ಕ್ಕಾಗೇ ಎಂಬುದು ಜನರಿಗೆ ಸರಿಯಾಗೇ ತಿಳಿದಿದೆ. ಹೇಗೆ ಉತ್ತರ ಕೊಡಬೇಕೋ ಹಾಗೇ ಕೊಟ್ಟಿದ್ದಾರೆ. ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೆಂದು ರಾಹುಲ್ ಗಾಂಧಿಯಿಂದ ಪಾಠವಾಗದ ಕಾರಣ, ಹಾಗೇ ವಾಪಸ್ ಬಂದಿದ್ದಾರೆ. ಆ ರೀತಿಯಾಗಿ ಜನರಿಂದ ಬಯ್ಯಿಸಿಕೊಂಡ ವಿಡಿಯೊವನ್ನೂ ಹಾಕಿದ್ದರೆ, ರಮ್ಯಾ ನಿಜವಾಗಿಯೂ ಸಮಸ್ಯೆಯನ್ನೇ ಕೇಳಲೆಂದು ಬಂದಿದ್ದರು ಎನ್ನಬಹುದಿತ್ತು. ಆದರೆ ಸಾರ್ವಜನಿಕರು ಮೋದಿಗೆ ಬಯ್ಯುವ ವಿಡಿಯೊವನ್ನು ಶೂಟಿಂಗ್ ಮಾಡಲು ನಟಿಯಾಗಿ ಬಂದಿದ್ದರು ಎಂದು ಜನರಿಗೆ ಬಹಳ ಬೇಗವೇ ಗೊತ್ತಾಗಿ ಹೋಯಿತು. ರಮ್ಯಾ ಅವರೇ, ಇನ್ನೊಮ್ಮೆ ಮಂಡ್ಯದ ಮಾರ್ಕೆಟ್‌ಗೆ ಹೋಗು ವಾಗ ನಾನೇ ರಾಹುಲ್ ಗಾಂಧಿ ಎಂದು ಹೋಗಬೇಡಿ. ನೀವು ಮತ್ತೊಂದು ರಾಹುಲ್ ಗಾಂಧಿಯಾಗುವುದು ಬೇಡ. ಆ ಸ್ಥಾನ ಅವರು ಬಿಟ್ಟುಕೊಡುವುದಿಲ್ಲ. ನೀವು ನಿಮ್ಮದೇ ಛಾಪು ಮೂಡಿಸಿ ಮತ್ತೊಮ್ಮೆ ಮಂಡ್ಯದ ‘ಮನೆಮಗಳು’ ಆಗುವುದಕ್ಕೆ ಮಾರ್ಕೆಟ್ ಮೂಲಕ ಎಂಟ್ರಿ ಪಡೆದು ಮೊದಲ ಪ್ರಯತ್ನ ಮಾಡಿದ್ದೀರಿ.
ಶುಭವಾಗಲಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya