ಉರಿಯಲ್ಲಿ ಬೆಂದರೂ ಹೃದಯ ಸಾಮ್ರಾಟರಾದವರು

139686709157dfc8584caed-e1474608985145

ನಮ್ಮ ರಾಜ್ಯದ ಮಾಧ್ಯಮ ಸಲಹೆಗಾರನೊಬ್ಬ ಹೇಳುತ್ತಾನೆ ‘ಸೈನಿಕರು ಬಡತನದಿಂದ ಸೇನೆಗೆ ಸೇರುತ್ತಾರೆಯೇ ವಿನಾ ದೇಶ ಭಕ್ತಿಯಿಂದಲ್ಲ. ಕ್ಯಾಮೆ ಇಲ್ಲದ ಕನ್ಹಯ್ಯ ಹೇಳುತ್ತಾನೆ: ಹತ್ತನೇ ಕ್ಲಾಸ್ ಪಾಸಾದವರೆಲ್ಲ ಸೈನ್ಯಕ್ಕೆ ಸೇರುತ್ತಾರೆ.

ಆರ್‌ಜೆಡಿಯ ವಕ್ತಾರ ಹೇಳುತ್ತಾನೆ:

ಎಲ್ಲ 18 ಸೈನಿಕರೂ ಲಂಚ ಕೊಟ್ಟು ಸೈನ್ಯಕ್ಕೆ ಸೇರಿದ್ದಾರೆ. ಹಾಗಾಗಿ ಇವರು ಸಾಯಲು ಅರ್ಹರು. ಅವರನ್ನು ಕೊಂದ ಅಷ್ಟೂ ಉಗ್ರರಿಗೂ ಧನ್ಯವಾದ. ಸರಕಾರದ ಬಿಟ್ಟಿ ಕೂಳು ತಿನ್ನುವ ಒಬ್ಬ ಸೈನ್ಯಕ್ಕೆ ಸಲಹೆ ಕೊಡುತ್ತಾನೆ, ಇನ್ನೊಬ್ಬ ಹತ್ತನೇ ಕ್ಲಾಸ್ ಓದಿದ ಸೈನಿಕನ ತೆರಿಗೆ ಹಣದಲ್ಲೇ ವಿದ್ಯಾಭ್ಯಾಸ ಮಾಡುತ್ತಾನೆ ಮತ್ತೊಬ್ಬ ತಾನೇ ಲಂಚ ತೆಗೆದುಕೊಂಡರೂ ಚಿಂತೆಯಿಲ್ಲ, ಯೋಧರು ಲಂಚ ಕೊಡುವುದು ತಪ್ಪಂತೆ.

ಅಸಲಿಗೆ ಲಂಚ ಕೊಟ್ಟು ಸತ್ತಿದ್ದರಿಂದ ಇವರಿಗೇನು ಬಂತು ಲಾಭ? ಗೊತ್ತಿಲ್ಲ. ಪಾಕಿಸ್ತಾನ ಕೃಪಾಪೋಷಿತ ಉಗ್ರರು ಮೊನ್ನೆ ನಡೆಸಿದ ಉರಿ ದಾಳಿಯಲ್ಲಿ ಒಟ್ಟಾರೆ ಇಪ್ಪತ್ತು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಮಾಧ್ಯಮ ಸಲಹೆಗಾರ ಹೇಳಿದಂತೆ ಬಹುತೇಕ ಜನ ಬಡವರಾಗಿದ್ದರೂ, ದೇಶಪ್ರೇಮದ ಬಡತನವಿರಲಿಲ್ಲ. ಆ ಯೋಧರು ಹುಟ್ಟುವಾಗಲೂ ಬಡವರಾಗಿದ್ದರು, ಸಾಯುವಾಗಲೂ ಬಡವರಾಗಿ ಸತ್ತರು. ಆದರೆ, ಸತ್ತ ಮೇಲೆ ಎಲ್ಲರ ಹೃದಯದಲ್ಲಿ ನೆಲೆಸಿ ಶ್ರೀಮಂತರಾದರು. ಜನರ ಹೃದಯದಲ್ಲಿ ಸಾಮ್ರಾಟರಾಗಿ ಮೆರೆದರು. ಒಬ್ಬೊಬ್ಬ ಸೈನಿಕ ಆಡಿದ ಮಾತು, ಅವನ ಕುಟುಂಬ ಇದ್ದ ಪರಿಸ್ಥಿತಿ ನೋಡಿದರೆ, ನಮ್ಮ ಕಷ್ಟಗಳೆಲ್ಲ ಕಷ್ಟವೇ ಅಲ್ಲ ಅನಿಸುತ್ತದೆ. ಮೊನ್ನೆ ಉರಿ ದಾಳಿಯಲ್ಲಿ ಹುತಾತ್ಮರಾದ ಕುಟುಂಬಗಳನ್ನು ಪರಿಚಯ ಮಾಡಿಕೊಡಬೇಕಿದೆ.

ಸಿಪಾಯಿ ಜಾವ್ರಾ ಮುಂಡಾ

ಮುರ್ದಾಬಾದ್ ಮುರ್ದಾಬಾದ್, ಪಾಕಿಸ್ತಾನ್ ಮುರ್ದಾಬಾದ್ಅಮರ್ ರಹೇ ಅಮರ್ ರಹೇ ಜಾವ್ರಾ ಮುಂಡಾ ಅಮರ್ ರಹೇ… ಇದು ಹುತಾತ್ಮ ಜಾವ್ರಾ ಮುಂಡಾನ ಊರಾದ ಜಾರ್ಖಂಡ್ ಮೆರ್ಲಾದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪ್ರತಿಭಟನೆ. ದೇಶವನ್ನು ಉಳಿಸಲು ಉಗ್ರರ ಗುಂಡು ತಿಂದ ಜಾವ್ರಾ ಮುಂಡಾಗೆ ಇನ್ನೂ 34ವರ್ಷವಷ್ಟೇ. ಇದು ಜಾವ್ರಾ ಮುಂಡಾ ಬಯಸಿದಂಥ ಸಾವು. ಉರಿಯಂಥ ಸ್ಥಳದಲ್ಲಿ ಕ್ಷಣಕ್ಷಣವೂ ಪಾಕ್ ಮತ್ತು ಆ ದೇಶದ ಉಗ್ರರೊಂದಿಗೆ ಹೋರಾಡುವ ಅವಕಾಶ ಇರುತ್ತೆ ಎಂದು ಅವನ ಸಹೋದ್ಯೋಗಿ ಹೇಳಿದ ಒಂದೇ ಒಂದು ಮಾತಿಗೆ, ತಾನೇ ಕೇಳಿ, ಕಾಡಿ ಬೇಡಿ ಮೂರು ವರ್ಷದ ಹಿಂದೆ ಉರಿಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದ.

ಇವನ ಊರಿನಲ್ಲಿ ಯೋಧರದ್ದೇ ಹಿಂಡು.. ಸತತ ಮೂರು ತಲೆಮಾರಿನಿಂದ ಇವರ ಊರಿನಲ್ಲಿ ಯೋಧರಾಗಿ ಹೊರ ಹೋಗುತ್ತಲೇ ಇದ್ದಾರೆ. ಇಂಥ ಊರಿನಿಂದ, ಯೋಧರ ಕತೆಗಳನ್ನು ಕೇಳಿಕೊಂಡು ಬೆಳೆದು ಬಂದ ಹುಡುಗ ಜಾವ್ರಾಗೆ ಸಹಜವಾಗಿಯೇ ಸೈನ್ಯಕ್ಕೆ ಸೇರಿಕೊಂಡ. ಹುತಾತ್ಮನ ಹೆಣ ಊರಿಗೆ ಬರುತ್ತಿದ್ದಂತೆ, ಎಲ್ಲರೂ ಕಣ್ಣೀರಿಟ್ಟರು. ಆದರೆ ಜಾವ್ರಾ ತಾಯಿಯ ಕಣ್ಣಲ್ಲಿ ಮಾತ್ರ ಮಗ ಏನೋ ದೊಡ್ಡ ಸಾಧನೆ ಮಾಡಿ ಜೀವಂತ ವಾಪಸ್ ಬಂದಿದ್ದಾನೆಂಬ ಹೆಮ್ಮೆಯಿದ್ದಂತೆ ಕಾಣುತ್ತಿತ್ತು.

ಇದನ್ನು ನೋಡಿದ ಊರಿನ ಜನರು ಜಾವ್ರಾ ತಾಯಿ ಸಲ್ಮೀ ಧನ್ವಾರ್ರನ್ನು ಮಾತಾಡಿಸಿದಾಗ ಅವರು ಹೇಳಿದ್ದಿಷ್ಟು- ‘ನನ್ನ ಮಗ ನನ್ನೊಂದಿಗಿಲ್ಲ ಎಂಬ ಸಣ್ಣ ಬೇಜಾರು ಇದೆ ಅಷ್ಟೇ… ಆದರೆ ಅವನು ದೇಶಕ್ಕಾಗಿ ಪ್ರಾಣ ಕೊಟ್ಟನಲ್ಲ ಅನ್ನೋ ಹೆಮ್ಮೆ ಇದೆ. ಅಷ್ಟು ಸಾಕು ನನಗೆ’ಜಾವ್ರಾನ 18 ವರ್ಷದ ಸಹೋದರ ದಾವುದ್ ಮುಂಡಾ ಬಿಎ ಓದುತ್ತಿದ್ದು, ಅಣ್ಣನ ಹೆಣದ ಮುಂದೆ ಪ್ರತಿಜ್ಞೆ ಮಾಡುತ್ತಾನೆ – ‘ಅಕ್ಟೋಬರ್‌ನಲ್ಲಿ ರಾಂಚಿಯಲ್ಲಿ ನಡೆಯುವ ಪರೀಕ್ಷೆಯನ್ನು ಬರೆದು, ಸೇನೆಗೆ ಬಂದು ನಿನ್ನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ, ಹಾಗೇ ಅತ್ತಿಗೆ ಮತ್ತು ಮೂರು ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ. ನೆಮ್ಮದಿಯಾಗಿ ಹೋಗಿ ಬಾ ಅಣ್ಣ!’

ಸಿಪಾಯಿ ರಾಕೇಶ್ ಸಿಂಗ್, 28ವರ್ಷ

ನಾಲ್ಕು ದಿನದ ಹಿಂದೆ ನನಗೆ ಕರೆ ಮಾಡಿದ್ದ. ‘ಅಪ್ಪಾ, ನಿಮಗೆ ಕರೆ ಮಾಡುವುದಕ್ಕಾಗಿ ಒಂದು ಬೆಟ್ಟ ಹತ್ತಿ, ತುದಿಗೆ ಬಂದು ನಿಂತಿದ್ದೇನೆ. ನಾನಿರುವ ಕಡೆ ಸಿಗ್ನಲ್ ಸಿಗುವುದಿಲ್ಲ. ಸುಮ್ಮನೆ ಕರೆ ಮಾಡಲಿಕ್ಕೆ ಹೋಗಬೇಡಿ. ನನ್ನ ಕುಟುಂಬ ನನ್ನ ಜೊತೆಯೇ ಇರಬೇಕೆಂಬ ಆಸೆಯಿದೆ. ಆದರೆ ಏನ್ ಮಾಡ್ಲಿ ಅಪ್ಪಾ, ಉರಿಯಲ್ಲಿ ಅದು ಸಾಧ್ಯವಿಲ್ಲ.’ ಎಂದು ಹೇಳಿ ಫೋನ್ ಇಟ್ಟಿದ್ದ. ನಮಗೂ ಗೊತ್ತಿರಲಿಲ್ಲ, ಅವನಿಗೂ ಗೊತ್ತಿರಲಿಲ್ಲ, ಅದೇ ಕೊನೆಯ ಕರೆ ಎಂದು.

ಮತ್ತೊಂದು ಕರೆ ಮಾಡುವಷ್ಟರಲ್ಲಿ ಜವರಾಯನ ಕರೆಯನ್ನೇ ಸ್ವೀಕರಿಸಿಬಿಟ್ಟ ಎಂದು ಕಣ್ಣೀರಿಟ್ಟರು ರಾಕೇಶ್‌ನ ಅಪ್ಪ. ರಾಕೇಶ್, ಬಿಹಾರದ ಕೈಮೂರಿನ ಬದ್ಧಾ ಎಂಬ ಸಣ್ಣ ಹಳ್ಳಿಯವ. 5ಮಕ್ಕಳಲ್ಲಿ ನಾಲ್ಕನೆಯ ಮಗ. ಮನೆಯಲ್ಲಿ ದುಡಿಯುತ್ತಿರುವವನೂ ಇವನೇ. ಸಣ್ಣ ವಯಸ್ಸಿನಿಂದಲೂ ಮೈಲಿಗಟ್ಟಲೆ ಓಡುತ್ತಿದ್ದ. ಅವನ ತಮ್ಮ ಭಜರಂಗಿ ಸಿಂಗ್ ಯಾಕೆ ಹಿಂಗ್ ಓಡ್ತೀಯಾ ಎಂದು ಹೇಳಿದರೆ, ನಾನು ದೇಶಕ್ಕೆ ಏನಾದ್ರೂ ಸೇವೆ ಸಲ್ಲಿಸಬೇಕು.

ಹಿಂಗಾದ್ರೂ ಮಾಡಬೇಕು ಎನ್ನುತ್ತಿದ್ದನಂತೆ. 2008ರಲ್ಲಿ ರಾಕೇಶ್ ಸೇನೆಗೆ ಸೇರಿ 2012ರಲ್ಲಿ ಮದುವೆಯಾಗಿದ್ದ. ಇತ್ತೀಚೆಗಷ್ಟೇ ಹೆಂಡತಿ ಖಷ್ವಾಹಾ ಮತ್ತು ಮಗ ಹರ್ಶಿತ್ ಇಬ್ಬರೂ ಅಸ್ಸಾಮ್‌ಗೆ ಟೂರ್ ಹೊಗಿ ಫೋಟೊಗೆ ಪೋಸ್ ಕೊಟ್ಟಿದ್ದನ್ನು ಹಿಡಿದು ಹೆಂಡತಿ, ಬಂದವರಿಗೆಲ್ಲ ತೋರಿಸಿ ಕಣ್ಣೀರಿಡುತ್ತಿದ್ದಾಳೆ.

ಸಿಪಾಯಿ ಹರಿಂದರ್ ಯಾದವ್, 26ವರ್ಷ

ಘಾಝಿಪುರದ ಗಯೀನ್ ದೇವ್ಪುರದ ಹರಿಂದರ್ ಬಗ್ಗೆ ಹೇಳುವುದಕ್ಕೆ ಸಾಕಷ್ಟಿದೆ. ಸಾಮಾನ್ಯವಾಗಿ 26ವರ್ಷದವರ ಬುದ್ಧಿ ಹೇಗೆಂದರೆ, ತಮಗೆ ಹಣ ಬಂದರೆ ಸಾಕು ಆರಾಮಾಗಿ ಇದ್ದುಬಿಡುವುದೇ ಹೆಚ್ಚು. ಹರಿಂದರ್ ಕುಟುಂಬ ತುಂಬ ದೊಡ್ಡದು. ಅವನ ಹೆಂಡತಿ, ಅಕ್ಕ, ಅಣ್ಣ, ತಮ್ಮ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜ ಎಲ್ಲರೂ ಇದ್ದಾರೆ.

ಮನೆಯಲ್ಲಿ ಕಷ್ಟವಿದೆ ಎಂದು ಗೊತ್ತಿದ್ದರೂ ಎಲ್ಲರೂ ಒಟ್ಟಿಗೇ ಇರಬೇಕು ಎಂದು ಬಹಳ ಶ್ರಮ, ಕಾಳಜಿ ವಹಿಸುತ್ತಿದ್ದ. ಕುಟುಂಬದಲ್ಲಿ ಇವನೊಬ್ಬನೇ ಸರಕಾರಿ ಕೆಲಸದಲ್ಲಿರುವುದು. ತನ್ನ ಎಟಿಎಂ ಕಾರ್ಡನ್ನೇ ತಮ್ಮನಿಗೆ ಕೊಟ್ಟು ಹೋಗಿದ್ದ. ಒಟ್ಟಾರೆ 18 ಮಂದಿಯ ಜವಾಬ್ದಾರಿಯನ್ನು ಈ 26ವರ್ಷದ ಹುಡುಗನೇ ಹೊಂದಿದ್ದ ಎಂದರೆ ನಂಬುವ ಮಾತಾ? ನಂಬಲೇ ಬೇಕು. ಇಷ್ಟಾಗ್ಯೂ ಸಾಯುವ ಮೂರು ದಿನದ ಹಿಂದೆ ಮದ್ಯಾಹ್ನ 1ಗಂಟೆಗೆ ಮನೆಗೆ ಕರೆ ಮಾಡಿ ‘ಮನೆಯವರೆಲ್ಲ ಹೇಗಿದ್ದಾರೆ, ನಾನು ಈಗ ಹೋಗುತ್ತಿದ್ದೇನೆ ಸ್ವಲ್ಪ ದಿನ ಕರೆ ಮಾಡುವುದಕ್ಕಾಗುವುದಿಲ್ಲ. ಸೆಪ್ಟೆಂಬರ್ 22ಕ್ಕೆ ಒಮ್ಮೆ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ, ಹಣ ಬಂದಿರುತ್ತದೆ.’ ಎಂದು ಹೇಳಿ ಹೋಗಿದ್ದ.

ಆದರೆ ಭಾನುವಾರ ಕುಟುಂಬಕ್ಕೆ ಬಂದ ಕರೆ, ಹರಿಂದರ್ ಸಾವಿನ ಸುದ್ದಿಯದ್ದಾಗಿತ್ತು. ಇವನೊಬ್ಬನ ಸಾವಿನಿಂದ ಇಡೀ ಕುಟುಂಬ ಬೀದಿ ಪಾಲಾಗಿದೆ. ಆದರೆ, ಇವರ‍್ಯಾರೂ ತಮ್ಮ ಸ್ವಾರ್ಥವನ್ನ ಯೋಚಿಸದೇ, ದೇಶಕ್ಕಾಗಿ ಪ್ರಾಣತ್ಯಾಗಿ ಮಾಡಿದವನ ಸಾವಿಗೆ ನಾವು ಅಳುವುದಿಲ್ಲ. ಖುಷಿಯಿಂದಲೇ ಕಳಿಸಿಕೊಡುತ್ತೇವೆ ಎನ್ನುತ್ತಿದ್ದಾರೆ. ಹರಿಂದರ್ 2007ರಲ್ಲಿ ಸೇನೆ ಸೇರಿ, 2011ಕ್ಕೆ ಮದುವೆಯಾಗಿದ್ದ. ಇದಲ್ಲದೇ ತನ್ನ ತಮ್ಮ ನಾಗೇಂದ್ರನನ್ನೂ ಸೇನೆಗೆ ಸೇರುವಂತೆ ಒತ್ತಾಯ ಮಾಡಿ, ನಾಲ್ಕು ಬಾರಿ ದೈಹಿಕ ಪರೀಕ್ಷೆಯಲ್ಲೂ ಪಾಲ್ಗೊಳ್ಳುವಂತೆ ಮಾಡಿದ್ದ.

ಸಿಪಾಯಿ ನೈಮನ್ ಕುಜುರ್, 30ವರ್ಷ

ಒಂದೇ ಒಂದು ದಿನದ ಹಿಂದೆ ನೈಮನ್ ತನ್ನ ಪತ್ನಿಗೆ ಕರೆ ಮಾಡಿ – ‘ನೀನು ನನ್ನ ಬಗ್ಗೆ ಯವಾಗಲೂ ಯೋಚನೆ ಮಾಡುವು ದನ್ನು ಬಿಡು. ಮೊದಲು ಮಗನನ್ನು ಚೆನ್ನಾಗಿ ಬೆಳೆಸುವುದರ ಬಗ್ಗೆ ಚಿಂತಿಸು. ನಾನು ಹೇಗೋ ಇರ್ತೀನಿ ಬಿಡು’ ಎಂದಿದ್ದ. ಈ ಯೋಧನಿಗೆ ತಾನು ಸಾಯುವುದು ಮೊದಲೇ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಒಂದೇ ದಿನಕ್ಕೆ ಉರಿ ಮೇಲೆ ದಾಳಿಯಾಯಿತು. ಹುತಾತ್ಮನಾಗೇ ಬಿಟ್ಟ. ಹುಟ್ಟೂರು ಜಾರ್ಖಂಡ್‌ನ ಗುಮ್ಲಾದ ಚೈನ್ಪುರ. ಗಂಡನ ಸಾವಿನ ನಂತರ ಅಳುತ್ತಾ ಕೂರಲಿಲ್ಲ ಹೆಂಡತಿ ಬೀನಾ. ಬದಲಿಗೆ ‘ನಾನೂ ಸೈನ್ಯಕ್ಕೆ ಸೇರಲು ತಯಾರಾಗಿದ್ದೇನೆ.

ಸೇರಿ, ನನ್ನ ಗಂಡನ ಸಾವಿಗೆ ಯಾರು ಕಾರಣರಾಗಿದ್ದರೋ ಅವರನ್ನು ಹತ್ಯೆಗೈದು ಸೇಡು ತೀರಿಸಿಕೊಳ್ಳುತ್ತೇನೆ’ ಎಂದಳು. ಒಬ್ಬ ಹೆಣ್ಣು ಗನ್ ಹಿಡಿದು ಗಡಿಯಲ್ಲಿ ನಿಲ್ಲುತ್ತೇನೆ ಎನ್ನುವಾಗ ಇದನ್ನು ನೋಡಿಯಾದರೂ ಸರಕಾರ ಉಗ್ರಗಾಮಿಗಳನ್ನು ಸುಮ್ಮನೆ ಬಿಡಬೇಕೆ? 2013ರಲ್ಲಿ ನೈಮನ್‌ಗೆ ಮದುವೆಯಾಗಿತ್ತು. ಸರಿಯಾಗಿ ಹೆಂಡತಿಯ ಜತೆ ಕಾಲವೇ ಕಳೆದಿರಲಿಲ್ಲ ಈ ಮನುಷ್ಯ. ಈ ಬಾರಿ ಹತ್ತಾರು ಕನಸುಗಳನ್ನು ಹೊತ್ತು ಜುಲೈ ತಿಂಗಳಲ್ಲಿ ಬಂದಾಗ ಆಗಸ್ಟ್ ಮಧ್ಯದಲ್ಲಿ ಉನ್ನತ ಅಧಿಕಾರಿಗಳು ಕರೆದರು ಎಂದು ಹೊರಟರು.

ಹೆಂಡತಿ ಅಂದು ಗಂಡನನ್ನು ಖುಷಿ ಯಿಂದ ಕಳುಹಿಸಿ ಕೊಟ್ಟಿರಲ್ಲಿಲ್ಲ. ಗಂಡ ಪುನಃ ಬರುತ್ತೇನೆ ಎಂದು ಭಾಷೆ ಕೊಡುವ ತನಕ ಹೆಂಡತಿ ನಗಲೇ ಇಲ್ಲ. ಸಮಾಧಾನ ಮಾಡಿ ಹೋಗು ವಷ್ಟರಲ್ಲಿ ನೈಮನ್‌ಗೆ ಸಾಕುಸಾಕಾಗಿತ್ತು. ಹೆಂಡತಿಗೆ ಕೊಟ್ಟ ಮಾತಿನಂತೆ ವಾಪಸ್ ಬಂದರು. ಸಂಸಾರ ಮಾಡಕ್ಕಲ್ಲ… ಶವ ಸಂಸ್ಕಾರ ಮಾಡಿಸಿಕೊಳ್ಳಲು!

ಬಿಸ್ವಜಿತ್ ಘೊರಾಯ್, 22ವರ್ಷ

ಹುತಾತ್ಮರಿಗೆಂದೂ ಸಾವಿಲ್ಲ… ನನ್ನ ಮಗ ನನ್ನು ಕಳೆದುಕೊಂಡ ನೋವಿದೆ. ನಾವೆಲ್ಲ ಇನ್ನು ಮುಂದೆ ಹೇಗಿರು ತ್ತೇವೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ನನ್ನ ಮಗ ಸುಮ್ಮನೆ ಸತ್ತಿಲ್ಲ. ಒಂದು ಮಹತ್ಕಾರ ಣಕ್ಕಾಗಿ ಸತ್ತಿದ್ದಾನೆ. ದೇಶಕ್ಕಾಗಿ ಸತ್ತಿದ್ದಾನೆ… ಎಲ್ಲ ಬಿಟ್ಟಾಕಿ, ತನ್ನ ಮಗನಿಗೇ ಸಲ್ಯೂಟ್ ಮಾಡುವ ಅವಕಾಶ ಯಾವ ಅಪ್ಪನಿಗೆ ಸಿಗುತ್ತೆ ಸಾರ್? ಅವನ -ಟೊ ಇಟ್ಟು ನಮಸ್ಕಾರ್ ಮಾಡುವ ಭಾವ ಯಾವ ಅಪ್ಪನಿಗೆ ಸಿಗತ್ತೆ ಸಾರ್?… ನಾನೇ ಪುಣ್ಯವಂತ… ಮಗನೇ ಸಂತೋಷದಿಂದ ಹೋಗಿ ಬಾರೋ… ನಾನು ಅಳುವುದಿಲ್ಲ’ ಎನ್ನುತ್ತಿದ್ದಂತೆ ಬಿಸ್ವಜಿತನ ಅಪ್ಪನ ಕಣ್ಣಲ್ಲಿ ನೀರು ಹರಿದೇ ಬಿಟ್ಟಿತು.

ಏನೋ ಮಾತು ಹೇಳಬಹುದು, ಆದರೆ ಮನಸ್ಸು ಕೇಳುತ್ತದೆಯೇ? ತನ್ನ ಮಗನ ಹೆಣವನ್ನು ನೋಡುವ ಕರ್ಮ ಯಾವ ತಂದೆಗೆ ಬೇಕು ಎಂಬುದಿರುವುದಿಲ್ಲವೇ? ಬಂಗಾಳದ ಗಂಗಾಸಾಗರದ ನಿವಾಸಿ ಬಿಸ್ವಜಿತ್ ಸೈನ್ಯಕ್ಕೆ ಸೇರಿ ಕೇವಲ 26 ತಿಂಗಳಾಗಿತ್ತಷ್ಟೇ. ಬಿಹಾರದಲ್ಲಿದ್ದು ನಂತರ ಉರಿಗೆ ವರ್ಗಾವಣೆಗೊಂಡು 1 ತಿಂಗಳು ರಜೆಯ ಮೇಲೆ ಮನೆಗೆ ಬಂದು, ಸೇನೆಯಲ್ಲಿ ಏನೇನಿದೆ, ನಾನು ಹೆಂಗಿದ್ದೆ, ಏನು ನಡೆಯುತ್ತದೆ ಎಂದೆಲ್ಲ ಹೇಳು ತ್ತಿದ್ದ. ಉರಿಯ ಬಗ್ಗೆ ಮನೆಯವರಿಗೆ ಹೇಳಿದಾಗ ಅವರೂ ಕೊಂಚ ಗೊಂದಲದಲ್ಲಿದ್ದರು, ಹೆದರಿದ್ದರು.

ಆಗ ಮಗ ಹೇಳಿದ್ದು ಒಂದೇ ಮಾತು ‘ನೋಡಿ ನಾನು ದೇಶಕ್ಕಾಗಿ ಸೈನ್ಯಕ್ಕೆ ಸೇರಿದ್ದೇನೆ. ಎಲ್ಲೇ ಹಾಕಿದರೂ ಹೋಗುತ್ತೇನೆ. ನೀವು ನನ್ನನ್ನು ಮರೆತುಬಿಡಿ’ ಎಂದಿದ್ದ.

ನಾಯಕ್ ಸುನೀಲ್ ಕುಮಾರ್ ವಿದ್ಯಾರ್ಥಿ, 40ವರ್ಷ

ಬಿಹಾರದ ಗಯಾದವನು. ಬಹಳ ದಿನಗಳು ಕಳೆದಿರಲಿಲ್ಲ. ಎರಡು ತಿಂಗಳ ಹಿಂದಷ್ಟೇ ಬಂದಾಗ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಒಂದು ಮಾತು ಕೊಟ್ಟಿದ್ದ ‘ಮುಂದಿನ ಸಲ ದಸರಾ ರಜೆಗೆ ಬಂದಾಗ ನಮ್ಮ ಮನೆಯನ್ನು ನವೀಕರಿಸುತ್ತೇನೆ… ಅಲ್ಲಿ ತನಕ ಕಾಯಿರಿ’ ಎಂದು! ಆದರೆ ದಸರಾಕ್ಕಿಂತಲೂ ಮುಂಚೆಯೇ ಬಂದು, ಹಬ್ಬವೂ ಮಾಡದಿರುವ ಹಾಗೆ ಮಾಡುತ್ತಾನೆ ಎಂದು ಖಂಡಿತ ಕುಟುಂಬಕ್ಕೆ ಗೊತ್ತಿರಲಿಕ್ಕಿಲ್ಲ. ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ಹೋದ ಅವರ ಶ್ರಮ ಹಾಗೇ ನೀರಿನಲ್ಲಿ ಕೊಚ್ಚಿ ಹೋಗಲು ನಾವು ಬಿಡುವುದಿಲ್ಲ. ಕೇಂದ್ರೆ ಸರಕಾರ ಸಮರ್ಥ ಉತ್ತರವನ್ನು ಕೊಡಲೇಬೇಕು’ ಎಂದು ಅವರ ಪತ್ನಿ ಹೇಳುವಾಗಿನ ಆಕ್ರೋಶ, ಸುನೀಲ್ ಮನೆಯಲ್ಲಿ ಅವರಿಗೆ ಕೊಟ್ಟ ಸಂಸ್ಕೃತಿ ಹಾಗೂ ಅವರು ಬೆಳೆಸಿಕೊಂಡ ದೇಶಭಕ್ತಿಯನ್ನು ತೋರುತ್ತುದೆ.

ಹವಾಲ್ದಾರ್ ಅಶೋಕ್ ಕುಮಾರ್ ಸಿಂಗ್, 44 ವರ್ಷ

ಕುಟುಂಬ ಕಳೆದು ಕೊಂಡ ಎರಡನೇ ಮಗ ಅಶೋಕ್. 1986ರಲ್ಲಿ ಜಗನಾರಾಯಣ್‌ರ ಜೇಷ್ಠ ಪುತ್ರ ಕಮ್ತಾ ಸಿಂಗ್ ಬಾಂಬ್ ಬ್ಲಾಸ್ಟನಲ್ಲಿ ಹುತಾತ್ಮನಾಗಿದ್ದ. ಇವ ನಿಂದ ಪ್ರೇರೇಪಣೆ ಪಡೆದ ಅಶೋಕ್ ತಾನೂ ಸೇನೆ ಯನ್ನು ಸೇರುತ್ತೇನೆ ಎಂದು ಹಠ ಹಿಡಿದು 1992ರಲ್ಲಿ ಅದನ್ನು ಸಾಧಿಸಿದ. ಇವರ ಕುಟುಂಬದ ತುಂಬಾ ಸೇನೆಯಲ್ಲಿರುವವರೇ. ಅಶೋಕ್‌ರ ಮಗ ವಿಕಾಸ್ ಸಿಂಗ್ ದಾನಾಪುರ್ ಕಂಟೋನ್ಮೆಂಟ್‌ನಲ್ಲಿ ಸಿಪಾಯಿ ಆಗಿ ಇತ್ತೀಚೆಗಷ್ಟೇ ಸೇರಿದ್ದಾನೆ. ಅಶೋಕ್‌ರ ಅಜ್ಜ ರಾಜ್ಗೀರ್ ಸಿಂಗ್ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರೂ ಸೇನೆಯಲ್ಲಿ ಸೇವೆ ಸಲ್ಲಿಸಿದವರು.

ಇವರ ಕುಟುಂಬದಲ್ಲೇ ದೇಶಪ್ರೇಮದ ರಕ್ತ ಹೇಗೆ ಕುದಿಯುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಅಶೋಕ್‌ರ ಅಪ್ಪ ಜಗನಾರಾಯಣ್ ಸಿಂಗ್. ಮಗನ ಹೆಣ ಮನೆಯ ಮುಂದೆ ಬಂದಾಗ ಈ 78ರ ಮನುಷ್ಯ ಅಳಲಿಲ್ಲ ಬದಲಿಗೆ ಹೇಳಿದ್ದು ಇದನ್ನ – ‘ನಾನೇನು ಮುದುಕ ಅಲ್ಲ, ತೃಣ ಸಮಾನವಾದ ಪಾಕಿಸ್ತಾನವನ್ನು ಎದುರಿಸುಷ್ಟು ತಾಕತ್ತು ಇನ್ನೂ ನನಗಿದೆ. ನಾನು ಸೇನೆಗೆ ಸೇರಿ ನನ್ನ ಮಗನ ಸಾವಿಗೆ ಕಾರಣರಾದ ಉಗ್ರರನ್ನು ಸದೆಬಡಿಯುತ್ತೇನೆ. ಉಗ್ರರಿಗೆ ಗನ್ನಿನಿಂದ ಮಾತ್ರ ಉತ್ತರ ಕೊಡಲು ಸಾಧ್ಯ’. ಇದೇ ರಕ್ತ ಅಶೋಕ್‌ರಲ್ಲಿರುವುದು. ಉಗ್ರರೊಂದಿಗೆ ಕಾದಾಟ ನಡೆಸುತ್ತಿರುವಾಗ ಹಿಂದಿನಿಂದ ಬಂದ ಗುಂಡು ಕತ್ತನ್ನು ಸೀಳಿತ್ತು. ಜುಲೈ 14ರಿಂದ 24ರವರಗೆ ಮನೆಗೆ ಬಂದಾಗ ಸೇನೆ ಎಂದರೆ ಹೇಗಿರುತ್ತದೆ, ಈಗ ಉರಿಯ ವಾತಾವರಣ ಹೇಗಿದೆ ಎಂದೆಲ್ಲ ಹೇಳುತ್ತಿದ್ದರು. ‘ಕೇಂದ್ರ ಸರಕಾರ ಏನು ಮಾಡುತ್ತಿದೆ? ಇನ್ನು ಎಷ್ಟು ಜನ ಸೈನಿಕರು ಪ್ರಾಣ ಕೊಡಬೇಕು? ಒಬ್ಬರನ್ನು ಕೊಂದರೆ ಹತ್ತು ಜನರನ್ನು ಕೊಲ್ಲಬೇಕು ಎನ್ನುವ ಇವರ ನಿಯಮ ಎಲ್ಲಿ ಹೋಯ್ತು?’ ಎಂದಿದ್ದಾರೆ ಜಗನಾರಾಯಣ್ ಸಿಂಗ್. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ನೀಡಿದ ಪ್ರಶ್ನೆಗೆ, ಒಬ್ಬ ಪತ್ರಕರ್ತನೂ ತುಟಿ ಪಿಟಿಕ್ ಎನ್ನಲಿಲ್ಲ. ಏಕೆಂದರೆ, ಕಳೆದುಕೊಂಡಿರುವುದು ವಸ್ತುವನ್ನಲ್ಲ, ವಜ್ರವನ್ನು!

ಸಿಪಾಯಿ ರಾಜೇಶ್ ಕುಮಾರ್ ಸಿಂಗ್, 33 ವರ್ಷ

ಇಪ್ಪತ್ತು ದಿನಗಳ ಹಿಂದಷ್ಟೇ ನಮ್ಮ ಮನೆಗೆ ಬಂದಾಗ ನಮ್ಮೆಲ್ಲರ ಜತೆ ಮಾತಾಡಿ ಅವನಿಗೆ ಕಾಶ್ಮೀರದಲ್ಲಿ ಪೋಸ್ಟಿಂಗ್ ಆಗಿದೆ ಎಂದಿದ್ದ. ಅಲ್ಲಿ ವಾತಾವರಣ ಹೇಗಿದೆ ಎಂದು ಹೇಳುತ್ತೇನೆ ಎಂದು ಹೇಳಿ ಹೋಗಿದ್ದ. ಆದರೆ, ಅವನೇ ಮನೆಗೆ ಹೆಣವಾಗಿ ಬರುತ್ತಾನೆ ಎಂದು ಯಾರಿಗೆ ಗೊತ್ತಿತ್ತು?’ ರಾಜೇಶ್‌ರ ತಮ್ಮ ಉಮೇಂದ್ರ ಅಣ್ಣನ ಹೆಣ ಮನೆಗೆ ಬಂದಾಗ ಹೇಳಿದ ಮಾತಿದು. ಉತ್ತರಪ್ರದೇಶದ ಜೌನ್‌ಪುರದ ಭಕುರಾದಲ್ಲಿದ್ದಾರೆ. ರಾಜೇಶ್‌ರದ್ದು ಬಡ ಕುಟುಂಬ. ಜೀವನ ನಡೆಸುವುದಕ್ಕಾಗಿ ಇಬ್ಬರು ಮಕ್ಕಳು ಲಕನೌನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಡತನದ ನಡುವೆಯೂ ರಾಜೇಶ್ ಆಯ್ಕೆ ಮಾಡಿಕೊಂಡಿದ್ದು ಸೇನೆಯನ್ನು.

ಒಬ್ಬ ಯೋಧನಿಗೆ ಇರಬೇಕಾದ ದೃಢ ನಿರ್ಧಾರ ಎಂದರೆ ಇದು. ರಾಜೇಶ್ ಮದುವೆಯಾದ ಮೇಲೆ ಪತ್ನಿ ಜೂಲಿ ಮತ್ತು ಮಗ ರಿಶಾಂತ್ ಜತೆ ವಾರಾಣಸಿಯಲ್ಲಿದ್ದರು. ರಾಜೇಶ್ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಅಖಿಲೇಶ್ ಯಾದವ್ ಸರಕಾರ ಯೋಧನ ಕುಟುಂಬಕ್ಕೆ 20ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ.

ಸಿಪಾಯಿ ಗಣೇಶ್ ಶಂಕರ್, 34ವರ್ಷ

ಸೋಮವಾರ ಬೆಳಗ್ಗೆ ಗಣೇಶ್ ಸಾವಿನ ಸುದ್ದಿ ಅವರ ಮನೆಯವರಿಗೆ ಬಂದಾಗ ಅವರು, ಗಣೇಶನ ತಂಗಿ ಇಂದ್ರಾವತಿಯ ಮದುವೆ ಮಾತುಕತೆ ಮಾಡುತ್ತಿದ್ದರು. ಅಷ್ಟು ಹೊತ್ತಿಗೇ ಬಂದಿದ್ದು ಅಣ್ಣನ ಸಾವಿನ ಸುದ್ದಿ.ಉತ್ತರ ಪ್ರದೇಶದ ಸಂತ ಕಬೀರ ನಗರದ ಗೂರಪಳ್ಳಿಯ ಗಣೇಶ್ ತಂಗಿಯ ಮದುವೆಯನ್ನು ಗೋರಖ್‌ಪುರದಲ್ಲಿ ಮಾಡಲು ಮತ್ತು ಏನೇನೆಲ್ಲ ಇರಬೇಕು ಎಂದು ಮಾತುಕತೆಗೆ ಮಾಡುತ್ತಿದ್ದರು.

ಹಳ್ಳಿಯವರು ಬಂದು ಸಾವಿನ ಸುದ್ದಿ ತಿಳಿಸಿದರು. ಮಾಧ್ಯಮದವರು ಮನೆಗೆ ಬಂದ ನಂತರವೇ ಸಾವಿನ ಸುದ್ದಿ ಖಚಿತವಾಗಿದ್ದು. ಕೇವಲ ಐದು ದಿನಗಳ ಹಿಂದಷ್ಟೇ ಗಣೇಶ್‌ಗೆ ಫೋನ್ ಮಾಡಿ ಮದುವೆಯ ವಿಷಯ ತಿಳಿಸಿದ್ದರು. ಅಕ್ಟೋಬರ್‌ನಲ್ಲಿ ಮದುವೆಗೆ ಬರುವುದಾಗ ಆಣೆಯೆಲ್ಲ ಮಾಡಿಸಿಕೊಂಡಿದ್ದರು. 10 ದಿನ ಮುಂಚೆಯೇ ಬರುತ್ತೇನೆಂದು ಆಣೆ ಮಾಡಿದ್ದ. ಬಂದಿದ್ದು ಹೆಣವಾಗಿ. ಮಗ ಬಂದಿದ್ದಕ್ಕೆ ಖುಷಿ ಪಡುವುದೋ? ಹೆಣ ನೋಡಿ ಅಳುವುದೋ? ಇಡೀ ಕುಟುಂಬದಲ್ಲಿ ದುಡಿಯುತ್ತಿದ್ದವನು ಗಣೇಶ್ ಮಾತ್ರ. ಈಗ ಕುಟುಂಬ ಬೀದಿ ಪಾಲು. ಹೆಂಡತಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ. 2003ರಲ್ಲಿ ಸೈನ್ಯಕ್ಕೆ ಸೇರಿದ ಗಣೇಶ್ ಆಗಸ್ಟ್ 22ರಂದಷ್ಟೇ ಉರಿಯಲ್ಲಿ ನಿಯೋಜಿತರಾಗಿದ್ದರು.

ಲ್ಯಾ.ನಾ ಆರ್.ಕೆ. ಯಾದವ್,

ಇವರ ಮನೆಯ ಸ್ಥಿತಿ ಹೇಗಿದೆಯೆಂದರೆ ಹೆಂಡತಿ 8 ತಿಂಗಳ ಗರ್ಭಿಣಿ,ಅಮ್ಮ ಹೃದ್ರೋಗಿ. ಇನ್ನು ಇವನ ತಮ್ಮ ರೈತ. ರಾಜೇಶ್ ಹುತಾತ್ಮನಾದ ವಿಚಾರ ಮೊದಲು ತಮ್ಮ ವಿಕೇಶ್ ಯಾದವ್‌ಗೆ ತಿಳಿಯಿತು. ಈ ವಿಚಾರ ಮನೆ ಯಲ್ಲಿರುವ ಇಬ್ಬರು ಹೆಂಗಸರಿಗೆ ತಿಳಿದರೆ ಅವರನ್ನೂ ಕಳೆದುಕೊಳ್ಳುವುದ ಖಚಿತ ಎಂದು, ಅವರಿಗೆ ತಿಳಿಯ ದಂತೆ ಮಾಡಬೇಕೆಂದು ಅವರಿಗೆ ವಿಷಯ ತಲುಪ ಬಹುದಾದ ಎಲ್ಲ ಮಾರ್ಗವನ್ನು ವಿಕೇಶ್ ಮತ್ತು ಊರಿನ ಜನರೇ ಮುಚ್ಚಿಹಾಕಿದರು. ಮಾಧ್ಯಮದವರು ಬಾರದಿರಲಿ ಎಂದು ಒಂದು ಕಿಮೀ ದೂರದಲ್ಲೇ ನಿರ್ಬಂಧ ಹೇರಲಾಗಿತ್ತು.

ಆದರೂ ಅವರೆಲ್ಲ ಬೇರೆ ದಾರಿಯಿಂದ ಬಂದು ಮನೆಗೆ ವಿಷಯ ತಿಳಿಸಿ ಮಾತನಾಡಿಸಲು ಮುಂದಾದರು. ವಿಷಯ ತಿಳಿಯುತ್ತಿದ್ದಂತೆ ಅವನ ಹೆಂಡತಿ ಕುಸಿದು ಬಿದ್ದಳು. ವಿಕೇಶ್ ಅಷ್ಟೊತ್ತಿಗಾಗಲೇ ವೈದ್ಯ ರನ್ನು ಕರೆತಂದಿದ್ದ. ರಾಜೇಶ್ 18 ವರ್ಷಗಳಿಂದ ಸೇನೆಯಲ್ಲಿದ್ದರು. ಆದರೆ ಕಾಶ್ಮೀರಕ್ಕೆ ಕೇವಲ 20 ದಿನಗಳ ಹಿಂದಷ್ಟೇ ಹೋಗಿದ್ದರು.

ಸಿಪಾಯಿ ಗಂಗಾಧರ್ ದಾಲಾಯ್, 23ವರ್ಷ

ಇನ್ನೂ ಕಾಲೇಜಿನ ಮೊದಲ ವರ್ಷದಲ್ಲಿದ್ದ… ಎಲ್ಲರಿಗೂ ಒಂದೊಂದು ಶೋಕಿಯಾದರೆ ಬಂಗಾಳದ ಹೌರಾದ ಜಮುನಾ ಬಲಾಯ್ ಹಳ್ಳಿಯ ಗಂಗಾಧರ್‌ಗೆ ಮತ್ತೊಂದು ಶೋಕಿ. ಸೈನ್ಯಕ್ಕೆ ಸೇರುವುದು. ಸ್ನೇಹಿತರು ಅವನನ್ನು ಎಷ್ಟೇ ಮನಪರಿವರ್ತಿಸಲೂ ಹುಡುಗ ಭಾರತವನ್ನು ಬಿಟ್ಟು ಯಾವ ಮೋಹಕ್ಕೂ ಒಳಗಾಗಲಿಲ್ಲ. ‘ಅವನು ಹುಚ್ಚಾ ಸಾರ್… ಸ್ಪೋರ್ಟ್ಸ್ ಕೋಟಾದ ಮೇಲೆ ಸೇನೆಯಲ್ಲಿ ಚಾನ್ಸ್ ಸಿಕ್ಕಿತು. ಅಷ್ಟಕ್ಕೇ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಜಿಗಿದೇ ಬಿಟ್ಟ.

ಸೇನೆಗೆ ಹೋಗುವಾಗ ಆತನಿಗೆ ನಮ್ಮನ್ನು ಮತ್ತು ಮನೆಯವರನ್ನು ಕಳೆದುಕೊಳ್ಲುತ್ತಿದ್ದೇನಲ್ಲಾ ಎಂಬ ಒಂದು ಸಣ್ಣ ಬೇಜಾರೂ ಇರಲಿಲ್ಲ. ಟ್ರಿಪ್‌ಗೆ ಹೋಗುವ ಹಾಗೇ ಟಾಟಾ ಮಾಡ್ತಾ, ಖುಷಿಯಾಗಿ ಹೋಗಿದ್ದು ಇನ್ನೂ ನೆನಪಿದೆ…. ಈ ನೋಡಿ ಸಾರ್ ಹೆಂಗ್ ಬಂದಿದ್ದಾನೆ ಅಂತ…?!’ ಪತ್ರಕರ್ತ ಮೌನವಾಗಿದ್ದ…. ಅವನೂ ಗದ್ಗದಿತನಾಗಿದ್ದ.ಇಂಥ ಯೋಧರ ಬಗ್ಗೆ ಹೇಸಿಗೆಯಂಥ ಮಾತಾಡುತ್ತಾ ಕಾಲ ಕಳೆಯುವ ಮಂದಿಗೆ ಇವರ ನೋವುಗಳ ಬಗ್ಗೆ ನಯಾ ಪೈಸೆ ಗೊತ್ತಿಲ್ಲ. ಲಂಚ ಕೊಟ್ಟು ಸೈನ್ಯ ಸೇರಿ ಪ್ರಾಣ ಬಿಡುವ ದರ್ದು ಯಾವನಿಗಿದೆ? ಬಡತನದಿಂದ ಸೈನ್ಯಕ್ಕೆ ಸೇರುತ್ತಾರೆ ಎನ್ನುವ ಎಷ್ಟು ಮಂದಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳಿಸಿದ್ದಾರೆ? ಇದ್ಯಾವುದಕ್ಕೂ ಉತ್ತರವಿಲ್ಲ.

ಕಾರಣ ಗೊತ್ತಾ? ಮನೆಯಲ್ಲಿ, ಮಿಣ ಮಿಣ ಲೈಟಿನ ಮುಂದೆ ಮೇಕಪ್ ಹಾಕಿ ಟಿವಿ ಮುಂದೆ ಮಾತಾಡುವುದು ಸುಲಭ, ಸಾರ್ವಜನಿಕ ಸಭೆಯಲ್ಲಿ ಮಾತಾಡಿ ಚಪ್ಪಾಳೆ ಗಿಟ್ಟಿಸುವುದೂ ಸುಲಭ. ಆದರೆ, ಎದುರಿನಿಂದ ಗುಂಡು ಬರುತ್ತಿದ್ದರೂ ‘ವಂದೇ ಮಾತರಂ’ ಎಂದು ಎದೆಯೊಡ್ಡಿ ಸೆಣೆಸಾಡುವುದು ಮಾತಾಡಿದ ಹಾಗಲ್ಲ. ಭಾರತ ಮಾತೆಯ ಪುತ್ರನಿಗೆ ಮಾತ್ರ ಸಾಧ್ಯ.

ಇಂಥ ಕುಟುಂಬಗಳು ಕಷ್ಟದಲ್ಲಿರುವುದನ್ನು ನೋಡಲು ಬಹಳವೇ ದುಃಖಕರ ನಾವು ದಿನಕ್ಕೆ ಒಂದು ರುಪಾಯಾದರೂ ಕೂಡಿಟ್ಟು ವರ್ಷಕ್ಕೆ 365 ರುಪಾಯಿಯನ್ನು ಅವರಿಗೆ ಕೊಟ್ಟರೆ? ಅವರ ಕುಟುಂಬದ ಮುಖದಲ್ಲೂ ನಗೆ ಕಾಣಬಹುದಲ್ಲವಾ? ನಿಮ್ಮ ಶಕ್ತ್ಯಾನುಸಾರ ಸಹಾಯ ಮಾಡಿ. ನಿಮ್ಮ ಹಣ ನೇರವಾಗಿ ಯೋಧರ ಕುಟುಂಬಗಳಿಗೆ ಹೋಗುತ್ತದೆ.

BANK : SYNDICATE BANKBRANCH : SOUTH EXTEN-SION, NEW DELHI.A/C NAME : ARMY WELFARE FUND BATTLE CASUALTIESA/C NO : 90552010165915IFSC CODE : SYNB0009055 ಸಹಾಯ ಮಾಡಿ! 

ನಾವಂತೂ ಯೋಧರಾಗಲಿಲ್ಲ. ಅವರಿಗೆ ಸಹಾಯ ಮಾಡಿಯಾದರೂ ನಾವು ಭಾರತದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕ ಮಾಡಿಕೊಳ್ಳೋಣ.

* ಚಿರಂಜೀವಿ ಭಟ್

Leave a Reply

Copyright©2021 Chiranjeevi Bhat All Rights Reserved.
Powered by Dhyeya