ಕನ್ನಡ ಮಾತಾಡಿದ್ರೆ ದಂಡ ಹಾಕ್ತಾರೆ ದಂಡಪಿಂಡಗಳು!

‘ನಾನು ಮತ್ತೆ ನನ್ನ ಸ್ನೇಹಿತರು ಕಳೆದ ವಾರ ಪಾಂಡಿಚರಿ ಟ್ರಿಪ್ಗೆ ಹೋಗಿದ್ವಿ. ಅಲ್ಲಿ ವೆಲ್ಲೂರು ಆರ್ಟಿಒ ಚೆಕ್ ಪೋಸ್ಟಲ್ಲಿ ತೆರಿಗೆ ಕಟ್ಟಲು ಹೋದ್ವಿ. ನಾವು ಅಲ್ಲಿ ಕನ್ನಡ ಮಾತಾಡಿದ್ವಿ… ಹಾಗೆ ಮಾತಾಡಿದ್ದಕ್ಕೆ ನನಗೆ ಅಲ್ಲಿದ್ದ ಒಬ್ಬ ಅಧಿಕಾರಿಣಿಯಿಂದ ಬಂದ ಉತ್ತರ ಕೇಳಿ ತುಂಬ ಅಚ್ಚರಿ ಆಯ್ತು.. ಆಕೆ ಹೇಳಿದ್ದು: ಇದು ತಮಿಳುನಾಡು, ಈ ತಮಿಳುನಾಡಿನಲ್ಲಿ ಕನ್ನಡ ಹೇಗಯ್ಯಾ ಮಾತಾಡುತ್ತೀಯಾ?’ ಎಂದು ಕೇಳಿದರು. ಹೀಗೆ ಕನ್ನಡ ಮಾತಾಡಿದ್ದಕ್ಕೆ ತೆರಿಗೆ ಕಟ್ಟಲು ಹೋದ ನನಗೆ 1,000ರು.ದಂಡ ಹಾಕಿಯೇಬಿಟ್ಟರು. ಈಗ ನನಗೆ ನಾನು ಏನು ತಪ್ಪು ಮಾಡಿದೆ ಎಂದೇ ತಿಳಿಯುತ್ತಿಲ್ಲ? ನಾವೆಲ್ಲ ಭಾರತೀಯರಲ್ಲವಾ?’ ಹೀಗೆಂದು ಬರೆದು, ಮಂಜುನಾಥ್ ಶೆಟ್ಟಿ ಎಂಬುವವರು ಫಸ್ಬುಕ್ನಲ್ಲಿ ತಮ್ಮ ಗೋಡೆಯ ಮೇಲೆ ಹಾಕಿ, ತಮಗಾದ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ.

ಇದು ತಮಿಳುನಾಡಿನವರಿಗೆ ಅತಿ ಆಯ್ತು ಅನ್ನಿಸುವುದಿಲ್ಲವಾ? ಭಾಷೆ ಯಾರ ಅಪ್ಪಂದು? ಒಬ್ಬರು ಭಾಷೆ ಇಂಥ ಭಾಷೆ ಮಾತಾಡಿ, ಬೆಳೆಸಿ ಎಂದು ಹೇಳಬಹುದು. ರಾಜ್ಯಕ್ಕೆ ಬರುವ ಹೊರಗಿನವರಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ ಎಂದು ಒಂದು ನಗೆ ಬೀರಿ ಹೇಳಿದರೆ ಎಲ್ಲರೂ ಖುಷಿಯಾಗಿ, ಇಷ್ಟು ಚೆನ್ನಾಗಿ ಮಾತಾಡುವ ತಮಿಳಿಗರನ್ನು ನಾನೂ ಅನುಕರಿಸಬೇಕಲ್ಲವಾ ಎಂದೆನಿಸಿ ಕನಿಷ್ಠ ಪಕ್ಷ ರಾಜ್ಯದಲ್ಲಿರುವ ಅಷ್ಟು ಹೊತ್ತಾದರೂ ತಮಿಳು ಮಾತಾಡುತ್ತಾರೆ. ಭಾರತೀಯರ ಮನಸ್ಸನ್ನು ಗೆಲ್ಲುವ ಪರಿ, ಭಾರತೀಯರಿಗೆ ಒಲಿಯದೇ, ಬ್ರಿಟಿಷರ ಹಾಗೆ ಆಜ್ಞೆ ಹೊರಡಿಸಿದರೆ, ಸಿಡಿದೇಳುವವರೂ ಹೆಚ್ಚಾಗುತ್ತಾರೆ.

ಇದೇ ರೀತಿ ಒತ್ತಾಯ ಮಾಡಿದ್ದಕ್ಕೇ, ನಾನು ಭಾರತೀಯನಲ್ಲವಾ ಎಂಬ ಪ್ರಶ್ನೆ ಮೂಡಿದ್ದು. ನನ್ನ ಪ್ರಶ್ನೆಯೂ ಅದೇ. ನಾವೆಲ್ಲ ಭಾರತೀಯರಲ್ಲವಾ? ಭಾರತೀಯನಾದವನು, ಭಾರತದ ಯಾವುದೇ ರಾಜ್ಯದಲ್ಲಿ, ಯಾವುದೇ ಭಾಷೆ ಮಾತಾಡಬಹುದು. ದೇಶದಲ್ಲಿ ಮಾತನಾಡದೇ ಇರುವ ಭಾಷೆಯನ್ನು ಯಾರಾದ್ರು ಮಾತಾಡಿದರೇ, ಇಲ್ಲಿ ಯಾರೂ ತಲೆ ಬಿಸಿ ಮಾಡಿ ಕೊಳ್ಳುವವರಿಲ್ಲ.

ಆದರೆ, ಇಲ್ಲಿ ಮಂಜುನಾಥ್ ಶೆಟ್ಟಿ, ದಕ್ಷಿಣ ಭಾರತದಲ್ಲಿ ಪ್ರಮುಖ ಬಳಕೆಯಲ್ಲಿರುವ ಮೂರ್ನಾಲ್ಕು ಭಾಷೆಯಲ್ಲಿ ಒಂದಾದ ಕನ್ನಡ ಮಾತಾಡಿದ್ದಕ್ಕೆ ಬೇಕಾಬಿಟ್ಟಿ ದಂಡ ಹಾಕುವ ಮನಸ್ಥಿತಿಗೇಕೆ ತಲುಪಿದರು ತಮಿಳರು? ತಮಿಳುನಾಡಿನಲ್ಲಿ ಕನ್ನಡ ಮಾತಾಡಲು ಸಂವಿಧಾನ ಹಕ್ಕು ನೀಡಿಲ್ಲವೇ? ಸರಿ, 1000ರು.ಯನ್ನು ದಂಡ ಎಂದು ಭಾವಿಸದೇ, ತೆರಿಗೆ ಎಂದೇ ಭಾವಿಸಿದರೂ, TAMIL  NADU  MOTOR VEHICLE  TAXATION  ACT,  1974ನ ಪ್ರಕಾರ, ಯಾವುದೇ ಪ್ರಕಾರದ ಖಾಸಗಿ ವಾಹನಗಳು(ತಮಿಳು ನಾಡು ನೋಂದಣಿಯಲ್ಲದ ವಾಹನಗಳು) ತಮಿಳುನಾಡಿನೊಳಗೆ ಬಂದರೆ, ಅಲ್ಲಿ ಸ್ವಲ್ಪ ದಿನ ಉಳಿದುಕೊಂಡರೆ, ಕೆಲ ಚೆಕ್ಪೋಸ್ಟ್ ಗಳಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ.

ಅದೂ 600ರು. ಮಾತ್ರ. ಅಸಲಿಗೆ ಯಾವ ರೂಲ್ ಬುಕ್ನಲ್ಲಿ ಸಹ 1000ರು. ದಂಡ ಹಾಕುವ ಅವಕಾಶವೇ ಇಲ್ಲ. ಕನ್ನಡ ಮಾತಾಡಿದ ಒಂದೇ ಕಾರಣಕ್ಕೆ ಸಾವಿರ ರುಪಾಯಿ ದಂಡ ಹಾಕುತ್ತಾರೆಂದರೆ, ತಮಿಳುನಾಡಿನಲ್ಲಿರುವವರದ್ದು ಭಾಷಾ ಪ್ರೇಮವೋ ಅಥವಾ ಪರಭಾಷಾ ವಿರೋಧವೋ? ನಾವು ತಮಿಳುನಾಡನ್ನು ದೂರುವುದಕ್ಕಿಂತಲೂ, ತಮಿಳರೇಕೆ ಹೀಗಾದರು ಎಂದು ಕಂಡಕೊಳ್ಳಬೇಕಿದೆ. ಮೊದಲೆಲ್ಲ, ತಮಿಳುನಾಡು ಎಂದರೆ ನೆನಪಾಗುತ್ತಿದ್ದದ್ದು, ಶ್ರೀನಿವಾಸ ರಾಮಾನುಜಮ್, ಶಾಸೀಯ ಸಂಗೀತ, ಅತ್ಯಂತ ಹೆಚ್ಚು ಬುದ್ಧಿವಂತ ಅಯ್ಯಂಗಾರಿ ತಮಿಳರಿರುವ ಜಾಗ.

ಇನ್ನು ಕೆಲ ವರ್ಷಗಳ ಹಿಂದಿನವರೆಗೂ ತಮಿಳುನಾಡು ಸುದ್ದಿಯಲ್ಲಿದ್ದದ್ದು ಭಾರತದಲ್ಲಿ ಅತ್ಯಂತ ಹೆಚ್ಚು ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಪಾಸು ಮಾಡಿರುವ ರಾಜ್ಯ ಎಂದು. ಆದರೆ ಈಗ ತಮಿಳುನಾಡು ಎಂದರೆ ನೆನಪಾಗುವುದು ‘ಅಲ್ಲಿನ ತಮಿಳರು ಒಂಥರಾ ಮನುಷ್ಯರಂತೆ, ತಮಿಳು ಬಿಟ್ಟು ಬೇರೆ ಭಾಷೆಗಳು ಬಂದರೂ ಸುತರಾಂ ಅದನ್ನು ಮಾತಾಡುವುದಿಲ್ಲವಂತೆ.’, ‘ಅಲ್ಲಿ ಎಲ್ಲವೂ ಫ್ರೀ, ಎಲೆಕ್ಷನ್ ಸಮಯ ಬಂತು ಎಂದರೆ ಸಾಕು, ಮಿಕ್ಸಿ, ಟಿವಿ, ಫ್ರಿಜ್ಜು, ಅಕ್ಕಿ, ಅನ್ನ, ಸಾರು, ತಿಂಡಿ, ಎಲ್ಲವೂ ಟೈಮ್ ಟೈಮ್ಗೆ ಸಿಗುತ್ತೆ.’ ಎಂಬ ಮಾತುಗಳಷ್ಟೇ. ಒಂದು ನಾಡು, ಉಳಿಯಬೇಕಿದ್ದರೆ, ಭಾಷೆ ಬೇಕೇ ಬೇಕು ನಿಜ ಹೌದು. ಆದರೆ, ಅದನ್ನೇ ಅತಿರೇಕಕ್ಕೆ ಕೊಂಡೊಯ್ದರೆ ಅದು, ತಮಿಳುನಾಡಾಗುತ್ತದೆ.

ತಮಿಳಿಗೆ ಯಾವಾಗಲೂ ಅಂಥ ಸಾವೇನು ಬಂದಿರಲಿಲ್ಲ. ಅದು ಸುಭಿಕ್ಷವಾಗೇ ಇತ್ತು. ಇಂದಿಗೂ ಎಷ್ಟೋ ಲಿಪಿಗಳು ತಮಿಳಿನಲ್ಲಿದೆ. ತಮಿಳು ಯಾವುದೋ ಒಂದು ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಓವರ್ಟೇಕ್ ಆಗಿತ್ತು ಎಂದರೆ ಅದು ಬ್ರಿಟಿಷರ ಕಾಲದಲ್ಲಿ ಮಾತ್ರ. ಆ ಕಾಲದಲ್ಲೂ ದೊಡ್ಡ ದೊಡ್ಡ ಸಾಹಿತ್ಯಗಳು ರಚನೆಯಾಗಿ ಈಗಲೂ ಅದು ಚಾಲ್ತಿಯಲ್ಲಿವೆ. ಆ ಕಾಲದಲ್ಲಿ ಹುಟ್ಟಿದ ಭಾಷಾಪ್ರೇಮ, ಬೆಳೆಯುತ್ತಾ ಬಂದು ಈ ಸ್ಥಿತಿಗೆ ನಿಲ್ಲಲು ಅಲ್ಲಿನ ರಾಜಕಾರಣಿಗಳೂ ಕಾರಣ. ಡಿಸೆಂಬರ್ 2012ರಲ್ಲಿ ತಮಿಳುನಾಡು ಸರಕಾರ, ತನ್ನ ರಾಜ್ಯದ ಗಡಿ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಆಯ್ಕೆಯ ಭಾಷೆಯಾಗಿ ತಮಿಳು ಭಾಷೆಯನ್ನು ಹೇರಿತ್ತು ಎಂದರೆ, ತಮಿಳರು ಎಂಥ ಮನಸ್ಥಿತಿಯವರು ಎಂದು ಅರ್ಥವಾಗುತ್ತದೆ. ಆ ಗಡಿ ಭಾಗದಲ್ಲಿರುವ ಶಾಲೆಗಳು ಒಂದಲ್ಲ, ಎರಡಲ್ಲ. ಮೂವತ್ತಾರು ಪ್ರಾಥಮಿಕ ಶಾಲೆಗಳು, ಮೂರು ಹೈಸ್ಕೂಲು ಮತ್ತು 2 ಕಾಲೇಜುಗಳಿದ್ದವು.

ಈ ನಿಯಮವನ್ನು ಎಷ್ಟು ಬೇಗ ಜಾರಿಗೆ ತಂದರೆಂದರೆ, ಕೇವಲ ಒಂದು ತಿಂಗಳೊಳಗೆ ಎಲ್ಲವೂ ತಮಿಳು ಮಾಸ್ತರರನ್ನೂ ನೇಮಕ ಮಾಡಿತ್ತು. ಇದು ತಮಿಳುನಾಡಿನ ಸ್ಥಿತಿಯ ಬಗ್ಗೆ ಒಂದು ಉದಾಹರಣೆಯಷ್ಟೇ. ಇನ್ನು ಅಲ್ಲಿನ ಕನ್ನಡಿಗರು ಪಡುವ ಪಾಡಿನ ಬಗ್ಗೆ ಹೇಳುವುದಕ್ಕೆ ಹೊರಟರೆ, ದಿನವಿಡೀ ಬೇಕು. ಅಲ್ಲಿ ತಮಿಳರನ್ನು ಬಿಟ್ಟು ಬೇರೆಯವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ಅನುಭವಿಸಿದರೆ ಮಾತ್ರ ಅದರ ತೀವ್ರತೆ ತಿಳಿಯುತ್ತದೆ. ಅಲ್ಲಿ ಅಪ್ಪಿ ತಪ್ಪಿ ದೊಡ್ಡ ಸೆಲೆಬ್ರಿಟಿಗಳು, ಸಾರ್ವಜನಿಕ ವಲಯದಲ್ಲಿರುವವರೇನಾದರೂ ಅಲ್ಲಿ ಕನ್ನಡ ಮಾತಾಡಿದರೆ, ಅಲ್ಲಿ ದೊಡ್ಡ ಸುದ್ದಿಯನ್ನೇ ಮಾಡುತ್ತಾರೆ.

ಬೇರೆ ಯಾವ್ಯಾವುದೋ ನ್ಯೂಸ್ ಹಾಕಿ ಚಚ್ಚುತ್ತಿರುವವರು ಸಹ ಏಕಾಏಕಿ ಏನೋ ಬಾಂಬ್ ಬಿದ್ದ ಹಾಗೆ ಆ ನಟ ಕನ್ನಡ ಮಾತಾಡಿದ್ದನ್ನು ದೊಡ್ಡ ಹೈಲೈಟ್ ಮಾಡಿ ಹಾಕುತ್ತಾರೆ. ಇದಿಂದಲೇ ಅರ್ಧಕ್ಕರ್ಧ ಜನ ಇಲ್ಲಿ ತಿಂದುಂಡು, ಭಾಷೆ ಭಾಷೆ ಎಂದು ಅರಚುತ್ತಿರುವುದು. 2010ರಲ್ಲಿ ಒಮ್ಮೆ ಕಾಂಗ್ರೆಸ್ ಶಾಸಕ ಕೆ ಗೋಪಿನಾಥ್ ತಮಿಳುನಾಡಿನ ಸದನದಲ್ಲಿ ಕನ್ನಡದಲ್ಲಿ ಮಾತಾಡಿದ್ದರು. ಇದನ್ನೇ ಅಂದಿನ ಮಾಧ್ಯಮಗಳು ಹಾಕಿದ್ದನ್ನೇ ಹಾಕಿ ತೋರಿಸಿದ್ದರು. ಹೇಳಿ ನಾವು ಕರ್ನಾಟಕದಲ್ಲಿ ತಮಿಳರನ್ನು ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತೆ? ತಮಿಳರು ಕರ್ನಾಟಕದ ಯಾವುದೇ ಭಾಗಗಳಲ್ಲಿರಲಿ. ಅಲ್ಲಿ ನಮ್ಮ ಕನ್ನಡಿಗರು ಅವರೊಂದಿಗೆ ಅಲ್ಲಿನ ಹಾಗೇ ಬೆರೆತು ಬಿಡುತ್ತಾರೆ. ಅವನ್ನು ಎಂದಿಗೂ ಬೇರೆಯವರನ್ನಾಗಿ ಪರಿಗಣಿಸಿಯೇ ಇಲ್ಲ.

ನಾವು ಇಲ್ಲಿ ಲಕ್ಷಾಂತರ ತಮಿಳರಿಗೆ ಜಾಗ ಕೊಟ್ಟಿದ್ದೇವೆ. ಮಜಾ ಎಂದರೆ, ಬೆಂಗಳೂರಿನಲ್ಲೇ ಇರುವ ಕಲಾಸಿಪಾಳ್ಯಕ್ಕೆ ಕನ್ನಡಿಗರು ಹೋದರೆ, ತಮಿಳರ ಬಳಿ ಹೆಂಗೆಂಗೋ ಹರಸಾಹಸ ಮಾಡಿ ತಮಿಳಲ್ಲೇ ಮಾತಾಡಿ ಬರುತ್ತೇವೆ. ಯಾರಾದ್ರೂ ತಮಿಳಲ್ಲೇ ಅಡ್ರೆಸ್ ಕೇಳಿದರೆ, ತಮಿಳು ಬರದಿದ್ದರೂ ಅಕ್ಕ, ಪಕ್ಕದವರನ್ನು ಕೇಳಿ.. ರೈಟ್ ಪೋ, ಲೇಫ ಪೋ ಅನ್ನೆ, ಅದದಾ ಮೆಜೆಸ್ಟಿಕ್ ಎಂದು ಕಳಿಸುತ್ತೇವೆ. ಕನ್ನಡ ಭಾಷೆ ಭಾಷೆ ಎಂದು ಹೋರಾಟ ಮಾಡುವವನು ಸಹ ಇಲ್ಲಿ ಇತರರಿಗೆ ಸಹಾಯ ಮಾಡುವಾಗ ಬೇರೆ ಭಾಷೆಯನ್ನಾದರೂ ಮಾತಾಡಿ, ಸಹಾಯ ಮಾಡಿ ಬರುತ್ತಾನೆ.

ಎಂದು ಸಹ ಒಂದು ದಿನವೂ ತಮಿಳರಿಗಿರಲಿ, ಹಿಂದಿಯವರರಿಗಿರಲಿ, ಅವರಾಗೇ ಏರಿಕೊಂಡು ಬರುವವರೆಗೂ ಕನ್ನಡ ಮಾತಾಡಿ ಎಂದು ಹೇಳಲು ಹೋಗುವುದಿಲ್ಲ. ಕರ್ನಾಟಕದಲ್ಲಿ ಭಾಷೆಯೆಂಬುದು ನಮಗೆ ಒಬ್ಬರ ಜತೆ ಇನ್ನೊಬ್ಬರು, ಪ್ರೀತಿ, ವಿಶ್ವಾಸ, ವ್ಯವಹಾರಕ್ಕಾಗಿ ಇರುವ ಒಂದು ಮಾಧ್ಯಮವೇ ಹೊರತು, ಎಂದಿಗೂ ಅದು ಒಂದು ಅಸ, ಮಾನ ಮರ್ಯಾದೆಯ ದೊಡ್ಡ ಸಂಕೇತ ಎಂದೆನಿಸಲೇ ಇಲ್ಲ. ಬಹುಶಃ ಅದಕ್ಕೇ ಕನ್ನಡಿಗರು ಎಲ್ಲ ಕಡೆಯಲ್ಲೂ ಇರುತ್ತಾರೆ. ಧರ್ಮ ಅಫೀಮು ಎಂದ ಹಾಗೆ, ಈ ಭಾಷೆಯ ಗೀಳೂ ಒಂಥರಾ ಮಾದಕ ದ್ರವ್ಯವೇ. ಆ ಮಾದಕ ದ್ರವ್ಯಗಳು ಕೇವಲ ಔಷಧಿಯಲ್ಲಿದ್ದರೆ ಮಾತ್ರ ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತದೆ.

ಆದರೆ, ಔಷಧಿಯನ್ನು ಬಿಟ್ಟು ಅದನ್ನೇ ಹೆಚ್ಚಾಗಿ ತೆಗೆದುಕೊಂಡರೆ, ಕೊನೆಗೆ ಅದೇ ಮಾದಕ ದ್ರವ್ಯಗಳೇ ನಮ್ಮನ್ನು ಕೊನೆಯಾಗಿಸುತ್ತವೆ. ತಮಿಳರು ಇನ್ನಾದರೂ ಈ ಭಾಷೆಯ ಮೇಲಿನ ಪ್ರೀತಿಯಿಂದ ಇನ್ನೊಬ್ಬರನ್ನು ಹಿಂಸೆಗೆ ಗುರಿ ಪಡಿಸುವುದನ್ನು ನಿಲ್ಲಿಸಲಿ. ಭಾಷಾ ಪ್ರೇಮವಿರಲಿ, ಆದ್ರೆ ಇನ್ನೊಬ್ಬರನ್ನು ಅತ್ಯಾಚಾರ ಮಾಡುವುದು ಬೇಡ.

 

Leave a Reply

Copyright©2020 Chiranjeevi Bhat All Rights Reserved.
Powered by Dhyeya