ಹೆಡ್ಲಿ ಕಲಿಸಿದ ಡೆಡ್ಲಿ ಪಾಠಗಳು!

BWSVVರಾಮಾಯಣದಲ್ಲಿ ಒಂದು ಸನ್ನಿವೇಶವಿದೆ. ರಾಮ ರಾವಣನ ಮೇಲೆ ಕೊನೆಯ ಬಾಣ ಪ್ರಯೋಗ ಮಾಡಿಬಿಟ್ಟಿರುತ್ತಾನೆ. ದೈತ್ಯ ರಾವಣ ನೆಲಕ್ಕಪ್ಪಳಿಸಿದಾಗ ಸಾವು ಹತ್ತಿರ ಬಂದಿದೆ ಎಂದು ಅವನಿಗೆ ತಿಳಿದಿರುತ್ತದೆ. ರಾವಣನನ್ನು ನೋಡುತ್ತಿದ್ದ ರಾಮ, ಲಕ್ಷ್ಮಣನ ಬಳಿ ‘ನೋಡು ರಾವಣ ಇನ್ನೇನು ಸಾಯುವ ಘಳಿಗೆಯಲ್ಲಿದ್ದಾನೆ. ಎಷ್ಟೇ ಆದರೂ ಅವನು ಬ್ರಹ್ಮ ಜ್ಞಾನ ಪಡೆದಿರುವ ಬ್ರಾಹ್ಮಣ, ವಿದ್ವಾಂಸ.. ಅವನ ಬಳಿ ಎಷ್ಟು ಜ್ಞಾನವಿದೆಯೋ ಅದನ್ನೆಲ್ಲ ಸಂಪಾದಿಸಿಕೊಂಡು ಬಾ’ ಎಂದ. ಒಲ್ಲದ ಮನಸ್ಸಿನಿಂದ ಲಕ್ಷ್ಮಣ ಹೋಗಿ ಅಹಂಕಾರದಿಂದ ‘ಎಲೈ ಬ್ರಾಹ್ಮಣ, ನೀನು ಇನ್ನೇನು ಸಾಯುತ್ತಿರುವೆ, ನಿನ್ನ ಜ್ಞಾನವನ್ನು ನಮಗಾದರೂ ಕೊಟ್ಟು ಹೋಗು. ಬಳಕೆಯಲ್ಲಿರುತ್ತದೆ’ ಎಂದಾಗ ಲಕ್ಷ್ಮಣನ ಅಹಂಕಾರಕ್ಕೆ ರಾವಣ ಸಿಟ್ಟಿನಿಂದ ಮುಖ ತಿರುಗಿಸುತ್ತಾನೆ. ರಾಮ ರಾವಣನ ಬಳಿ ಹೋಗಿ, ‘ನೀನು ನನ್ನ ಹೆಂಡತಿಯನ್ನು ಅಪಹರಿಸಿದ್ದಕ್ಕಾಗಿ ನಿನ್ನನ್ನು ಕೊಲ್ಲಬೇಕಾಯಿತು. ಆದರೆ ನೀನೊಬ್ಬ ಜ್ಞಾನಿ. ನನಗೆ ನಿನ್ನಲ್ಲಿನ ಜ್ಞಾನವನ್ನು ದಯಪಾಲಿಸು’ ಎಂದಾಗ ಖುಷಿಯಿಂದ ರಾವಣ ರಾಮನಿಗೆ ಪಾಠ ಮಾಡುತ್ತಾನೆ.
ಇಂಥದ್ದೇ ಒಬ್ಬ ರಾಕ್ಷಸ ಈಗಲೂ ಇದ್ದಾನೆ. ಆತ ಡೇವಿಡ್ ಹೆಡ್ಲಿ. ಪ್ರಪಂಚದ ಯಾವುದೇ ದೇಶ ಹೆಡ್ಲಿ ಹೆಸರು ಮರೆತರೂ ಭಾರತ ಮಾತ್ರ ಮರೆಯಲಿಕ್ಕೆ ಸಾಧ್ಯವಿಲ್ಲ. ಅಂಥ ನರಕ ತೋರಿಸಿದ್ದಾನೆ ಆತ. ಹೇಮಂತ್ ಕರ್ಕರೆ, ತುಕಾರಾಮ್ ಗೋಪಾಲ್ ಓಂಬ್ಳೆ, ಸಂದೀಪ್ ಉನ್ನಿಕೃಷ್ಣನ್, ಅಶೋಕ್ ಕಾಮ್ತೆ, ವಿಜಯ್ ಸಲಾಸ್ಕರ್ ಇವರನ್ನು ಕ್ಷಣ ಮಾತ್ರದಲ್ಲಿ ನುಂಗಿದವನೀತ. ಇನ್ನೂ ನೂರಾರು ಮಾರಣ ಹೋಮವಾಗಿದೆ. ಇಂಥ ರಾಕ್ಷಸ ನಮಗೆ ಈಗ ಬಹಳವೇ ಮಾಹಿತಿ ಕೊಟ್ಟಿದ್ದಾನೆ. ಇವನನ್ನು ನಾವು ಕೇವಲ ರಾಕ್ಷಸ ಎಂದು ಪರಿಗಣಿಸದೇ ಹಲವಾರು ವಿಷಯ ತಿಳಿದುಕೊಂಡರೆ, ಸಾಕಷ್ಟು ಪಾಠ ಕಲಿಯಬಹುದು.

ಹೆಡ್ಲಿಯ ಮೊದಲನೇ ಪಾಠ: ಭಾರತದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದು. ಕಾಶ್ಮೀರದ ನ್ಯೂಸ್ ಜಾಲತಾಣ ಕೆಲ ದಿನಗಳ ಹಿಂದೆ ಒಂದು ಮಾಹಿತಿ ಪ್ರಕಟಿಸಿತ್ತು. ಮುಂಬೈನಲ್ಲಿ ಭಾರತೀಯ ಪಾಸ್‌ಪೋರ್ಟ್ ಸಿಗುವುದು ಮಕ್ಕಳಿಗೆ ಐಸ್‌ಕ್ಯಾಂಡಿ ಸಿಕ್ಕಷ್ಟೇ ಸುಲಭ ಎಂದು. ಮುಂಬೈನ ಕೆಲ ಪ್ರಖ್ಯಾತ ಹೋಟೆಲಿಗೇ ಬರುವ ದಲ್ಲಾಳಿಗಳು ಪಾಸ್‌ಪೋರ್ಟ್ ಮಾಡಿಕೊಡುತ್ತಾರೆ. ಡೇವಿಡ್ ಹೆಡ್ಲಿಗೆ ಆದದ್ದೂ ಇದೇ. ಮುಂಬೈನಲ್ಲಿ ಡೇವಿಡ್ ಹೆಡ್ಲಿ ಬಂದಾಗ ಅವನಿಗೆ ಪಾಸ್‌ಪೋರ್ಟ್ ಮಾಡಿಕೊಟ್ಟಿದ್ದಾರೆ. ಮುಂಬೈನ ಧಾರಾವಿಯಲ್ಲಿ ಈಗಲೂ ಸಹ ಪಾಸ್‌ಪೋರ್ಟ್ ಮಾಡಿಕೊಡುವ ಸ್ಲಮ್ ಇದೆ. ರಾವೋಲಿ ಹಿಲ್‌ಟ್ಯಾಂಕ್ ಮತ್ತು ತಿಲಕ್ ಬ್ರಿಡ್ಜ್ ಬಳಿ ಪಾಸ್‌ಪೋರ್ಟ್ ಮಾಡಿಕೊಡುತ್ತಾರೆ. ಯಾವ ದೇಶದ್ದಾದರೂ! ಪೊಲೀಸರಿಗೆ ಈ ಬಗ್ಗೆ ಮಾಹಿತಿಯಿದ್ದರೂ ಸುಮ್ಮನೆ ಕೂರುವ ಸ್ಥಿತಿಯಿದೆ. ಡೇವಿಡ್ ಹೆಡ್ಲಿಯನ್ನ ಪಾಕಿಸ್ತಾನದ ಐಎಸ್‌ಐ ಭಾರತದ ಗಡಿಯ ಬಳಿ ತಂದು ಬಿಟ್ಟಿದೆ. ಅವನನ್ನು ಯಾರೂ ತಡೆಯಲಿಲ್ಲವೇ? ಇಲ್ಲೇ ಭದ್ರತೆಯ ವೈಫಲ್ಯ ಎದ್ದು ಕಾಣಿಸುತ್ತಿರುವುದು.

ಎರಡನೇ ಪಾಠ: ಡೇವಿಡ್ ಹೆಡ್ಲಿ ಇಲ್ಲಿ ಮುಖ್ಯವಾಗಿ ಹೆಸರು ಹೇಳಿದ್ದು ಹಫೀಜ್ ಸಯೀದ್‌ನದ್ದು. ನೇರವಾಗಿ ಆತ ಹಫೀಜ್ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಎಂದು ಹೇಳಿದ್ದಾನೆ. ಈ ವಿಷಯ ಭಾರತಕ್ಕೆ ಮೊದಲೇ ಗೊತ್ತಿತ್ತು. ಈಗ ಬಂದಿರುವ ಮಾಹಿತಿ ಅಧಿಕೃತ ಮೂಲದಿಂದ ಎಂಬುದಷ್ಟೇ. ಹಫೀಜ್ ಸಯೀದ್ ಪರ ಮಾತನಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಯು ರಾಜಕಾರಣಿಗಳಿಗೆ ಈಗ ನಾಲಿಗೆ ಕಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ನರೇಂದ್ರ ಮೋದಿಯವರು ಇಶ್ರತ್ ಜಹಾನ್‌ಳ ಫೇಕ್ ಎನ್‌ಕೌಂಟರ್ ಮಾಡಿಸಿದ್ದಾರೆ ಎಂದ ಕಾಂಗ್ರೆಸ್ ರಾಜಕಾರಣಿಗಳು ಇಶ್ರತ್ ಒಬ್ಬ ಮುಗ್ಧೆ ಎಂದು ಬೀದಿ ನಾಟಕ ಮಾಡಿ, ಬೊಂಬಡಾ ಬಜಾಯಿಸಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ರಾಜೀನಾಮೆಗೆ ಆಗ್ರಹಿಸಿದ್ದರು. ಆಕೆ ಲಷ್ಕರ್-ಎ-ತಯ್ಬಾದವಳೇ ಎಂದು ಅಮೆರಿಕದ ತನಿಖೆಯಲ್ಲಿ ಸ್ವತಃ ಹೆಡ್ಲಿಯೇ ಹೇಳಿದ್ದಾನೆ. ಸಹ ನಮ್ಮ ರಾಜಕಾರಣಿಗಳು ಈ ಸತ್ಯ ಒಪ್ಪಿಕೊಳ್ಳಲು ತಯಾರಿಲ್ಲ. ರಾಜಕೀಯ ತೆವಲುಗಳಿಗಾಗಿ ಒಬ್ಬ ಉಗ್ರನನ್ನೂ ಸಾಧು ಎಂದು ತೋರಿಸುತ್ತಾರೆ, ಹೆಣದ ಮೇಲೂ ರಾಜಕೀಯ ಮಾಡುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ದಾಖಲೆ ಬೇಕೆ? ಹೆಡ್ಲಿ ಇಲ್ಲಿ ಸಹೋದ್ಯೋಗಿ ಉಗ್ರರ ಬಗ್ಗೆ ಮಾತ್ರ ಹೇಳಲಿಲ್ಲ. ಬದಲಿಗೆ ರಾಜಕಾರಣಿಗಳ ಅಸಲಿ ಮುಖ ಪರಿಚಯ ಮಾಡಿಕೊಟ್ಟರು. ಇದು ಭಾರತೀಯರಿಗೆ ದೊಡ್ಡದೊಂದು ಪಾಠ.

ಮೂರನೇ ಪಾಠ: ಇತ್ತೀಚೆಗೊಂದು ಇಂಗ್ಲಿಷ್ ನ್ಯೂಸ್ ಚಾನೆಲ್ ಅಫ್ಜಲ್ ಗುರು ಮಗನನ್ನು ಸಂದರ್ಶಿಸುತ್ತಾ, ಅವನು ರಾಂಕ್ ಸ್ಟುಡೆಂಟ್, ಬಹಳ ಚುರುಕು ಹುಡುಗ ಎಂದೆಲ್ಲ ದೊಡ್ಡ ಪ್ರೋಗ್ರಾಮ್ ಮಾಡಿತ್ತು. ಇದರಿಂದ ಜನರಿಗೆ ಕಳುಹಿಸಿದ ಸಂದೇಶವಾದರೂ ಏನು? 26/11ನ ಆಪರೇಷನ್‌ನಲ್ಲಿ ಶೌರ್ಯದಿಂದ ಪ್ರಾಣತ್ಯಾಗ ಮಾಡಿದ ಎಷ್ಟೋ ಯೋಧರ ಮನೆಯ ಇಂದಿನ ಸ್ಥಿತಿ ಬಗ್ಗೆ ಎಷ್ಟು ಮಾಧ್ಯಮಗಳು ವರದಿ ಮಾಡಿವೆ? ತುಕಾರಾಮ್ ಓಂಬ್ಳೆ ಮಗಳು ವೈಶಾಲಿ ಮತ್ತು ಭಾರತಿ ಸಹ ಬುದ್ಧಿವಂತೆಯರು. ರಾಂಕ್ ಸ್ಟುಡೆಂಟೂ ಹೌದು! ಆದರೆ ಎಲ್ಲಾದರೂ ಅವರ ಬಗ್ಗೆ ವರದಿ ಮಾಡಿದ್ದನ್ನು ನೋಡಿದ್ದೀರಾ? ಉಗ್ರನ ಮಗ ಮೇಧಾವಿ ಎಂದು ತೋರಿಸುವುದರಿಂದ ಆ ಉಗ್ರನ ಮೇಲೆ ಕರುಣೆ ಮೂಡಿಸುವುದು ಇವರ ಉದ್ದೇಶವೇ? ಇಲ್ಲಿ ಮಾಧ್ಯಮಗಳೂ ಬೆತ್ತಲಾಗಿದ್ದು ಡೇವಿಡ್ ಹೆಡ್ಲಿ ಸತ್ಯ ಬಾಯ್ಬಿಟ್ಟ ಮೇಲೇ. ಇದನ್ನೂ ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ.
ಅಷ್ಟಕ್ಕೂ ಡೇವಿಡ್ ಹೆಡ್ಲಿಗೆ ಮತ್ತು ಲಷ್ಕರ್-ಎ-ತಯ್ಬಾಗೆ ಹಣ ಬರುವುದಾದರೂ ಎಲ್ಲಿಂದ? ಇದರ ಬಗ್ಗೆ ದಿ ಸನ್ ಪತ್ರಿಕೆ ಜನವರಿಯಲ್ಲಿ ವಿಸ್ತೃತ ವರದಿ ಮಾಡಿತ್ತು. ಇದರಲ್ಲಿ ಕೊಟ್ಟಿರುವ ದಾಖಲೆಗಳ ಪ್ರಕಾರ ಲಂಡನ್ ಕೇವಲ ಒಂದು ವರ್ಷದಲ್ಲಿ ಪಾಕಿಸ್ತಾನಕ್ಕೆ ಮತ್ತು ಇತರ ಇಸ್ಲಾಮಿಕ್ ದೇಶಗಳಿಗೆ 100%ನಷ್ಟು ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿತ್ತು. ವಿಶ್ವದಾದ್ಯಂತ 2015ರಲ್ಲಿ ಉಗ್ರರ ದಾಳಿಯ ಲೆಕ್ಕ ಒಮ್ಮೆ ನೋಡೋಣ. ಇದರಲ್ಲಿ ಖಂಡಿತವಾಗಿಯೂ ನಾವು ಗಮನಿಸಬೇಕಾದ ಒಂದು ಸಂಗತಿ ಸಿಗುತ್ತದೆ.

ಜನವರಿ: 29, ಫೆಬ್ರವರಿ: 13, ಮಾರ್ಚ್: 22, ಏಪ್ರಿಲ್: 20, ಮೇ: 30, ಜೂನ್: 30, ಜುಲೈ: 41, ಆಗಸ್ಟ್: 29, ಸೆಪ್ಟೆೆಂಬರ್: 16, ಅಕ್ಕೋಬರ್: 51, ನವೆಂಬರ್: 53, ಡಿಸೆಂಬರ್: 51. ಕೇವಲ 20ರಿಂದ 30ರ ವರೆಗೆ ಇದ್ದ ಉಗ್ರರ ದಾಳಿ, ಅಕ್ಟೋಬರ್‌ನಿಂದ 51, 53 ಮತ್ತು 51ದಾಳಿಗಳಾಗಿವೆ. ಇನ್ನೂ 2016 ಫೆಬ್ರವರಿಯೇ ಮುಗಿದಿಲ್ಲ, ಅದಾಗಲೇ ವಿಶ್ವದ 47 ಕಡೆ ದಾಳಿಗಳಾಗಿವೆ. ಅಕ್ಟೋಬರ್‌ನಿಂದ ದಾಳಿಗಳು ಹೆಚ್ಚಾಗಿದೆಯೆಂದರೆ ಉಗ್ರರಿಗೆ ಸೆಪ್ಟೆಂಬರ್ ಅಥವಾ ಅದರ ಹಿಂದೆಯೇ ಶಸ್ತ್ರಾಸ್ತ್ರಗಳು ಸಿಕ್ಕಿರಬಹುದು ಅಥವಾ ಇನ್ಯಾವುದೋ ದೇಶ ಉಗ್ರ ಸಂಘಟನೆಗಳಿಗೆ ಸಖತ್ತಾಗಿಯೇ ಹಣ ಸುರಿಯುತ್ತಿದೆ. ಬಹುತೇಕ ರಾಜಕೀಯ ವಿಮರ್ಶಕರು ಇದಕ್ಕೆಲ್ಲ ಅಮೆರಿಕವೇ ಕಾರಣ ಎನ್ನುತ್ತಿದ್ದರು. ಎಲ್ಲೋ ಬೆರಳೆಣಿಯಷ್ಟು ವಿಮರ್ಶಕರು ಮಾತ್ರ ಲಂಡನ್ ಈ ದಾಳಿಗಳ ಮೂಲ ಎನ್ನುತ್ತಿದ್ದರು! ಇಡೀ 2015ರಲ್ಲಿ ಇಂಗ್ಲೆಂಡ್ ಮೇಲೆ ಒಂದು ದಾಳಿಯೂ ಆಗಿಲ್ಲ. ಡಿಸೆಂಬರ್‌ನಲ್ಲಿ ಮಾತ್ರ ನಾಮ್‌ಕೇವಾಸ್ತೆಗೋ ಏನೋ ಪೂರ್ವ ಲಂಡನ್‌ನ ಲೇಟನ್‌ಸ್ಟೋನ್‌ನಲ್ಲಿ ಟ್ಯೂಬ್ ಸ್ಟೇಷನ್‌ನ ನೆಲಮಾಳಿಗೆಯಲ್ಲಿ ಒಬ್ಬ ಸಿರಿಯಾಗೆ, ಇಸಿಸ್‌ಗೆ ಜೈಕಾರ ಕೂಗುತ್ತಾ ಅಲ್ಲಿದ್ದ ಮೂರು ನಾಗರಿಕರಿಗೆ ಚಾಕು ಹಾಕಿದ್ದಾನೆ. ಎಲ್ಲ ದೇಶಗಳ ಮೇಲೂ ಕನಿಷ್ಠವೆಂದರೆ 3 ಬಾರಿಯಾದರೂ ದಾಳಿಯಾಗಿದೆ ಆದರೆ ಇಂಗ್ಲೆಂಡ್ ಮೇಲೆ ಮಾತ್ರ ಒಂದೇ ಬಾರಿ?! ಇದಕ್ಕೆ ಸರಿಯಾಗಿ 2015ರ ಡಿಸೆಂಬರ್ ಮಧ್ಯದಲ್ಲಿ ಇಂಗ್ಲೆಂಡ್‌ನಲ್ಲಿ ದೊಡ್ಡ ದೊಡ್ಡ ಹೋರಾಟಗಳು ನಡೆಯುತ್ತವೆ. ಬೀದಿಗಿಳಿದ ಹೋರಾಟಗಾರರು, ಸೌದಿ ಅರೇಬಿಯಾಗೆ ಮತ್ತು ಪಾಕಿಸ್ತಾನಕ್ಕೆ ಇಂಗ್ಲೆಂಡ್ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳು ಬಹಳವೇ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ ಎಂದು ಆರೋಪಿಸಿದರು. ಇದು ಭಾರತದಲ್ಲಿ ಯಾವುದೋ ಸಂಘಟನೆಗಳು ಪಾಕಿಸ್ತಾನದಿಂದಲೋ ಅಥವಾ ಅಮೆರಿಕದಿಂದಲೋ ಹಣ ಪಡೆದು ಹೋರಾಟ ಮಾಡಿದ ಹಾಗಲ್ಲ. ಲಂಡನ್‌ನಲ್ಲಿ ನಡೆದ ಹೋರಾಟ. ಡೇವಿಡ್ ಹೆಡ್ಲಿಗೆ ಬೆಂಬಲಿಸುತ್ತಿರುವುದು ಅಮೆರಿಕವೇ ಎಂದು ವಾದಿಸುವ ಮಂದಿಗೆ ಇದರ ಸಂಪೂರ್ಣ ಚಿತ್ರಣದ ಅವಶ್ಯಕತೆಯಿದೆ. ಇಷ್ಟು ವರ್ಷ ನಮ್ಮ ವಿಮರ್ಶಕರು ಭಾರತದಲ್ಲಿ ಏನೇ ದಾಳಿಯಾದರೂ ಅದಕ್ಕೆ ಅಮೆರಿಕ ಮತ್ತು ಪಾಕಿಸ್ತಾನವನ್ನು ದೂರುತ್ತಿದ್ದರು. ಆದರೆ ತಮ್ಮ ದೇಶದ ಮೇಲೆ ಯಾರೂ ದಾಳಿ ಮಾಡಬಾರದು ಎಂದು ಉಗ್ರರಿಗೆಲ್ಲ ಶಸ್ತ್ರಾಸ್ತ್ರ ಮತ್ತು ಪೌಂಡ್‌ಗಳ ಲೆಕ್ಕದಲ್ಲಿ ಹಣ ಒದಗಿಸುತ್ತಿರುವ ಲಂಡನ್ ಬಗ್ಗೆ ಯಾರೂ ಮಾತೇ ಆಡುತ್ತಿಲ್ಲವೇಕೆ? ಡೇವಿಡ್ ಹೆಡ್ಲಿ ಲಂಡನ್ನಿನಲ್ಲಿರುವ ಕೆಲವರ ಜತೆ ಬಹಳ ನಂಟು ಹೊಂದಿದ್ದು, ಆಗಾಗ ಕರೆ ಮಾಡುತ್ತಿದ್ದ ಎಂದು ಸಿಐಎ ಮಾಹಿತಿ ನೀಡಿದೆ.

ಅಂದು ರಾಮ ರಾವಣನನ್ನು ಕೇವಲ ಒಬ್ಬ ವೈರಿಯಾಗಿ ನೋಡಿದ್ದರೆ ರಾವಣನಿಂದ ಅಪಾರ ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಡೇವಿಡ್ ಹೆಡ್ಲಿ ನೀಡಿರುವ ಈ ಮಾಹಿತಿಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಸಾಕಷ್ಟು ಪಾಠಗಳು ಕಲಿಯಬಹುದು.

Leave a Reply

Copyright©2021 Chiranjeevi Bhat All Rights Reserved.
Powered by Dhyeya