ಕರ್ನಲ್ ಕಾರ್ಯಾ ಮಾತು ಕೇಳಿ ದಂಗಾಗಿದ್ದೆ!

12540917_452914858238482_499748414349607093_nಸುಮಾರು 8 ವರ್ಷದ ಹಿಂದಿನ ಮಾತು. ನಾನು ಎನ್‌ಸಿಸಿಯಲ್ಲಿದ್ದೆ. ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೆಡ್‌ಗೆ ಆಯ್ಕೆಯಾಗುವುದೆಂದರೆ ಸುಲಭದ ಮಾತಲ್ಲ. ಆರ್ಮರ್ಡ್ ಬೆಟಾಲಿಯನ್ ಬೆಂಗಳೂರು ದಕ್ಷಿಣ ವಿಭಾಗದಿಂದ ನಾನೊಬ್ಬನೇ ಸೆಲೆಕ್ಟ್ ಆಗಿದ್ದೆ. ನನೆಗೆ ಶಸ್ತ್ರಾಸ್ತ್ರದಲ್ಲಿ ಹೆಚ್ಚು ಆಸಕ್ತಿಯಿದ್ದ ಕಾರಣ ನಿತ್ಯವೂ ಎಲ್ಲರ ಜತೆಯಲ್ಲಿ ನನ್ನನ್ನೂ ಫೈರಿಂಗ್ ರೇಂಜ್(ಬಂದೂಕು ಅಭ್ಯಾಸಕ್ಕಾಗಿ ಮೀಸಲಾದ ನಿರ್ಜನ ಪ್ರದೇಶ)ಗೆ ಕರೆದುಕೊಂಡು ಹೋಗುತ್ತಿದ್ದರು. ನಾಲ್ಕೂವರೇ ಕೆಜಿ ತೂಕದ ಎಸ್‌ಎಲ್‌ಆರ್ ರೈಫಲ್ ಮತ್ತು 11ಕೆಜಿ ತೂಕದ ಎಲ್‌ಎಮ್‌ಜಿಯಿಂದ ಗುರಿಯಿಟ್ಟು ಫೈರ್ ಮಾಡುವ ಮಜವೇ ಬೇರೆ.

ಇಂಥ ಅವಕಾಶ ಕಲ್ಪಿಸಿಕೊಟ್ಟಿದ್ದು ಲೆಫ್ಟಿನೆಂಟ್ ಕರ್ನಲ್ ಕಾರ್ಯಾ. ಬಹಳ ಸ್ಟ್ರಿಕ್ಟ್ ಮನುಷ್ಯ. ಒಮ್ಮೆ ನಾನು ಗನ್ ಹಿಡಿದುಕೊಳ್ಳುವ ರೀತಿ ತಪ್ಪಾಗಿ ಅಚಾನಕ್ ಆಗಿ ಫೈರ್ ಆಗಿದ್ದಕ್ಕೆ ನನ್ನನ್ನು ಬೂಟು ಕಾಲಿನಿಂದ ಒದ್ದು ‘ನೀನು ಸೈನ್ಯಕ್ಕೆ ನಾಲಾಯಕ್’ ಎಂದು ಬೈದದ್ದು ಇನ್ನೂ ನೆನಪಿದೆ. ದೇಶದ ವಿಚಾರ ಬಂದರೆ ನನ್ನನ್ನು ಎದುರಿಗೆ ಕೂರಿಸಿಕೊಂಡು ಅವರು ಕಾರ್ಗಿಲ್ ಸಮಯದಲ್ಲಿ ಹೇಗೆ ಹೋರಾಡಿದ್ದರು, ಪಾಕಿಸ್ತಾನ ಹೇಗೆಲ್ಲ ಪ್ಲಾನ್ ಮಾಡುತ್ತದೆ, ಉಗ್ರರ ಬಗ್ಗೆ ತಾಸುಗಟ್ಟಲೇ ಹರಟುತ್ತಿದ್ದರು. ಇವರ ದೇಶ ಭಕ್ತಿ ಹೇಗಿತ್ತೆಂದರೆ ಇವರು ಕರ್ನಲ್ ಆಗಿದ್ದಾಗ, ಇವರಿಗಿಂತಲೂ ಹೈಪೋಸ್ಟ್ ಅಂದರೆ ಫೀಲ್ಡ್ ಮಾರ್ಷಲ್ ಆಗಿದ್ದ ಅಧಿಕಾರಿ ಪಾಕಿಸ್ತಾನದ ಜತೆ ಅನುಮಾನಾಸ್ಪದವಾಗಿ ಮಾತನಾಡಿದ್ದ ಎಂಬುದನ್ನು ಕಂಡು ಹಿಡಿದು ಎಲ್ಲರೆದುರು ಕೆನ್ನೆಗೆ ಬಾರಿಸಿ, ಕೊನೆಗೆ ಹಿಂಬಡ್ತಿ ಪಡೆದು ಲೆಫ್ಟಿನೆಂಟ್ ಕರ್ನಲ್ ಆಗಿದ್ದರು ಕಾರ್ಯಾ. ನಾನು ಸದಾ ಅವರ ಬಳಿಯೇ ಇರುತ್ತಿದ್ದರಿಂದ ನಮ್ಮ ಸ್ನೇಹ ಬೆಳೆದಿತ್ತು. ಒಮ್ಮೆ ಮಾತನಾಡುತ್ತಾ, ‘ಸಾರ್ ನಿಮ್ಮ ಫ್ಯಾಮಿಲಿ ಬಗ್ಗೆೆ ಹೇಳಿ… ಆಗಾಗ ನೋಡಕ್ ಹೋಗ್ತಿರಾ? ನಿಮ್ಮದು ಬಿಡಿ ಸಾರ್ ಸೂಪರ್ ಜೀವನ’ ಎಂದೆ. ಇಷ್ಟಕ್ಕೇ ಕಣ್ತುಂಬಿ ಬಂದಿತ್ತು ಅವರಿಗೆ.

‘ನೀನಂದುಕೊಂಡಿರುವಷ್ಟು ಸುಖದಿಂದಿಲ್ಲ ನಾನು. ಹೆಂಡತಿ ಮಕ್ಕಳ ಮುಖ ನೋಡಬೇಕು ಎಂದರೆ ತಿಂಗಳುಗಟ್ಟಲೆ ಕಾಯಬೇಕು. ಕೆಲವೊಮ್ಮೆ ವರ್ಷವಾಗುತ್ತದೆ. ಆದೂ ಸಹಿಸಿಕೊಂಡಿರುತ್ತೇನೆ.. ಆದರೆ ಅವರಿಗೆ ಸರಿಯಾಗಿ ವ್ಯವಸ್ಥೆ ಸಹ ಇಲ್ಲ ಅಲ್ಲಿ. ಮಕ್ಕಳಿಗೆ ಏನು ಬೇಕೋ ಅದನ್ನ ತೆಗೆಸಿಕೊಡಲಾಗುತ್ತಿಲ್ಲ.’ ಇಷ್ಟೆಲ್ಲ ಹೇಳಿ, ಒಂದು ಮಾತು ಹೇಳಿದರು, ‘ನಾನು ದೇಶ ಸೇವೆ ಮಾಡುತ್ತೇನೆ ನಿಜ. ಆದರೆ, ನನ್ನ ಹೆಂಡತಿ ಮಕ್ಕಳೇ ನಿತ್ಯವೂ ಸಂಕಷ್ಟದಲ್ಲಿರುವಾಗ ಕ್ಯಾ ಫಾಯಿದಾ ಹೇ?(ಏನು ಪ್ರಯೋಜನ?)’! ಎಂದರು. ಒಬ್ಬ ರಾಜಕಾರಣಿ ರಾಜಕೀಯಕ್ಕೆ ಬಂದು ಸರಿಯಾಗಿ ಕಮಾಯಿ ಸಿಕ್ಕಿಲ್ಲ ಎಂದಾಗ ಕ್ಯಾ ಫಾಯಿದಾ ಎಂದರೆ ಒಪ್ಪಬಹುದು? ಒಬ್ಬ ಸರಕಾರಿ ನೌಕರ ಕ್ಯಾ ಫಾಯಿದಾ ಎಂದರೆ ಒಪ್ಪಬಹುದು. ಕೊನೆಯದಾಗಿ ಒಬ್ಬ ಪೊಲೀಸ್ ಅಧಿಕಾರಿ ಕ್ಯಾ ಫಾಯಿದಾ ಹೇ ಎಂದರೂ ಒಪ್ಪಬಹುದು. ಒಬ್ಬ ಯೋಧ ಇಂಥ ಮಾತು ಆಡುತ್ತಾನೆಂದರೆ ನಾವೇ ಆಲೋಚಿಸಬೇಕು ಅವರಿಗಾಗಿರುವ ನೋವೆಷ್ಟು? ಎಂದು. ಇಂಡಿಯನ್ ಆರ್ಮಿಗೆ ಬರುವವನು ಯಾರೂ ಫಾಯಿದೆಯ ಬಗ್ಗೆ ಲೆಕ್ಕ ಹಾಕಿ ಬರುವುದಿಲ್ಲ. ಬೇರೆ ಯಾವುದೇ ಅಭ್ಯರ್ಥಿಗಳು ಕೆಲಸಗಳಿಗೆ ಬೈ ಚಾನ್ಸ್ ಬಂದರೆ, ಸೇನೆಗೆ ಮಾತ್ರ ಬೈ ಚಾಯ್ಸ್ ಬರುತ್ತಾರೆ. ಆದರೆ ಯೋಧನೇ ಇಂಥ ಪ್ರಶ್ನೆ ಕೇಳುತ್ತಿದ್ದಾನೆ ಎಂದರೆ ಎಲ್ಲಿಗೆ ಬಂತು ದೇಶದ ಸ್ಥಿತಿ? ಯೋಧರಿಗೆ ಎಷ್ಟು ಅಸುರಕ್ಷೆ ಕಾಡಿರಬೇಡ? ಇದು ಎಂಟು ವರ್ಷದ ಹಿಂದಿನ ಹಿಂದಿನ ಘಟನೆಯಿರಬಹುದು, ಆದರೆ ಯೋಧರಿಗೆ ಅಂದೇ ಅಸುರಕ್ಷೆ ಕಾಡಿತ್ತು ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಿದು. ಇದು ಕ್ರಮೇಣ ಉಲ್ಬಣಗೊಂಡಿದ್ದರಿಂದ ಇಂದಿಗೆ ಅದರ ಪರಿಣಾಮವೇನು ಗೊತ್ತಾ? ಪಠಾಣ್‌ಕೋಟ್, ಮಾಲ್ಡಾ ಮತ್ತು ಇನ್ನಿತರ ಘಟನೆಗಳು. ಲೆಫ್ಟಿನೆಂಟ್ ಕರ್ನಲ್ ಕಾರ್ಯಾ ದೇಶದ್ರೋಹಿ ಕೆಲಸಕ್ಕೆ ಕೈ ಹಾಕಲಿಲ್ಲ. ನನ್ನ ಬಳಿ ಕಣ್ಣೀರಿಟ್ಟು ಸುಮ್ಮನಾದರು. ಆದರೆ, ಎಷ್ಟು ಜನ ಹೀಗೆ ತಮ್ಮ ಕಷ್ಟ ಸಹಿಸಿಕೊಂಡಿರುತ್ತಾರೆ? ಅವರ ಕುಟುಂಬಕ್ಕೇ ರಕ್ಷಣೆಯಿಲ್ಲದಿರುವಾಗ ದೇಶ ಕಾಯಲು ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ?

ಇತ್ತೀಚಿನ ಎರಡು ಘಟನೆಯನ್ನು ಗಮನಿಸೋಣ… ನೀವು ಒಬ್ಬ ಜನಸಾಮಾನ್ಯನಾಗಿ ಯಾವುದೇ ಶಿಫಾರಸು ಬಳಸದೇ ಒಂದು ಮಿಲಿಟರಿ ಜಾಗಕ್ಕೆ ಹೋಗಿ ನೋಡೋಣ? ಎಷ್ಟೇ ನಾಟಕವಾಡಿದರೂ ನೂರು ಮೀಟರ್ ಸಹ ದಾಟಲು ಬಿಡುವುದಿಲ್ಲ. ಹೆಚ್ಚಿಗೆ ಮಾತನಾಡಿದರೆ ಅಲ್ಲಿರುವ ಯೋಧರು ಗನ್ ಎತ್ತಿ ನಮ್ಮತ್ತ ಗುರಿ ಇಟ್ಟು ‘ನೀನು ಯಾರು ಹೇಳು ಅಥವಾ ಮನೆಗೆ ಹೋಗು’ ಎಂದು ಖಡಕ್ ಆಗಿ ಹೇಳಿಬಿಡುತ್ತಾರೆ. ಹೀಗಿರುವಾಗ ಪಠಾಣ್‌ಕೋಟ್‌ನಲ್ಲಿ ನಮ್ಮ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆಯಲು ಹೇಗೆ ಸಾಧ್ಯ? ಅದೂ ಅಷ್ಟು ವ್ಯವಸ್ಥಿತವಾಗಿ? ವಾಯುನಲೆಯ ನೀಲಿನಕ್ಷೆ ಕೊಟ್ಟವರಾರು? ಎಲ್ಲೆಲ್ಲಿ ಯಾವ್ಯಾವ ಸೂಕ್ಷ್ಮ ಪ್ರದೇಶಗಳಿವೆ ಎಂದು ಉಗ್ರರಿಗೆ ಹೇಳಿದವರಾರು? ಯಸ್, ನಿಮ್ಮ ಅನುಮಾನ ಸರಿ. ಪಠಾಣ್‌ಕೋಟ್ ದಾಳಿಗೆ ಸಹಕರಿಸಿದ್ದು ನಮ್ಮ ಯೋಧರು ಮತ್ತು ಪಂಜಾಬ್ ಪೊಲೀಸರೇ. ಒಬ್ಬ ಯೋಧನ ತಪ್ಪಿನಿಂದ ಹಲವಾರು ಯೋಧರು ತಮ್ಮ ಕುಟುಂಬವನ್ನು ಕಳೆದುಕೊಳ್ಳಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಮಿಲಿಟರಿ ಪೊಲೀಸರು ಕೆಲ ಯೋಧರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಎರಡನೇಯದ್ದು ಮಾಲ್ಡಾ ಘಟನೆ. ಮಾಲ್ಡಾದಲ್ಲಿ ಗಲಭೆಯಾದಾಗ ಅಲ್ಲಿ ನರಕವೇ ಸೃಷ್ಟಿಯಾಗಿತ್ತು. ಎಲ್ಲ ‘ಶಾಂತಿ ಪ್ರಿಯ’ರೂ ರೊಚ್ಚಿಗೆದ್ದು ಊರನ್ನೇ ಸುಟ್ಟು ಹಾಕಿದ್ದರು. ಎಲ್ಲೂ ಇಲ್ಲದ ಜನರು ಇಲ್ಲಿಗೆ ಏಕಾ ಏಕಿ ಲಕ್ಷಗಟ್ಟಲೆ ಹೇಗೆ ಬಂದರು ಎಂದು ಒಮ್ಮೆ ಆಲೋಚಿಸಿದರೆ ಕೆಲ ಸತ್ಯಗಳು ಹೊರಬರುತ್ತವೆ. ಮಾಲ್ಡಾ ಗಲಭೆ ಆಗುವ ಮುನ್ನಾ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಿಂದ ಕೆಲ ಮುಸಲ್ಮಾನರನ್ನು ಒಳಗೆ ಬಿಟ್ಟುಕೊಳ್ಳಲಾಗಿತ್ತು. ಎಲ್ಲರೂ ಮಮತಾ ಬ್ಯಾನರ್ಜಿಯೇ ಅಷ್ಟು ಜನರನ್ನು ಭಾರತದ ಗಡಿಯೊಳಗೆ ಕರೆಸಿಕೊಂಡರು ಎಂದು ಆರೋಪಿಸಿದರು. ಆ ಆರೋಪ ಎಷ್ಟು ಸತ್ಯವೋ, ನಮ್ಮ ಯೋಧರು ಅವರನ್ನೆಲ್ಲ ಒಂದು ತಲೆಗೆ 3,000ರು. ಪಡೆದು ಒಳಗೆ ಬಿಟ್ಟುಕೊಂಡಿದ್ದೂ ಅಷ್ಟೇ ಸತ್ಯ. ಇದೊಂದೇ ಅಲ್ಲ, ಮಾಲ್ಡಾ ಗಲಭೆಯಲ್ಲಿ ಕೋಟ್ಯಂತರ ರು.ಗಳ ಕೋಟಾ ನೋಟು ಸಹ ಸಿಕ್ಕಿತ್ತು. ಗಡಿ ಕಾಯುವ ಸೈನಿಕನೇ ಕೇವಲ ಮೂರು ಸಾವಿರದ ಆಸೆಗಾಗಿ ದೇಶದೊಳಗೆ ವೈರಿಗಳನ್ನು ಬಿಟ್ಟುಕೊಳ್ಳುವ ಸ್ಥಿತಿ ತಲುಪಿರುವುದು ಈ ಎಂಟು ವರ್ಷದ ಬೆಳವಣಿಗೆ. ಪಶ್ಚಿಮ ಬಂಗಾಳದ ಗಡಿಯಲ್ಲಿ ಸೇನೆಯ ಉನ್ನತ ಮಟ್ಟದ ಆಫೀಸರುಗಳು ಇದರಲ್ಲಿ ಶಾಮೀಲಾಗಿದ್ದಾರೆಂದು ವರ್ಷದ ಹಿಂದೆ ಬೆಳಗಾವಿ ಮೂಲದ ಯೋಧನೊಬ್ಬ ಕನ್ನಡ ನ್ಯೂಸ್ ಚಾನೆಲ್‌ಗಳಿಗೆ ಹೇಳಿದ್ದ. ಏನಾದ್ರೂ ಮಾಡಿ ಇದನ್ನ ತಡೆಗಟ್ಟಿ ಎಂದು ಆಗಲೇ ಕೇಳಿದ್ದ. ಯಾರ ಕಣ್ಣಿಗೂ ಅದು ಬೀಳಲಿಲ್ಲ.

ಅಂದು ಕಾಂಗ್ರೆಸ್ ಸರಕಾರ ಯೋಧರಿಗೆ ಸರಿಯಾದ ಸವಲತ್ತುಗಳನ್ನು ಕೊಟ್ಟಿದ್ದರೆ ಅವರು ಈ ಸ್ಥಿತಿಗೆ ಬರುತ್ತಿರಲಿಲ್ಲ. ಇತ್ತೀಚೆಗೆ ಬಿಎಸ್‌ಎಫ್ ವಿಮಾನ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷದಿಂದ, ಗೋಡೆಗೆ ಡಿಕ್ಕಿ ಹೊಡೆದು ಚೂರು ಚೂರಾಗಿ 12 ಯೋಧರು ಏನೂ ಮಾಡದೇ ಪ್ರಾಣ ಕಳೆದುಕೊಂಡರು. ಈ ವಿಮಾನ ಬದಲಾವಣೆ ಮಾಡಲು ಕಾಂಗ್ರೆಸ್ ಸರಕಾರವಿದ್ದಾಗಲಿಂದಲೂ ಕೇಳುತ್ತಿದ್ದರು. ಆದರೂ ಬದಲಾಯಿಸಿರಲಿಲ್ಲ. ಮೊನ್ನೆ ಮೃತ ಯೋಧರ ಮನೆಗೆ ರಾಜನಾಥ್ ಸಿಂಗ್ ಹೋದಾಗ ಯೋಧನೊಬ್ಬನ ಮಗಳು ಜೋರಾಗಿ ಅಳುತ್ತಾ ಕೇಳಿದ್ದು ಒಂದೇ ಪ್ರಶ್ನೆ. ‘ಪ್ರತೀ ಸಲವೂ ಯೋಧರೇ ಏಕೆ ಸಾಯಬೇಕು? ಅವರ ಕುಟುಂಬವೇ ಏಕೆ ಕಣ್ಣೀರಿಡಬೇಕು’ ಎಂದು ಕೇಳಿದ್ದಕ್ಕೆ ಯಾರದ್ದೂ ತುಟಿ ಪಿಟಿಕ್ಕೆನ್ನಲ್ಲಿಲ್ಲ. ಇನ್ನು ಕಾಂಗ್ರೆಸ್ ಸರಕಾರವಿದ್ದಾಗ ಯೋಧರ ಸ್ಥಿತಿ ಅಂದು ಹೇಗಿತ್ತೆಂದರೆ, ಒಂದು ಲೀಟರ್ ಸೀಮೆ ಎಣ್ಣೆಗೂ ಕೈಚಾಚಬೇಕಿತ್ತು. ತಿಂಗಳಿಗೆ 15ಲೀಟರ್ ಸೀಮೆ ಎಣ್ಣೆ ಕೊಡುತ್ತಿದ್ದವರಿಗೆ 12 ಲೀಟರ್ ಕೊಡಲಾರಂಭಿಸಿದ್ದರು. 3 ಲೀಟರ್ ಸೀಮೆ ಎಣ್ಣೆ ಉಳಿಸಿ ಕಾಂಗ್ರೆಸ್ ಸಾಧಿಸಿದ್ದಾದರೂ ಏನು? ಯಾರ ಮನೆಗೆ ಬೆಂಕಿ ಹಚ್ಚಲು ಬೇಕಿತ್ತು ಅವರಿಗೆ?

ಯೋಧನೊಬ್ಬ ಬದುಕಿದ್ದಾಗಲೇ ಅವರ ಕುಟುಂಬಕ್ಕೆ ಕಷ್ಟ, ಅಂತಹುದರಲ್ಲಿ ಅವನು ಸತ್ತ ಮೇಲೆ ಸರಕಾರ ಏನೋ ಹಣ ಪರಿಹಾರ ಘೋಷಿಸುತ್ತದೆ, ಆದರೆ ಹಣ ಅವನ ಕುಟುಂಬಕ್ಕೆ ಸೇರುವುದೇ ಇಲ್ಲ. ಸೇರಿದರೂ ವಾಪಸ್ ಕಿತ್ತುಕೊಳ್ಳುವ ಜಿಲ್ಲಾಧಿಕಾರಿಗಳಿದ್ದಾರೆ. ನಿತ್ಯವೂ ಅಮ್ಮ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ನೋಡಲಾಗದೇ ಮಕ್ಕಳು ತಾವು ಸೈನ್ಯಕ್ಕೆ ಸೇರಬಾರದು ಎಂದು ನಿರ್ಧರಿಸಿ ಡಾಕ್ಟರ್, ಎಂಜಿನಿಯರ್ ಆಗುತ್ತಾರೆ. ಇದಕ್ಕೆ ನಮ್ಮ ಕರ್ನಾಟಕದ ಉದಾಹರಣೆಯೆಂದರೆ, ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಯಶವಂತ್ ಕೋಳ್ಕರ್ ಕುಟುಂಬ. ಅವರ ಪತ್ನಿ ಸಾವಿತ್ರಿದೇವಿ ಕೋಳ್ಕರ್‌ಗೆ ಇಂದು ಮಾಸಾಶನ ಎಂದು ಬರುವುದು 250.ರು. ಮಾತ್ರ. ಅದೂ ಕೆಲ ತಿಂಗಳು ಬರುವುದಿಲ್ಲ. ದೇಶಕ್ಕಾಗಿ ಪ್ರಾಣ ಕೊಟ್ಟವನ ಕುಟುಂಬಕ್ಕೆ 250ರು. ಕೊಡುತ್ತಿರುವ ಪರಿಣಾಮವೇ ಇಂದು 3,000 ರು. ಗೆ ಉಗ್ರಗಾಮಿಗಳನ್ನು ತಾಯಿ ಭಾರತಿಯ ಒಡಲಿನೊಳಗೆ ಬಿಡುತ್ತಿದ್ದಾರೆ. ಎಲ್ಲಿ ಯೋಧರ ಮಕ್ಕಳು ಫೀಸ್ ಕಡಿಮೆ ಮಾಡಿ, ಮೀಸಲಾತಿ ಕೊಡಿ ಎಂದು ಕೇಳುತ್ತಾರೋ ಎಂದು ಶಾಲೆಗಳಿಗೂ ಅವರನ್ನು ಸೇರಿಸಿಕೊಳ್ಳುತ್ತಿಲ್ಲ. ತನ್ನ ಕುಟುಂಬ ಚೆನ್ನಾಗಿದ್ದರೆ ತಾನೇ ಯೋಧ, ಸೇನೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯ? ಹಿಂದೆ ಕಾಂಗ್ರೆಸ್ ಮಾಡಿದ ತಪ್ಪನ್ನೇ ಈಗ ಬಿಜೆಪಿ ಮಾಡಬಾರದು ಎಂದು ಹಲವಾರು ಯುದ್ಧ ವಿಮಾನಗಳು, ಸುಧಾರಿತ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಆದರೆ ದುರದೃಷ್ಟವೆಂದರೆ ಕಾಂಗ್ರೆಸ್ ಇದಕ್ಕೂ ತಕರಾರು ತೆಗೆಯುತ್ತಿದೆ. ಬುಲೆಟ್ ಪ್ರೂಫ್ ಜಾಕೆಟ್ ತಂದು ಕೊಡಲು ಮೋದಿ ಸರಕಾರ ಆರ್ಡರ್ ಮಾಡಿದರೆ, ಅದೂ ತಪ್ಪು ಎನ್ನುವವರಿಗೇನು ಕಡಿಮೆಯಿಲ್ಲ. ನೆನಪಿರಲಿ, ಎಲ್ಲ ಯೋಧರೂ ಲೆಫ್ಟಿನೆಂಟ್ ಕರ್ನಲ್ ಕಾರ್ಯಾ ಥರ ಇದ್ದಾರೆ. ಆದರೆ, ಒಬ್ಬ ಯೋಧ ಮನನೊಂದು ಹಣದ ಆಸೆಗೆ ಬಿದ್ದರೂ ಇಡೀ ದೇಶವೇ ಮತ್ತೊಂದು ಸಿರಿಯಾ, ಇರಾಕ್ ಆಗಬೇಕಾಗುತ್ತದೆ. ಕಾರ್ಯಾನಂಥ ಯೋಧರನ್ನು ಕಳೆದುಕೊಳ್ಳದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಈಗ ಮೋದಿ ಸರಕಾರದ್ದು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya