ರಾಹುಲ್ ಗಾಂಧಿ ಕಾಂಗ್ರೆಸಿನ ಉಪಾಧ್ಯಕ್ಷರೋ? ವಿದೂಷಕರೋ?

You’ve to become like Steve Jobs’ of Microsoft in India (ಭಾರತದಲ್ಲಿನ ಮೈಕ್ರೋಸಾಫ್ಟ್ ಸ್ಟೀವ್ ಜಾಬ್ಸ್ ಆಗಬೇಕು ನೀನು!) ಇದು ರಾಹುಲ್ ಗಾಂಧಿ ಮುಂಬೈನ ಎನ್‌ಎಮ್‌ಐಎಮ್‌ಎಸ್ ಕಾಲೇಜಿನಲ್ಲಿ ಹುಡುಗನೊಬ್ಬನಿಗೆ ಹರಸಿ ಕಾಮಿಡಿ ಪೀಸ್ ಆದ ರೀತಿ. ನಿಮಗೆ ತಿಳಿದಿರಲಿ, ಸ್ಟೀವ್ ಜಾಬ್ಸ್ ಆ್ಯಪಲ್ ಕಂಪನಿಯ ಸಂಸ್ಥಾಪಕ, ಬಿಲ್ ಗೇಟ್ಸ್ ಮೈಕ್ರೋಸಾಫ್ಸ್ ಕಂಪನಿಯ ಸಂಸ್ಥಾಪಕ, ಇವೆರಡು ಕಂಪನಿಗಳು ಭಾರತದ್ದಲ್ಲ. ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟ್ ನವನಾದರೆ, ಇಷ್ಟು ವರ್ಷ ಬಿಲ್ ಗೇಟ್ಸ್ ಏನು ಗೆಣಸು ಕೀಳುತ್ತಿದ್ದನೇ? ಹಾಗಾದರೆ ಆ್ಯಪಲ್ ಕಂಪನಿಯನ್ನು ಹುಟ್ಟು ಹಾಕಿದ್ದು ರಾಹುಲ್ ಗಾಂಧಿಯೇ? ಇದು ಕಾಂಗ್ರೆಸ್ ಉಪಾಧ್ಯಕ್ಷ/ಯುವರಾಜ ಆಡಿರುವ ಮಾತು ಎಂದರೆ ಕಾಂಗ್ರೆಸ್‌ನಲ್ಲಿರುವ ಇತರ ನಾಯಕರ ಪರಿಸ್ಥಿತಿ ಮತ್ತು ರಾಹುಲ್ ಬುದ್ಧಿಮತ್ತೆ ನಮಗೆ ಅರ್ಥವಾಗುತ್ತದೆ.

ಅಸಲಿಗೆ ರಾಹುಲ್ ಗಾಂಧಿಗೆ ಯಾವುದರ ಮೇಲೆ ಹಿಡಿತವಿಲ್ಲ? ನಾಲಿಗೆಯ ಮೇಲೋ ಅಥವಾ ಬುದ್ಧಿಯ ಮೇಲೋ? ಕೇವಲ ಇದೊಂದು ಮಾತು ಹೇಳಿದ್ದರೆ ಹೌದು ಏನೋ ಬಾಯ್ತಪ್ಪಿನಿಂದ ಆಗಿರಬೇಕು ಎಂದು ತಿಳಿಯಬಹುದಿತ್ತು. ಆದರೆ, ರಾಹುಲ್ ಹೋದ ಕಡೆಯೆಲ್ಲಾ ಒಂದಲ್ಲ ಒಂದು ಮಾತಾಡಿ ಕಾಮಿಡಿ ಪೀಸ್ ಆಗುತ್ತಾರೆ. ಇದಕ್ಕೆ ಸರಿಯಾಗಿ ಎರಡು ಉದಾಹರಣೆ ಸಿಗುತ್ತದೆ. ಗುಜರಾತ್‌ನಲ್ಲಿ ಮೋದಿ ಅಲೆ ಹೆಚ್ಚಾಗುತ್ತಿದ್ದಂತೆ ಅಲ್ಲಿ ಒಂದು ಕಾಂಗ್ರೆಸ್ ಸಮಾವೇಶ ನಡೆಸುವಂತೆ ಪ್ಲಾನ್ ಮಾಡಿದರು. ಅದಕ್ಕೆ ಕಾಂಗ್ರೆಸ್‌ನಿಂದ ಮುಖ್ಯ ಭಾಷಣಕಾರರಾಗಿ ಮತ್ತದೇ ರಾಹುಲ್ ಗಾಂಧಿಯನ್ನ ಬಿಟ್ಟಿದ್ದರು. ಪಾಪ ಏನ್ ಮಾತಾಡ್ತಾರೆ. ಮೈಕ್ ಮೇಲೆ ಕೆಳಗೆ ಮಾಡಿ, ಆ ಕಡೆ ಈ ಕಡೆ ನೋಡಿ, ನೀರು ಕುಡಿದ ಹಾಗೆ ಮಾಡಿ, ಮಾತಾಡಲೇ ಬೇಕಾಗಿ ಬಂದಾಗ ಕೊನೆಗೆ ರೊಚ್ಚಿಗೆದ್ದು ಗುಜರಾತನ್ನು ಎದ್ದು ನಿಲ್ಲಿಸಿದ್ದು ಯಾರು ಎಂದುಕೊಂಡಿದ್ದೀರಾ? ಗುಜರಾತ್‌ಗೆ ಹಾಲು ಕೊಟ್ಟವರು ಯಾರು ಎಂದುಕೊಂಡಿದ್ದೀರಾ? ಅಮುಲ್ ಕೊಟ್ಟವರು ಯಾರು ಎಂದುಕೊಂಡಿದ್ದೀರಾ? ಇಲ್ಲಿ ಕುಳಿತಿದ್ದಾರಲ್ಲ ಈ ಮಹಿಳೆಯರು ಕೊಟ್ಟಿದ್ದು.. ನೋಡಿ ಇವರು ಕೊಟ್ಟಿದ್ದು’ ಎಂದಾಗಲೇ ಇಡೀ ದೇಶಕ್ಕೆ ರಾಹುಲ್ ಗಾಂಧಿಯ ಬುದ್ಧಿಮತ್ತೆಯ ಬಗ್ಗೆ ತಿಳಿದದ್ದು. ಬಹುಶಃ ಆಗಲಿಂದಲೇ ಸುಬ್ರಮಣ್ಯಂ ಸ್ವಾಮಿ ರಾಹುಲ್ ಗಾಂಧಿಗೆ ಪಪ್ಪು ಎಂದು ಕರೆಯಲು ಶುರು ಮಾಡಿದ್ದು. ಹಿಂದಿಯಲ್ಲಿ ಪಪ್ಪು ಎಂದರೆ ಪೆದ್ದ ಗುಂಡ ಎಂದು. ಇದೇ ಥರ ಆಜ್ ತಕ್ ಸಂದರ್ಶನದಲ್ಲಿ ಒಮ್ಮೆ ಮಾತನಾಡುವಾಗ ಕಾಂಗ್ರೆಸ್ ಯುವ ಕಾರ್ಯಕರ್ತೆಯರು ಮತ್ತು ಕಾರ್ಯಕರ್ತರ ಬಳಿ ಕಾಂಗ್ರೆಸ್ ಹೇಗಿದೆ ಎಂದು ಕೇಳಿದೆ, ಆಗ ತಕ್ಷಣವೇ ಮಜಾ ಬಂತು ಎಂದರು… ನಾನು ಆ ಮಜವನ್ನು ದೇಶಕ್ಕೂ ಕೊಡಬೇಕೆಂದಿದ್ದೇನೆ ಎಂದರು. ಆ ಕಾರ್ಯಕರ್ತೆಯರು ಯಾವ ಮಜದ ಬಗ್ಗೆ ಹೇಳಿದರೋ? ಯಾವ ಮಜವನ್ನು ಭಾರತ ಜನತೆಗೆ ಹಂಚಬೇಕೆಂದಿದ್ದಾರೋ? ಆ ರಾಹುಲ್ ಗಾಂಧಿಗೇ ಗೊತ್ತು. ಇಂಥ ಯುವರಾಜನನ್ನು ದೇಶದ ಪ್ರಧಾನಿ ಪಟ್ಟಕ್ಕೆ ತಗಲು ಹಾಕಲು ನೋಡಿದರಲ್ಲ!? ಭಾರತವನ್ನು ಒಂದೇ ದಿನದಲ್ಲಿ ಮುಳುಗಿಸಿಬಿಡುತ್ತಿದ್ದರು.

ರಾಜಕೀಯ ಎಲ್ಲಿದೆ ಎಂದು ಕೇಳಿದರೆ ಶರ್ಟಲ್ಲಿದೆ, ಪ್ಯಾಂಟಲ್ಲಿದೆ, ಪ್ಯಾಂಟ್ ಜಿಪ್ಪಲ್ಲಿದೆ ಎಂದೆಲ್ಲ ಉತ್ತರ ಕೊಡುವ ರಾಹುಲ್ ಗಾಂಧಿಗೆ ರಾಜಕೀಯ ಎನ್ನುವುದು ರಾಜೀವ್ ಗಾಂಧಿ ಆಣೆಗೂ ಲಾಗುವಿಲ್ಲ. ತನ್ನ ಯೋಗ್ಯತೆಯ ಬಗ್ಗೆ ರಾಹುಲ್ ಗಾಂಧಿಗೂ ಗೊತ್ತಿರಬಹದು. ಆಗಾಗ ದೀರ್ಘ ರಜೆ ತೆಗೆದುಕೊಂಡು ಸ್ವಿಜಲೆರ್ಂಡ್, ಥಾಯ್ಲೆಂಡ್ ಎಂದು ಸುತ್ತಾಡುವ ಅವರಿಗೆ ರಾಜಕೀಯ ಎಂದರೆ ಅಲರ್ಜಿ ಎಂದು ತಿಳಿದುಕೊಳ್ಳದೇ ಬೇಕಂತಲೇ ರಾಜಕೀಯಕ್ಕೆ ದೂಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಗಾರ್ಡಿನರ್ ಹ್ಯಾರಿಸ್ ಎನ್‌ಡಿಟಿವಿಯಲ್ಲಿ ಮಾತನಾಡುತ್ತಾ ರಾಹುಲ್ ಬಗ್ಗೆ ಹೇಳಿದ ಮಾತು ಕೇಳಿದರೆ ಸಾಕು ರಾಹುಲ್ ಗಾಂಧಿಯ ಬಗ್ಗೆ ಕೇವಲ ರಾಷ್ಟ್ರೀಯ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಥ ಮರ್ಯಾದೆ ಇದೆ ಎಂದು ತಿಳಿಯುತ್ತದೆ ಎಂದು. ಗಾರ್ಡಿನರ್ ಹೇಳುತ್ತಾರೆ ’ರಾಹುಲ್ ಒಬ್ಬ ರಾಜಕಾರಣಿಯೇ ಅಲ್ಲ.. ಯಾರು ಹೇಳಿದ್ದು ಆತ ರಾಜಕಾರಣಿ ಎಂದು? ಅದನ್ನು ಬಿಟ್ಟು ಇನ್ಯಾವುದಾದರೂ ದಂಧೆ ಮಾಡಿದ್ದರೆ ಚೆನ್ನಾಗಿತ್ತು. ಯಾವ ಕೋನದಿಂದಲೂ ಆತ ರಾಜಕಾರಣಿ ಎನಿಸುವುದೇ ಇಲ್ಲ. ಬರೆದಿಟ್ಟುಕೊಳ್ಳಿ, ಹೀಗೇ ರಾಹುಲ್ ಗಾಂಧಿಯನ್ನ ನಮ್ಮ ನಾಯಕ ಎಂದು ಬಿಂಬಿಸಿದ್ರೆ ಕಾಂಗ್ರೆಸ್ ಸತ್ತುಹೋಗುವುದಂತೂ ಖಂಡಿತ.’ ಎಂದರು. ಆಲೋಚಿಸಿ, ಒಬ್ಬ ನಾಯಕನ ಬಗ್ಗೆ ಆಡುವ ಮಾತಾ ಅದು? ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತನೇ ಈ ಮಾತನ್ನು ಹೇಳಿದ್ದರಿಂದ ರಾಹುಲ್ ಹಣೆಬರಹ ಇಡೀ ಪ್ರಪಂಚಕ್ಕೇ ಗೊತ್ತು ಎಂದಾಯಿತಲ್ಲ?

ಒಬ್ಬ ರಾಜಕಾರಣಿಯ ಮಗ ಎಂದರೆ ಅವನಿಗಿರಬೇಕಾದ ಗಾಂಭೀರ್ಯ, ವರ್ಚಸ್ಸು ಒಂದೂ ರಾಹುಲ್ ಗಾಂಧಿಯಲ್ಲಿಲ್ಲ. ಕಡೆ ಪಕ್ಷ ನೆಹರೂ ಥರ ಜನ ನಂಬುವ ಹಾಗೆ ಸುಳ್ಳು ಹೇಳುವುದಕ್ಕೂ ಬರುವುದಿಲ್ಲ ರಾಹುಲ್‌ಗೆ. ಮಾತೆತ್ತಿದರೆ ನನ್ನ ಅಜ್ಜಿ, ನನ್ನ ಅಜ್ಜಿ ಎಂದು ಎಲ್ಲ ಸಮಾವೇಶದಲ್ಲೂ ಅಜ್ಜಿ ಕಥೆಗಳನ್ನು ಹೇಳುವ ಇವರಿಗೆ, ಇಂದಿರಾ ಗಾಂಧಿಯ ವಾಕ್ಚಾತುರ್ಯದ 1% ಬಂದಿದ್ದರೂ ರಾಹುಲ್ ದೇಶದಲ್ಲಿ ಯುವ ಸಮೂಹವನ್ನು ತನ್ನತ್ತ ಎಳೆದುಕೊಳ್ಳಲು ಸಹಾಯವಾಗುತ್ತಿತ್ತು. ಇಂದಿರಾ ಗಾಂಧಿ ಹೇಗೆ ಮಾತಾಡುತ್ತಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ಕೇಳಿ, ಇಂದಿರಾ ಗಾಂಧಿ ಒಮ್ಮೆ ವಿಮಾನ ನಿಲ್ದಾಣಕ್ಕೆ ಬಂದ ನಂತರ ಗೊತ್ತಾಗಿದ್ದು ಅವರು ಹೊರಡುವ ವಿಮಾನ 2 ತಾಸು ವಿಳಂಬವಾಗಿದೆ ಎಂದು. ಸುಮ್ಮನೆ ವಾಪಸ್ ಹೊಗುವುದೇಕೆ ಎಂದು ಸ್ವಲ್ಪ ಹೊತ್ತು ಮಾಧ್ಯಮದವರನ್ನು ಮಾತಾಡಿಸಿ ಹೋಗೋಣ, ಎಲ್ಲರನ್ನು ಕರೆಸಿ ಎಂದರು. ತುರ್ತಾಗಿ ಪ್ರೆಸ್ ಮೀಟ್ ಕರೆದ ಕಾರಣ ಎದ್ನೋ ಬಿದ್ನೋ ಎಂದು ಓಡಿ ಬಂದ ಪತ್ರಕರ್ತರನ್ನು ಕೂರಿಸಿ ಸ್ವಲ್ಪ ಕಾಲ ಮಾತನಾಡಿ Shoot me with questions ಎಂದರು. ಎಷ್ಟೇ ಒದ್ದಾಡಿದರೂ ಪತ್ರಕರ್ತರಿಗೆ 15 ನಿಮಿಷಗಳ ಮೇಲೆ ಪ್ರಶ್ನೆ ಕೇಳುವುದಕ್ಕೇ ಆಗಿಲ್ಲ. ಕೊನೆಗೆ 15 ನಿಮಿಷಕ್ಕೆ ಪತ್ರಿಕಾಗೋಷ್ಠಿ ಮುಗಿದೇ ಹೋಯಿತು. ಅಂದರೆ, ಅವರ ಮಾತು ಅಷ್ಟು ಖಡಕ್ ಆಗಿತ್ತು. ಆದರೆ, ರಾಹುಲ್ ಗಾಂಧಿಗೆ ಪತ್ರಕರ್ತರು ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳುವುದು ದೂರದ ಮಾತಾಯಿತು, ಅವರಿಗೆ ಚಿಕ್ಕ ಮಕ್ಕಳೂ ಸಹ ಬಾಯಿಗೆ ಬಂದ ಹಾಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೂ ಉತ್ತರ ಕೊಡುವುದಕ್ಕೆ ಅಮುಲ್ ಬೇಬಿಯಂತೆ ಮುಖ ಮಾಡಿ ಕೂರುತ್ತಾರೆ. ಇದು ಗೇಲಿ ಮಾಡುವ ಮಾತೇ ಇಲ್ಲ . ಇದಕ್ಕೆ ಒಂದು ಉದಾಹರಣೆಯಿದೆ. ಇತ್ತೀಚೆಗೆ ಶಾಲೆಯೊಂದರಲ್ಲಿ ಇಂಟರ್ನೆಟ್ ಬಗ್ಗೆೆ ಮಾತನಾಡುತ್ತಿದ್ದರು. ಎಲ್ಲ ಮುಗಿಸಿ, ತಾನೂ ಇಂದಿರಾ ಗಾಂಧಿಯ ಹಾಗೆ ಎಂದು ತಮಗೆ ತಾವೇ ಭಾವಿಸಿಕೊಂಡೋ ಏನೋ ಥೇಟ್ ಇಂದಿರಾ ಥರವೇ, Shoot me with questions ಎಂದರು. ಹುಡುಗನೊಬ್ಬ ’ಇಂಟರ್ನೆಟ್‌ನಿಂದ ಹಳ್ಳಿಯ ಜನರಿಗೆ ಹೇಗೆ ಉಪಯೋಗವಾಗುವಂತೆ ಮಾಡುತ್ತೀರ? ಈಗ ಎಷ್ಟೋ ಕಡೆ ಇಂಟೆರರ್ನೆಟ್ ಇಲ್ಲವಲ್ಲ. ಹೇಗೆ ಒದಗಿಸಬೇಕೆಂದಿದ್ದೀರ?’ ಎಂದು ಕೇಳಿದ. ಅದಕ್ಕೆೆ ಉತ್ತರಿಸುತ್ತಾ ನೀನು ಹೇಗೆ ಅದನ್ನು ಸರಿಪಡಿಸುತ್ತೀಯಾ ಹೇಳು ಎಂದರು. ಕೊನೆಗೆ ಹುಡುಗ ’ನನಗೆ ಉತ್ತರ ಗೊತ್ತಿದ್ದರೆ ನಿಮ್ಮನ್ನೇಕೆ ಕೇಳುತ್ತಿದ್ದೆ? ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ, ಆಮೇಲೆ ನಿಮಗೆ ಉತ್ತರಿಸುತ್ತೇನೆ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ಟ. ಕೊನೆಗೆ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಬೇರೆ ಯಾವುದೋ ಕಥೆ ಹೇಳಿ ಜೈ ಎಂದುಬಿಟ್ಟರು. ಸಣ್ಣ ಹುಡುಗರ ಒಂದು ಪ್ರಶ್ನೆಗೂ ಉತ್ತರ ಕೊಡಲು ಆಗದ ಆಸಾಮಿಯೆಲ್ಲ ಕಾಂಗ್ರಸ್‌ನ ಉಪಾಧ್ಯಕ್ಷರು. ಸಧ್ಯ ನಮ್ಮ ಪುಣ್ಯಕ್ಕೆ ರಾಹುಲ್ ಪ್ರಧಾನಿಯಾಗಲಿಲ್ಲ.

ಗಾರ್ಡಿನರ್ ಹೇಳಿದಂತೆ ರಾಹುಲ್ ಗಾಂಧಿಯೊಬ್ಬ ರಾಜಕಾರಣಿ ಎಂದು ಒಪ್ಪಲು ಸಾಧ್ಯವೇ ಇಲ್ಲ. ಪತ್ರಿಕೋದ್ಯಮ ವಲಯದಲ್ಲಂತೂ ರಾಹುಲ್ ಗಾಂಧಿ ಭಾಷಣ ಎಂದರೆ ಏನಾದ್ರೂ ಕಾಮಿಡಿ ಇದ್ದೇ ಇರುತ್ತೆ ಎನ್ನುವಂತಾಗಿದೆ. ರಾಹುಲ್ ಬರುತ್ತಾರೆಂದು ತಿಳಿದರೆ ಸಾಕು ಹೇಗಾದರೂ ಮಾಡಿ ಸ್ಟುಡಿಯೋಗೆ ಕರೆತರುವ ಪ್ಲಾನ್ ಮಾಡಿಯೇ ಬಿಡುತ್ತಾರೆ. ಹೀಗೆ ಪ್ಲಾನ್ ಮಾಡಿ ಕರೆಸಿದ್ದು ಟೈಮ್ಸ್ ನೌ ಚಾನೆಲ್ಲಿನ ಅರ್ನಬ್ ಗೋಸ್ವಾಮಿ. ಸಂದರ್ಶನಕ್ಕೆ ಬರುವಾಗ ರಾಹುಲ್ ಏನೋ ಸಾಧಿಸುತ್ತೇನೆ ಎಂಬಂತೆ ಬಂದಿದ್ದರು, ಎಲ್ಲಿ ಅರ್ನಬ್‌ರ ದಾಳಿಗೆ ಒಳಗಾದರೋ . ಒಂದು ತಾಸಿನ ಸಂದರ್ಶನದಲ್ಲಿ ಹೇಳಿದ್ದು ಒಂದೇ ಆರ್‌ಟಿಐ, ಸ್ತ್ರೀ ಸಬಲೀಕರಣ, ಪಾರದರ್ಶಕ ಆಡಳಿತ ಮತ್ತು ಯುವ ಸಬಲೀಕರಣ. ರಾಹುಲ್ ಮೋದಿ ಬಗ್ಗೆ ಹೇಳಿ ಅಂದ್ರೂ ಈ ನಾಲ್ಕು ಕ್ಯಾಸೆಟ್ ಹಾಕಿ ಕೂರುತ್ತಿದ್ದರು. ರಾಹುಲ್ ಸ್ಥಿತಿ ಚಿರತೆಗೆ ಸಿಕ್ಕಿದ 40 ವರ್ಷದ ಕುರಿಮರಿಯ ಹಾಗಾಗಿತ್ತು. ಚುನಾವಣೆಯ ಸ್ವಲ್ಪ ತಿಂಗಳ ಹಿಂದೆ ಈ ಸಂದರ್ಶನ ಮಾಡಿದ್ದರಿಂದ ಕಾಂಗ್ರೆೆಸ್‌ಗೆ ಇದು ಮುಳುವಾಯಿತು. ರಾಜಕಾರಣಿ ಪಪ್ಪು, ಕಾಮಿಡಿ ಪಪ್ಪು ಆಗಿ ಫೇಮಸ್ ಆಗಿದ್ದು.
ಇವರ ಕಾಮಿಡಿ ಶೋ ಬೆಂಗಳೂರಿನಲ್ಲೂ ಆಗಿದೆ. ಎಮ್‌ಸಿಸಿ ಕಾಲೇಜ್‌ನಲ್ಲಿ ಸ್ವಚ್ಛ ಭಾರತ ಕೆಲಸ ಮಾಡುತ್ತಿದೆಯೇ? ಎಂದು ಕೇಳಿದರು, ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯೇ ಎಂದು ಕೇಳಿದರು ಎಲ್ಲವಕ್ಕೂ ಯೆಸ್ ಎಂದರು ಹುಡುಗಿಯರು. ಇಷ್ಟಕ್ಕೇ ಸುಮ್ಮನಿರದ ರಾಹುಲ್ ನಂಗೇಕೋ ’ಹೌದಾ, ನಂಗೇಕೋ ಹಾಗೆನಿಸುತ್ತಿಲ್ಲ’ ಎಂದಾಗ ಹುಡುಗಿಯರೆಲ್ಲರೂ ಹೊಟ್ಟೆ ಹಿಡಿದು ನಕ್ಕರು.

ಕಾಂಗ್ರೆಸ್‌ನವರಿಗೆ ಇನ್ನೂ ಕಾಲ ಮಿಂಚಿಲ್ಲ, ಆಲೋಚನೆ ಮಾಡಿ… ರಾಹುಲ್ ಗಾಂಧಿ ಗಂಭೀರವಾಗಿ ಚಿಂತಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಕಾಂಗ್ರೆಸ್ ನಾಯಕರಂತೂ ರಾಹುಲ್ ಬಗ್ಗೆ ಗಂಭೀರವಾಗಿ ಚಿಂತಿಸಲೇ ಬೇಕು. ರಾಹುಲ್‌ಗೇನೋ ಮದುವೆಯಾಗಿಲ್ಲ ಹುಡುಗಾಟಿಕೆ, ಸಂಸಾರಸ್ಥ ನಾಯಕಾದ್ರೂ ಆಲೋಚಿಸಬೇಕು!

2 thoughts on “ರಾಹುಲ್ ಗಾಂಧಿ ಕಾಂಗ್ರೆಸಿನ ಉಪಾಧ್ಯಕ್ಷರೋ? ವಿದೂಷಕರೋ?

  1. esN9c5 This unique blog is really interesting as well as diverting. I have picked up a lot of handy tips out of this amazing blog. I ad love to return every once in a while. Thanks a lot!

Leave a Reply to crorkservice Cancel reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya